ನನ್ನ ಫ್ರೆಂಡತಿ Rama Shakya ಜೊತೆಯಲ್ಲಿ “ಕಾಟೇರ” ಸಿನಿಮಾ ನೋಡಿ ಬಂದೆ. ತಾಯಿ ತನ್ನ ಮಗುವಿಗೆ ತೆರೆದ ಎದೆಯಿಂದ ಹಾಲೂಡುವುದನ್ನು ಯಾರೊಬ್ಬರೂ ಅಪವಿತ್ರ ಭಾವನೆಯಿಂದ ನೋಡದಿರುವ ಮೌಲ್ಯಪ್ರಜ್ಞೆಯೊಂದು ಬದುಕಿನ ವಾಸ್ತವ ನಡೆಯಾಗಿದ್ದ ಕಾಲಘಟ್ಟದ ಸಿನಿಮಾ “ಕಾಟೇರ”. ಜನಪದರ ಇಂತಹ ಮೌಲ್ಯಪ್ರಜ್ಞೆಯು ನಾಶವಾದ ವ್ಯಕ್ತಿ ಮಾರನು, ಕಥಾನಾಯಕನ ಅಕ್ಕನ ಎದೆಯ ಹಾಲು ಮತ್ತು ಹಾಲೂಡುವ ಎದೆಯನ್ನು ನೋಡಬೇಕೆಂದು ಕಣ್ಣು ಮಡಗಿದ ಕಾರಣದಿಂದ ಮಾರನ ಕಣ್ಣುಗುಡ್ಡೆಯನ್ನು ಬೆರಳಿನಿಂದ ಕಿತ್ತು ಬಿಸಾಕಿಬಿಡುತ್ತಾನೆ ಕಾಟೇರ. ಪವಿತ್ರವಾದ ಮೌಲ್ಯಪ್ರಜ್ಞೆಯನ್ನು ಕಳೆದುಕೊಂಡವನ ವಿರುದ್ಧ ನಾಯಕನು ವಿಧಿಸುವ ಶಿಕ್ಷೆ ಇದು.
ಶ್ರೀ ಡಿ.ದೇವರಾಜ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ”ಉಳುವವನೇ ಹೊಲದೊಡೆಯ” ಎಂಬ ಭೂಸುಧಾರಣಾ ಕಾನೂನು, ಜಮೀನ್ದಾರಿ ಪದ್ಧತಿಯ ವಿರುದ್ಧ ಗೇಣಿದಾರರು, ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ನಡೆಸುವ ಹೋರಾಟಕ್ಕೆ ದಾರಿ ಮಾಡಿಕೊಟ್ಟು ಭೂಮಾಲೀಕರ ಅಹಂಕಾರವನ್ನು ಭಂಜಿಸುತ್ತದೆ. ಕಥಾನಾಯಕ ಪ್ರೀತಿಸಿದ ಜಮೀನ್ದಾರರ ಮಗಳೇ ಗೇಣಿದಾರರಾಗಿದ್ದ ರೈತಾಪಿಗಳ ಹೋರಾಟಕ್ಕೆ ಬೆಳಕಿನ ದೊಂದಿಯಾಗುತ್ತಾಳೆ. ಶತಮಾನಗಳ ಕಾಲ ಬಡವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿದ ಮೇಲ್ಜಾತಿಯ ಶೋಷಕರು ಪ್ರಾಯಶ್ಚಿತ್ತ ಮತ್ತು ಆತ್ಮಪಾವಿತ್ರೀಕರಣ ಮಾಡಿಕೊಳ್ಳಲು ಪ್ರೀತಿಯೊಂದೇ ಆಸರೆ ಎಂಬುದನ್ನು ಕಥಾನಾಯಕಿಯ ಪಾತ್ರ ಸಂಕೇತಿಸುತ್ತದೆ. ಅವಳ ಪ್ರೀತಿಯ ಕಾರಣವಾಗಿಯೇ ಕಥಾನಾಯಕ ಭೂಸುಧಾರಣಾ ಚಳುವಳಿಯ ಹಸಿರು ಒಲ್ಲಿಯ ನಾಯಕನಾಗುತ್ತಾನೆ. ಹಸಿರು ಒಲ್ಲಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ “ಕಾಟೇರ”.
ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಕಲೆ ಮನರಂಜನೆಯ ಸಾಂಸ್ಕೃತಿಕ ಆಸರೆ ಮಾತ್ರವಲ್ಲದೆ ಜೀವನ ಪ್ರೀತಿಯನ್ನು ಮೂಡಿಸುವ ಜೀವಸೆಲೆ. ಚೊಂಗಲ ಎಂಬ ಮಾತು ಬಾರದ ಮೂಗನು, ರಂಗಮಂಚದ ಮೇಲೆ ಹಿರಣ್ಯ ಕಶ್ಯಪನ ಪಾತ್ರವನ್ನು ಅಭಿನಯಿಸಿದ ಪ್ರಸಂಗ ಗ್ರಾಮೀಣ ರಂಗಕಲೆಯನ್ನು ಸಶಕ್ತವಾಗಿ ತೋರಿಸಿಕೊಟ್ಟಿದೆ.
ಭೀಮನಹಳ್ಳಿ ಎಂಬ ಗ್ರಾಮದ ಕುಲುಮೆ ಕಮ್ಮಾರನಾಗಿ ಕೃಷಿಕರಿಗೆ ಅಗತ್ಯವಾದ ವ್ಯವಸಾಯದ ಪರಿಕರಗಳು ಮತ್ತು ಆಯುಧಗಳನ್ನು ತಯಾರಿಸಿ ಕೊಡುವ ಕಾಟೇರ, ಜಮೀನ್ದಾರಿಗಳ ಕ್ರೌರ್ಯ ಮತ್ತು ಜಾತಿಯ ಆಚರಣೆಯ ವಿರುದ್ಧ ನಿಂತು, ತನ್ನೂರಿನ ಎಲ್ಲರ ತಲೆಕಾಯುವ ಆಯುಧವೇ ಆಗುತ್ತಾನೆ. ಇವಿಷ್ಟು ಮಾತ್ರ ಸದ್ಯಕ್ಕೆ ನಾನು ಗುರುತಿಸುವ ಧನಾತ್ಮಕ ಅಂಶಗಳು.
ಉಳುವವನೇ ಭೂಮಿಯ ಒಡೆಯನೆಂದು ಭೂಸುಧಾರಣಾ ಕಾನೂನನ್ನು ಜಾರಿಗೆ ತಂದ ಸನ್ಮಾನ್ಯ ಶ್ರೀ ಡಿ.ದೇವರಾಜ ಅರಸ್ ಮತ್ತು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಫೋಟೋ ಅಥವಾ ಪ್ರತಿಮೆ ಎಲ್ಲಿಯೂ ತೋರಿಸುವುದಿಲ್ಲ.
“ಭೂಮಿಯ ರಾಷ್ಟ್ರೀಕರಣದ ಪ್ರಶ್ನೆ ಮತ್ತು ಅಸ್ಪೃಶ್ಯತೆಯ ನಿವಾರಣೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಜಮೀನ್ದಾರಿ ಜಾತಿಗಳು ಮತ್ತು ಅಸ್ಪೃಶ್ಯತೆ ವಿರುದ್ಧ ಬಹುದೊಡ್ಡ ಚಳವಳಿ ಹೂಡಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಅಂಬೇಡ್ಕರ್ ಅವರ ಚಳವಳಿಯ ಸ್ಮರಣೆಯ ಯಾವುದೇ ಒಂದು ಮಾತು “ಕಾಟೇರ” ಸಿನಿಮಾದಲ್ಲಿ ಸುಳಿಯುವುದಿಲ್ಲ.
ಅಂಬೇಡ್ಕರೋತ್ತರ ಕರ್ನಾಟಕದಲ್ಲಿ ರೈತ ಚಳವಳಿಯನ್ನು ರೂಪಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನಿಜಾರ್ಥದಲ್ಲಿ ಹಸಿರು ಒಲ್ಲಿಗಳ ಪಾಲಿನ ಮಹಾಗುರು. ಅವರನ್ನು ನೆಪ ಮಾತ್ರಕ್ಕೂ ನೆನಪು ಮಾಡಿಕೊಂಡಿಲ್ಲ. ಜಮೀನ್ದಾರಿಗಳ ಅಟ್ಟಹಾಸ ಮತ್ತು ಜಾತಿ ಶೋಷಣೆಯ ವಿರುದ್ಧ ಬಹುದೊಡ್ಡ ಹೋರಾಟ ನಡೆಸಿದ್ದು ಪ್ರೊ.ಬಿ.ಕೃಷ್ಣಪ್ಪನವರ ನಾಯಕತ್ವದಲ್ಲಿ ಮೂಡಿಬಂದ ಡಿಎಸ್ಎಸ್ ಎಂಬುದನ್ನು ಯಾರೂ ಮರೆಯುವಂತಿಲ್ಲ. ದಲಿತ ಚಳವಳಿಯ ನೆನಪಿನ ಯಾವುದೇ ಒಂದು ಸಣ್ಣ ಬಿಂಬವೂ “ಕಾಟೇರ” ಸಿನಿಮಾದಲ್ಲಿ ಕಾಣಿಸುವುದಿಲ್ಲ.
ಇಂತಹ ಮಹಾಮಹಿಮರ ಲೇಶಮಾತ್ರ ನೆನಪುಗಳಿಲ್ಲದ ಈ ಸಿನಿಮಾ, ಇದೇ ಸಿನಿಮಾದಲ್ಲಿ ಚಿತ್ರಿಸಿರುವ ಅಸ್ಥಿಪಂಜರಗಳಂತೆ ನಿರ್ಜೀವವಾದ ಮತ್ತು ಕೇವಲ ತೋರಿಕೆಯ ಸಾಮಾಜಿಕ ಕಾಳಜಿಯ ಹಾಗೂ ಪ್ರೇಕ್ಷಕರ ಹಣ ದೋಚಲೆಂದೇ ಸೂತ್ರ ಹೆಣೆದು ನಿರ್ಮಿಸಿರುವ ಚಲನಚಿತ್ರವೇ ಹೊರತು ಬೇರಲ್ಲ. ಹಾಗಾಗಿಯೇ ಜನಪ್ರಿಯ ನಾಯಕನಟ ದರ್ಶನ್ ಗೆ ಕಮ್ಮಾರನ ಪಾತ್ರ ಕೊಟ್ಟು, ಕೈಗೆ ಮಚ್ಚು ಕೊಟ್ಟು ರಕ್ತದ ಕೋಡಿ ಹರಿಸಲಾಗಿದೆ. ಜಮೀನ್ದಾರಿ ಪದ್ಧತಿ ಮತ್ತು ಜಾತಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ನಾಯಕರನ್ನು ಮರೆತು ಚಿತ್ರಿಸಿರುವ ಈ ಸಿನಿಮಾ, ಸಾಮಾಜಿಕ ಪರಿಣಾಮ ಬೀರುವ ದೃಷ್ಟಿಯಿಂದ ಹೇಳುವುದಾದರೆ ಹುಲಿ ಅಥವಾ ಸಿಂಹದ ನಕಲಿ ಚರ್ಮಕ್ಕೆ ಹೊಟ್ಟು ತುಂಬಿ ನಿಲ್ಲಿಸಿದ ಗೊಂಬೆಯಂತೆ ಕಾಣಿಸುತ್ತದೆ.
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




