ವಿಧಾನಸೌಧ ಎದುರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

2 years ago

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲೇ ಮುಸ್ಲಿಂ ಕುಟುಂಬವೊಂದು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಜಗಜೀವನರಾಮ ನಗರದ ನಿವಾಸಿ ಶಾಯಿಸ್ತಾ ಬಾನು (48) ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ ವೇಳೆ ಪೊಲೀಸರು ಹಾಗೂ ದಂಪತಿ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಕೊನೆಗೆ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿಯನ್ನು ತಡೆದಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಶಾಯಿಸ್ತಾ ದಂಪತಿಗೆ ಸೇರಿದ 3 ಕೋಟಿ ರೂ. ಕಟ್ಟಡವನ್ನು ಕೇವಲ 1.41 ಕೋಟಿ ರೂ.ಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು. ಕಳೆದ ಎರಡು ವರ್ಷಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಗೆ ಅಲೆಯುತ್ತಿದ್ದೇವೆ. ನಮಗೆ ಜಮೀರ್ ಅವರು ನ್ಯಾಯ ಕೊಡಿಸಿಲ್ಲ ಎಂದು ದಂಪತಿ ಆರೋಪಿಸಿದರು.

2016ರಲ್ಲಿ ಶುಂಠಿ ಬೆಳೆಯಲು ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್ ನಿಂದ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದೆವು. ಅಂದಿನಿಂದ ಈ ವರೆಗೆ ಬಡ್ಡಿ ಸೇರಿ 90 ಲಕ್ಷ ರೂ. ಮರುಪಾವತಿಸಿದ್ದೇವೆ. ಆರ್ಥಿಕ ಸಮಸ್ಯೆಯಾಗುತ್ತಿದ್ದ ಕಾರಣ ಬಡ್ಡಿ ದರ ಕಡಿಮೆ ಮಾಡಿಸಿಕೊಡುವಂತೆ ಸಚಿವ ಜಮೀರ್ ಅಹ್ಮರ್ ಅವರ ಬಳಿ ಹೋಗಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಬ್ಯಾಂಕ್‌ನಿಂದ ನಮಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಬಿಲ್ಡಿಂಗ್ ಅನ್ನು 1.41 ಕೋಟಿ ರೂ.ಗಳಿಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಶಾಯಿಸ್ತಾ ದಂಪತಿ ಪ್ರತಿಭಟನೆ ನಡೆಸಿದರು.

Leave a Reply