ಕೇಂದ್ರ ಸೇವೆಗೆ ರಾಜ್ಯ ಪೊಲೀಸ್‌ ಇಲಾಖೆಯ 28 ಐಪಿಎಸ್‌ ಅಧಿಕಾರಿಗಳು ನಿಯೋಜನೆ

2 years ago

ಕೇಂದ್ರ ಗೃಹ ಇಲಾಖೆ ಸೂಚನೆ

ಬೆಂಗಳೂರು: ಐಪಿಎಸ್ ಅಧಿಕಾರಿಗಳು ಆಯಕಟ್ಟಿನ ಹುದ್ದೆ ಬಯಸುವುದು ಸಹಜ. ಇದಕ್ಕಾಗಿ ಅವರು ಅಧಿಕಾರಸ್ಥ ರಾಜಕಾರಣಿಗಳ ಶಿಫಾರಸುಗಳನ್ನು ಪಡೆಯಲು ಪರದಾಡುತ್ತಾರೆ. ಅದರಲ್ಲೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳು ಎಂದರೆ ಇವರಿಗೆ ಅತ್ಯಂತ ಆಕರ್ಷಣೆ.

ಹೀಗಾಗಿ ಯಾರೂ ಕೂಡ ಕೇಂದ್ರ ಸರ್ಕಾರದ ಸೇವೆಗೆ‌ ತೆರಳಲು ಬಯಸುವುದಿಲ್ಲ. ಈಗ‌ ಕೇಂದ್ರ ಸರ್ಕಾರದಲ್ಲಿ ಹಲವು ಐಪಿಎಸ್ ಹುದ್ದೆಗಳು ಖಾಲಿ ಇವೆ. ಇದರಿಂದ ದೈನಂದಿನ ಆಡಳಿತದಲ್ಲಿ ಸಾಕಷ್ಟು ತೊಂದರೆಯಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಇಲಾಖೆ, ಕೇಂದ್ರ ಸೇವೆಗೆ ರಾಜ್ಯ ಪೊಲೀಸ್‌ ಇಲಾಖೆಯ 28 ಐಪಿಎಸ್‌ ಅಧಿಕಾರಿಗಳು ನಿಯೋಜನೆಗೊಳ್ಳಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಕೇಂದ್ರ ಸೇವೆಗೆ ನಿಯೋಜನೆಗೊಂಡಿರುವ 28 ಐಪಿಎಸ್‌ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಹೇಳಿದೆ. ಈ ನಡೆ ಇದೀಗ ಚರ್ಚೆಗೆ ಕಾರಣವಾಗಿದೆ.

ಐಪಿಎಸ್‌ ಅಧಿಕಾರಿಗಳಾದ ನಿಮಿತ್‌ ಗೋಯಲ್‌, ಬಿ.ಎಂ. ಲಕ್ಷ್ಮೀಪ್ರಸಾದ್‌, ನಿಕ್ಕಂ ಪ್ರಕಾಶ್‌ ಅಮಿತ್‌, ಇಲಾಕಿಯಾ ಕರುಣಾಕರನ್‌, ಡಾ. ಭೀಮಾಶಂಕರ ಗುಳೇದ, ರಾಹುಲ್‌ ಕುಮಾರ್‌ ಶಹಾಪುರವಾಡ್‌, ಧರ್ಮೇಂದ್ರಕುಮಾರ್‌ ಮೀನಾ, ಉಳಿದಂತೆ ಕೆಎಸ್‌ಪಿಎಸ್‌ನಿಂದ ಮುಂಬಡ್ತಿ ಹೊಂದಿದ ಐಪಿಎಸ್‌ ಅಧಿಕಾರಿಗಳಾದ ಸಿ.ಬಿ. ವೇದಮೂರ್ತಿ, ಶ್ರೀನಾಥ್‌ ಜೋಶಿ, ಗಿರೀಶ್‌, ದೇವರಾಜ್‌ ಸೇರಿ 21 ಕರ್ನಾಟಕ ಮೂಲದ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 215 ಐಪಿಎಸ್‌ ಹುದ್ದೆಗಳಿದ್ದು, ಈ ಪೈಕಿ 150 ಅಧಿಕಾರಿಗಳು ನೇರವಾಗಿ ಭಾರತೀಯ ಪೊಲೀಸ್‌ ಸೇವೆಯಿಂದ ಆಯ್ಕೆಯಾಗಿದ್ದಾರೆ. 65 ಅಧಿಕಾರಿಗಳು ಕೆಎಸ್‌ಪಿಎಸ್‌ನಿಂದ ಐಪಿಎಸ್‌ಗಳಾಗಿ ಬಡ್ತಿ ಪಡೆದಿದ್ದಾರೆ. 215 ಐಪಿಎಸ್‌ ಅಧಿಕಾರಿಗಳ ಪೈಕಿ ಶೇ 40 ರಷ್ಟು ಅಂದರೆ 46 ಅಧಿಕಾರಿಗಳು ಕೇಂದ್ರ ಸೇವೆಗೆ ತೆರಳಬೇಕೆಂಬ ನಿಯಮವಿದೆ. ಆದರೆ, ಸದ್ಯ 14 ಅಧಿಕಾರಿಗಳಷ್ಟೇ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 28 ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಬರುವಂತೆ ಸೂಚಿಸಲಾಗಿದೆ. ಆದರೆ ಹಲವು ಅಧಿಕಾರಿಗಳು ಕೇಂದ್ರ ಸೇವೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಇವೆ.

Leave a Reply