ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತದಲ್ಲೂ ಜಯಿಸಲಿದೆ: ಭೂಪೇಂದ್ರ ಯಾದವ್

2 years ago

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ರಣಕಹಳೆ ಮೊಳಗಿಸಿದೆ. ರಾಜ್ಯದಲ್ಲಿ ಈ ಬಾರಿ ಅತ್ಯಧಿಕ ಸ್ಥಾನಗಳಿಸಲು ಸಂಕಲ್ಪ ಮಾಡಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಹೋರಾಟಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಿರ್ಧರಿಸಿದೆ.

ಕೇಂದ್ರದ ಸರ್ಕಾರದ ಕಾರ್ಯಕ್ರಮಗಳನ್ನು ಮನೆ– ಮನೆಗೆ ತಲುಪಿಸಲು ತೀರ್ಮಾನಿಸಲಾಗಿದೆ. ಮೋದಿಯವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವನ್ನು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎಂಬುದನ್ನು ಸಾಬೀತು ಪಡಿಸಲು ಕಾರ್ಯಕಾರಿಣಿ ನಿರ್ಧರಿಸಿದೆ.

ಬಿಜೆಪಿಯ ತತ್ವ, ಸಿದ್ಧಾಂತ ಒಪ್ಪಿ ಬರುವ ಯಾವುದೇ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕು. ರಾಜ್ಯ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಅಸಮಾಧಾನದ ಲಾಭ ಪಡೆಯಬೇಕು ಎಂದು ತೀರ್ಮಾನಿಸಲಾಗಿದೆ.

ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರಿಗೆ ವಂಚಿಸುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದರು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ಗೆ ಆತ್ಮವಿಶ್ವಾಸವೇ ಇಲ್ಲವಾಗಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರದ ಬೆಳವಣಿಗೆಯಿಂದ ಕಾಂಗ್ರೆಸ್ ಇನ್ನಷ್ಟು ಕುಗ್ಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತದಲ್ಲೂ ಜಯಿಸಲಿದೆ. ಬಳಿಕ ರಾಜ್ಯದಲ್ಲಿ ಕಮಲ ಅರಳುವುದು ಗ್ಯಾರಂಟಿ. ಹತ್ತು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ ರೈಲ್ವೆ, ಹೆದ್ದಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ನಮಗೆ ಮೋದಿಯೇ ಗ್ಯಾರಂಟಿ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಲೋಕಸಭಾ ಸಮರ ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ. 2019 ರಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಇದು ಜನರ ಸಂಕಲ್ಪ ಶಕ್ತಿಯಾಗಿತ್ತು. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದರು.

ಜನರಿಗೆ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಲಹದಲ್ಲಿ ತೊಡಗಿದೆ. ಇವರ ಕಚ್ಚಾಟದಿಂದ ಅಧಿಕಾರ ಕುಸಿದುಬಿದ್ದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ನಡುವೆಯೂ ಅವರು ದುರ್ಮಾರ್ಗದಲ್ಲಿ ಮತ ಗಳಿಸುವ ಕುತಂತ್ರ ನಡೆಸಿದ್ದಾರೆ. ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡುವ ಸವಾಲು ನಮ್ಮ ಮುಂದಿದೆ. ಜನ ಈ ಸರ್ಕಾರದ ಬಗ್ಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಈ ಸರ್ಕಾರಕ್ಕೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ನಮ್ಮ ಮುಂದಿರುವ ಗುರಿ ಲೋಕಸಭಾ ಚುನಾವಣೆ. ಈ ಚುನಾವಣೆ ಬಂದು ಮುಗಿಯುವವರೆಗೂ ನಾವು ವಿಶ್ರಾಂತಿ ಪಡೆಯುವಂತಿಲ್ಲ. ಮನೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಉದ್ಭವಿಸಬಾರದು ಎಂದರು.

ನಮ್ಮ ಎದುರಾಳಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ, ನಮ್ಮ ಸಾಧನೆಗಳನ್ನು ಜನರ ಮುಂದಿಟ್ಟು, ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮ ಹಾಕಬೇಕಾಗಿದೆ. ಒಂದು ದಿನವೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ, ನಮ್ಮ ಪ್ರಧಾನಮಂತ್ರಿಗಳು ದೇಶದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಈ ಮೂಲಕ ಇವತ್ತು ಭಾರತವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ, ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ ಎಂದರು.

ರಾಜ್ಯದ ಕಾಂಗ್ರೆಸ್ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ರೈತರು ಭೀಕರ ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೂಡ ಅದು ಎಚ್ಚತ್ತಿಲ್ಲ ಎಂದರು.

Leave a Reply