ರಾಜ್ಯ ಬಿಜೆಪಿಗರಿಗೆ ಜೆಡಿಎಸ್ ಅಪಥ್ಯವೇಕೆ? ಇಲ್ಲಿವೆ ಎರಡು ಕಾರಣಗಳು…

2 years ago

ಬಿಜೆಪಿ ಜೊತೆಗೆ ಮೈತ್ರಿಯಾದಾಗಿನಿಂದಲೂ ಜೆಡಿಎಸ್ ನಾಯಕರು ಮತ್ತು ರಾಜ್ಯ ಬಿಜೆಪಿ ನಾಯಕರ ನಡುವೆ ತಾಳಮೇಳ ಕುದುರಿಲ್ಲ. ಸೀಟು ಹಂಚಿಕೆ ವಿಚಾರವಾಗಿ ದೇವೇಗೌಡರ ಕುಟುಂಬ ಗೋವಾದ ಸಿಎಂ ಸಾವಂತ್‌ರ ಮೂಲಕ ನೇರವಾಗಿ ಹೈಕಮಾಂಡನ್ನು ಎಡತಾಕುತ್ತಿದೆಯೇ ವಿನಾ, ರಾಜ್ಯ ನಾಯಕರ ಜೊತೆ ಒಂದೇ ಒಂದು ಗಂಭೀರ ಚರ್ಚೆ ನಡೆಸಿಲ್ಲ.

ಹಾಗೆ ನೋಡಿದರೆ, ಕರ್ನಾಟಕದ ಬಿಜೆಪಿಯ ಲೀಡರುಗಳನ್ನು ಸಂಪೂರ್ಣ ಹೊರಗಿಟ್ಟು ಆ ಪಕ್ಷದ ಹೈಕಮಾಂಡ್ ಮಾಡಿಕೊಂಡ ಮೈತ್ರಿ ಇದು. ಅನಿವಾರ್ಯವಾಗಿ ಒಪ್ಪಿಕೊಂಡಂತೆ ಇಲ್ಲಿನ ನಾಯಕರು ನಟಿಸುತ್ತಿದ್ದಾರಷ್ಟೆ. ಹೀಗೆ ಒಳಗಿಂದೊಳಗೆ ರಾಜ್ಯ ಬಿಜೆಪಿ ನಾಯಕರು ಈ ಮೈತ್ರಿಯನ್ನು ವಿರೋಧಿಸಲು ಎರಡು ಮುಖ್ಯ ಕಾರಣಗಳಿವೆ.

ಮೊದಲನೆಯದಾಗಿ, ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಒಕ್ಕಲಿಗ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಬಿಜೆಪಿ ಹೈಕಮಾಂಡ್ ಮತ್ತು ಸಂಘ ಪರಿವಾರ ಈ ಮೈತ್ರಿಗೆ ಸಮ್ಮತಿ ಸೂಚಿಸಿವೆ. ಇದೇ ಯಡಿಯೂರಪ್ಪನವರ ಬಣವನ್ನೂ ಒಳಗೊಂಡಂತೆ ಬಹಳಷ್ಟು ಬಿಜೆಪಿ ನಾಯಕರಿಗೆ ಇರಿಸು-ಮುರಿಸಾಗಿರೋದು.

ಕರ್ನಾಟಕ ರಾಜಕಾರಣದ ಮಟ್ಟಿಗೆ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳು ನಿರ್ಣಾಯಕ ಎಂಬ ನಂಬಿಕೆ ಇವತ್ತಿಗೂ ಇದೆ. ಇದುವರೆಗೆ, ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತರು ಬಿಜೆಪಿ ಪರವಾಗಿಯೂ, ದೇವೇಗೌಡರ ಕುಟುಂಬದ ಕಾರಣಕ್ಕೆ ಒಕ್ಕಲಿಗರು ಜೆಡಿಎಸ್ ಪರವಾಗಿಯೂ ಹಂಚಿಹೋಗಿದ್ದಾರೆ ಎಂಬ ‘ಪೊಲಿಟಿಕಲ್ ಮಿಥ್’ ಅನ್ನು ಕಟೆದು ನಿಲ್ಲಿಸಲಾಗಿದೆ. ಈ ಮಿಥ್ ಎಲ್ಲಿಯವರೆಗೆ ಅಸ್ತಿತ್ವದಲ್ಲಿರುವುದೋ ಅಲ್ಲಿಯವರೆಗೆ ಯಡಿಯೂರಪ್ಪನವರನ್ನೂ ಒಳಗೊಂಡಂತೆ ಲಿಂಗಾಯತ ಸಮುದಾಯದ ನಾಯಕರ ಮರ್ಜಿಯಲ್ಲೇ ಬಿಜೆಪಿ ಇರಬೇಕಾಗುತ್ತದೆ. ಅವರನ್ನು ನಿರ್ಲಕ್ಷಿಸಲು ಮಾಡಿದ ಪ್ರಯತ್ನಗಳೆಲ್ಲವೂ ಬಿಜೆಪಿಗೆ ದುಬಾರಿಯಾದದ್ದನ್ನು ನಾವು ಗಮನಿಸಬಹುದು. ಬಿ.ಎಲ್.ಸಂತೋಷ್ ಎಂಬ ಷಡ್ಯಂತ್ರಪುರುಷನ ಹೊರತಾಗಿಯೂ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದೊದಗಿದ್ದು ಕೂಡಾ ಇದೇ ‘ಮಿಥ್’ನ ಕಾರಣಕ್ಕೆ. ಈಗ ಲಿಂಗಾಯತರಿಗೆ ರಾಜಕೀಯ ಪ್ರತಿಸ್ಪರ್ಧಿ ಸಮುದಾಯ ಎನಿಸಿಕೊಂಡ ಒಕ್ಕಲಿಗರನ್ನೂ ಬಿಜೆಪಿ ತನ್ನತ್ತ ಸೆಳೆದುಕೊಂಡರೆ, ಮುಂದೆ ಪಕ್ಷದಲ್ಲಿ ಲಿಂಗಾಯತ ನಾಯಕರ ಹಿಡಿತ ಸಡಿಲವಾಗಿ ಆಮದು ನಾಯಕರ ದಬ್ಬಾಳಿಕೆಗೆ ತುತ್ತಾಗಬಹುದು ಎಂಬುದು ಉತ್ತರ ಕರ್ನಾಟಕದ ಬಹುಪಾಲು ರಾಜಕಾರಣಿಗಳ ಆತಂಕ. ಅದಕ್ಕೇ ಲಿಂಗಾಯತ ಲೀಡರುಗಳು ಜೆಡಿಎಸ್ ಅನ್ನು ಅಸಮಾಧಾನದಿಂದ ನೋಡುತ್ತಿದ್ದಾರೆ.

ಇನ್ನು, ಈ ಮೈತ್ರಿಯಿಂದ ಬಿಜೆಪಿಯೊಳಗಿನ ಒಕ್ಕಲಿಗ ನಾಯಕರ ಭವಿಷ್ಯವೇ ಡೋಲಾಯಮಾನಕ್ಕೆ ತುತ್ತಾಗಿರೋದು ಎರಡನೇ ಕಾರಣವಾಗಿ ನಮ್ಮ ಗಮನ ಸೆಳೆಯುತ್ತದೆ. ಜೆಡಿಎಸ್ ಜೊತೆಗಿನ ಮೈತ್ರಿಗೆ ಪೂರ್ವದಲ್ಲಿಯೇ ಒಕ್ಕಲಿಗ ಮತಗಳನ್ನು ತನ್ನ ಕಮ್ಯುನಲ್ ಅಜೆಂಡಾದ ಮೂಲಕ ತನ್ನತ್ತ ಸೆಳೆಯಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿತ್ತು. ಅಶ್ವತ್ಥನಾರಾಯಣರನ್ನು ಡಿಸಿಎಂ ಮಾಡಿದ್ದಾಗಲಿ, ಉರೀಗೌಡ-ನಂಜೇಗೌಡ ಕಟ್ಟುಕತೆಗಳನ್ನು ತೇಲಿಬಿಟ್ಟಿದ್ದಾಗಲಿ ಎಲ್ಲವೂ ಆ ತಂತ್ರದ ಭಾಗಗಳೇ ಆಗಿದ್ದವು. ಆದರೆ ಅವ್ಯಾವುವೂ ಹೇಳಿಕೊಳ್ಳುವಷ್ಟು ಬಿಜೆಪಿಯ ಕೈ ಹಿಡಿಯಲಿಲ್ಲ. ಅದಕ್ಕೆ ಕಾರಣ, ಜಾತಿಯ ಐಡೆಂಟಿಟಿಯನ್ನು ಮುಂದಿಟ್ಟುಕೊಂಡು ಸಮುದಾಯದ ಮೇಲೆ ಪ್ರಭಾವ ಬೀರಬಲ್ಲ ಒಬ್ಬನೇ ಒಬ್ಬ ಒಕ್ಕಲಿಗ ನಾಯಕ ಬಿಜೆಪಿಯೊಳಗೆ ಇಲ್ಲದೇ ಇರುವುದು.

ಆದಾಗ್ಯೂ ಒಕ್ಕಲಿಗ ಜಾತಿಯ ಕಾರಣಕ್ಕೆ ಕೆಲವು ನಾಯಕರುಗಳಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಬಿಜೆಪಿಗಿತ್ತು. ಹಾಗಾಗಿಯೇ ಕನಕಪುರದಲ್ಲಿ ಕನಿಷ್ಠ ಠೇವಣಿಯನ್ನೂ ಉಳಿಸಿಕೊಳ್ಳಲಾರದ ಆರ್ ಅಶೋಕ್, ತನ್ನ ಕ್ಷೇತ್ರದಲ್ಲಿ ಗೆಲ್ಲಲಾರದ ಸಿ.ಟಿ.ರವಿ, ಸಮುದಾಯದ ಮೇಲೆ ಪ್ರಭಾವ ಬೀರಲಾರದ ಅಶ್ವಥ್ ನಾರಾಯಣ, ಕೇಂದ್ರ ಮಂತ್ರಿಗಿರಿಯನ್ನು ಉಳಿಸಿಕೊಳ್ಳಲಾರದ ಸದಾನಂದ ಗೌಡ ಮೊದಲಾದವರು ಬಿಜೆಪಿಯಲ್ಲಿ ಇದುವರೆಗೆ ನಿರಾಯಾಸವಾಗಿ ಅಧಿಕಾರ ಮತ್ತು ಪ್ರಾಧಾನ್ಯತೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಆದರೆ ಈಗ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಒಕ್ಕಲಿಗ ಮತಗಳನ್ನು ಸೆಳೆಯಲು ದೇವೇಗೌಡರ ಕುಟುಂಬವೇ ಸಾಕು ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದುಬಿಟ್ಟರೆ, ಈ ಎಲ್ಲಾ ನಾಯಕರು ಹಂತಹಂತವಾಗಿ ಮೂಲೆಗುಂಪಾಗಬೇಕಾಗುತ್ತದೆ. ಈ ಕಾರಣಕ್ಕೆ ಬಿಜೆಪಿ ಒಕ್ಕಲಿಗ ನಾಯಕರು ಜೆಡಿಎಸ್ ಅನ್ನು ಗುಮಾನಿಯಿಂದ ನೋಡುತ್ತಿದ್ದಾರೆ.

ಈ ಎರಡು ಕಾರಣಗಳಿಂದಾಗಿ, ಜೆಡಿಎಸ್ ಗೆ ರಾಜ್ಯಮಟ್ಟದ ಬಿಜೆಪಿ ನಾಯಕರಿಂದ ಹೇಳಿಕೊಳ್ಳುವಂತಹ‌ ಸ್ವಾಗತ ಸಿಗುತ್ತಿಲ್ಲ. ಲೋಕಸಭಾ ಚುನಾವಣೆಯ ವೇಳೆಗೆ ಈ ಒಳಬೇಗುದಿ ಮೈತ್ರಿಗೆ ಒಳೇಟು ಕೊಡುವಷ್ಟು ಉಲ್ಬಣವಾದರೆ ಅಚ್ಚರಿಯಿಲ್ಲ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು.

  • ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply