ಭಾನುವಾರ ದೇಶದ ಬೃಹತ್ ಮಹಾಪಂಚಾಯತ್ ನಡೆಯಲಿದೆ: ನರೇಶ್ ಟಿಕಾಯತ್

5 years ago

ಲಖ್ನೋ: ಭಾನುವಾರ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆಯಲಿರುವ ಮಹಾಪಂಚಾಯತ್ ನಲ್ಲಿ ಲಕ್ಷಾಂತರ ರೈತರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್‌ ಟಿಕಾಯತ್‌ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮುಜಾಫರ್‌ ನಗರದ ಮಹಾಪಂಚಾಯಿತಿ ದೇಶದ ಬೃಹತ್ ರೈತ ಸಮಾವೇಶ ಎನಿಸಿಕೊಳ್ಳಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ವಿವಾದಾಸ್ಪದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿ ಉತ್ತರ ಪ್ರದೇಶದ ಮುಜಾಫರ್‌ನಗರದ ಸರ್ಕಾರಿ ಕಾಲೇಜು ಆವರಣದಲ್ಲಿ ಭಾನುವಾರ ಬೃಹತ್ ಸಮಾವೇಶ ನಡೆಯಲಿದೆ. ದೆಹಲಿ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಭಾರತೀಯ ಕಿಸಾನ್‌ ಯೂನಿಯನ್‌ ವಹಿಸಿಕೊಂಡಿದೆ.

ಕೇಂದ್ರದ ಮೂರು ಮಸೂದೆಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಯತ್ನಿಸುತ್ತಿರುವ ರೈತ ಹೋರಾಟಗಾರರು ಆಯಾ ರಾಜ್ಯಗಳಲ್ಲಿ ಅನೇಕ ರೀತಿಯಲ್ಲಿ ಸಂಘಟನೆ ಮಾಡಿದ್ದಾರೆ. ಇದೀಗ ಉತ್ತರಪ್ರದೇಶದಲ್ಲಿ ಇರುವ ವಿವಿಧ ಜಾತಿ ಪಂಚಾಯಿತಿಗಳ ನಾಯಕರು ರಾಜ್ಯದ ಗ್ರಾಮಗಳಿಗೆ ಭೇಟಿ ನೀಡಿ ಮಹಾಪಂಚಾಯಿತಿಗೆ ಜನರನ್ನು ಸೇರಿಸಲು ಮುಂದಾಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವು ಕ್ರಮಗಳನ್ನು ಕೈಗೊಂಡಿವೆ ಎಂದಿದೆ. ಅಲ್ಲದೇ, ರೈತ ಹೋರಾಟವನ್ನು ಹಿನ್ನೆಲೆಗೆ ಸರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉತ್ತರ ಪ್ರದೇಶದಾದ್ಯಂತ ‘ಕಿಸಾನ್‌ ಸಂಪರ್ಕ ಯಾತ್ರೆ’ಹೆಸರಿನಲ್ಲಿ ಯಾತ್ರೆ ನಡೆಸಲು ಬಿಜೆಪಿ ಸಜ್ಜಾಗಿದೆ.

Leave a Reply