ಬೆಂಗಳೂರು: ಹಾವೇರಿಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ತನಿಖೆಗೆ ಎಸ್ ಐಟಿ ರಚಿಸುವಂತೆ ಆಗ್ರಹಿಸಿ ಜನವರಿ 20 ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಲ್ಲಿ ನೈತಿಕ ಪೊಲಿಸ್ ಗಿರಿ ಹೆಸರಲ್ಲಿ ನಡೆದ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಇದಕ್ಕೆ ಕರ್ತವ್ಯ ಲೋಪದ ಹೆಸರಲ್ಲಿ ಹಾನಗಲ್ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿರುವುದೇ ಸಾಕ್ಷಿ. ಹೀಗಾಗಿ ಪ್ರಕರಣದ ಬಗ್ಗೆ ತನಿಖೆಗೆ ಎಸ್ಐಟಿ ರಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಆಡಳಿತದಲ್ಲಿ ರಾಜಕಾರಣ ಬಹಳ ಪಾತ್ರ ವಹಿಸುತ್ತಿದೆ. ಹಾನಗಲ್ ಪೊಲಿಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದರು.
ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಸಿಎಂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಎಸ್ ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಜನವರಿ 20 ರಂದು ಹಾವೇರಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಫೋಬಿಯಾ ಇದೆ. ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷ ಆಡಳಿತ ನೀಡುತ್ತಿದ್ದಾರೆ. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮತ್ತೆ ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲಾಗದೇ ಸಿದ್ದರಾಮಯ್ಯ ಅವರ ವಿರುದ್ದ ಅನಗತ್ಯ ಆರೋಪ ಮಾಡುತ್ತಾರೆ ಎಂದರು.




