ಬೆಂಗಳೂರು: ವಿಧಾನಸಭೆ ಚುನಾವಣೆಯ ಸೋಲಿನ ನಂತರ ಎಚ್ಚೆತ್ತುಕೊಂಡಿರುವ ಬಿಜೆಪಿ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಿಂಗಳ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸಿದ್ಧತೆ ನಡೆಸಿದೆ.
ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ರಣತಂತ್ರದ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಅಷ್ಟರೊಳಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಹಾಲಿ ಸದಸ್ಯರೂ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾಡಿದ ಎಡವಟ್ಟು ಈ ಬಾರಿ ಪುನರಾವರ್ತನೆ ಆಗಬಾರದು. ಗೆಲುವು ಒಂದನ್ನೇ ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದು ಸೂಚಿಸಿರುವುದಾಗಿ ಪಕ್ಷದ ಉನ್ನತಮೂಲಗಳಿಂದ ಗೊತ್ತಾಗಿದೆ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, 2024ರ ಚುನಾವಣೆಯಲ್ಲಿ ಕೆಲವು ಸದಸ್ಯರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ವಯಸ್ಸಿನ ಕಾರಣದಿಂದ ಕೆಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿರುವುದರಿಂದ ಒಂದೊಂದು ಕ್ಷೇತ್ರಕ್ಕೆ 5ಕ್ಕೂ ಹೆಚ್ಚು ಸಂಭವನೀಯರ ಪಟ್ಟಿಯನ್ನು ಕಳುಹಿಸುವ ನಿರೀಕ್ಷೆಯಿದೆ.
ಚಿಕ್ಕಬಳ್ಳಾಪುರದಿಂದ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಬಿಜೆಪಿ ಹೊಸ ಅಭ್ಯರ್ಥಿಯನ್ನು ಸಜ್ಜುಗೊಳಿಸಬೇಕಿದೆ. ಮಾಜಿ ಸಚಿವ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೂ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದಲೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ತುಮಕೂರಿನಲ್ಲಿ ಹಾಲಿ ಸಂಸದ ಬಸವರಾಜು ರಾಜಕೀಯ ನಿವೃತ್ತಿ ಘೋಷಣೆ ಮಾಡಿಸಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಬ್ಬಾಕ ರವಿ ಸದ್ಯಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಇನ್ನು ಬಳ್ಳಾರಿಯಲ್ಲೂ ಹಾಲಿ ಸಂಸದ ದೇವೇಂದ್ರಪ್ಪ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್, ಹಾವೇರಿಯ ಶಿವಕುಮಾರ್ ಉದಾಸಿ, ಬೆಳಗಾವಿಯ ಮಂಗಳ ಅಂಗಡಿ, ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪಧಿಸುವುದಿಲ್ಲ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದಾರೆ. ಆದ್ದರಿಂದ ಸುಮಾರು 8 ರಿಂದ 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಜವಾಬ್ದಾರಿ ಬಿಜೆಪಿ ಮೇಲಿದೆ.
ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದಗೌಡ ಈ ಮೊದಲು ಸ್ಪಸುವುದಿಲ್ಲ ಎಂದಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊನೆ ಕ್ಷಣದವರೆಗೂ ಇಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲವಾಗಿಯೇ ಉಳಿಯಲಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಹಾಲಿ ಸಂಸದ ಪಿ.ಸಿ.ಮೋಹನ್ಗೆ ಟಿಕೆಟ್ ಕೊಡುವ ಬಗ್ಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಆದರೆ ಈಗ ಬಿಜೆಪಿ ಸಂಪೂರ್ಣವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತೊಮ್ಮೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯೂ ಇದೆ.
ಮಂಗಳೂರು ಕ್ಷೇತ್ರದಿಂದ ನಳಿನ್ಕುಮಾರ್ ಕಟೀಲ್ಗೂ ಟಿಕೆಟ್ ಕೈತಪ್ಪುವ ಸಾಧ್ಯತೆಗಳೇ ಹೆಚ್ಚಾಗಿವೆ. ಮಾಜಿ ಸಚಿವ ನಾಗರಾಜ್ ಶೆಟ್ಟಿ ಹಾಗೂ ಸಂಘ ಪರಿವಾರದ ಅರುಣ್ ಕುಮಾರ್ ಪುತ್ತಿಲ ಹೆಸರುಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಹಾಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ, ಚಿಕ್ಕಮಗಳೂರು ಕ್ಷೇತ್ರವನ್ನು ಬದಲಾಯಿಸಲಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.
ಉತ್ತರ ಕನ್ನಡದಿಂದ ಅನಂತಕುಮಾರ್ ಹೆಗ್ಡೆಯವರಿಗೆ ಟಿಕೆಟ್ ಕೊಡುವ ಬಗ್ಗೆಯೂ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದೂ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಅವರಿಗೆ ಟಿಕೆಟ್ ನಿರಾಕರಿಸಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕವೂ ಪಕ್ಷದ ಮಟ್ಟದಲ್ಲಿದೆ.
ಇನ್ನು ಬಾಗಲಕೋಟೆಯಿಂದ ಗದ್ದಿಗೌಡರ್, ನನಗೆ ಟಿಕೆಟ್ ಬೇಡ ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದ ಸ್ಪರ್ಧೆಗೆ ಹಿಂದೇಟು ಹಾಕಿರುವುದರಿಂದ ಪಕ್ಷಕ್ಕೆ ಹೊಸ ಅಭ್ಯರ್ಥಿಗಳನ್ನು ಹುಡುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.




