ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ ರೈತರು, ದಲಿತ ಸಂಘಟನೆಗಳ ಕಾರ್ಯಕರ್ತರು ಕನ್ನಡಪರ ಹೋರಾಟಗಾರರು ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂದೆ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಇದಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.
ರಾಜ್ಯಾದ್ಯಂತ 400ಕ್ಕೂ ಹೆಚ್ಚು ಅರ್ಜಿಗಳು ಪ್ರಕರಣವನ್ನು ಹಿಂಪಡೆಯುವ ಸಲುವಾಗಿ ಬಂದಿವೆ. ಇದರಲ್ಲಿ ಸ್ಪಷ್ಟವಾದ ಮಾರ್ಗಸೂಚಿ ಪಾಲನೆ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಂಬ ಆದ್ಯತೆಗಳಿರುವುದಿಲ್ಲ ಎಂದರು.
ಪೊಲೀಸ್ ಅಧಿಕಾರಿಗಳು ಪ್ರಕರಣ ಹಿಂಪಡೆಯಬಹುದೇ ಅಥವಾ ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ಶಿಫಾರಸ್ಸಿನೊಂದಿಗೆ ಕಡತ ಮಂಡಿಸಲಿದ್ದಾರೆ. ಉಪಸಮಿತಿ ಅದನ್ನು ಪರಿಶೀಲಿಸಲಿದೆ. ಸೂಕ್ತವಾಗಿದ್ದರೆ ಹಿಂಪಡೆಯುವ ಬಗ್ಗೆ ಪ್ರಕ್ರಿಯೆ ಮುಂದುವರೆಸಲು ಸಂಪುಟಕ್ಕೆ ಶಿಫಾರಸ್ಸು ಮಾಡಲಾಗುವುದು. ಇಲ್ಲವಾದರೆ ಪ್ರಕರಣಗಳನ್ನು ಮುಂದುವರೆಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.
ರಾಜ್ಯಾದ್ಯಂತ ಇರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಎಲ್ಲಾ ಜಿಲ್ಲೆಗಳ ಎಸ್ಪಿಗಳು, ನಗರ ಪ್ರದೇಶದ ಆಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಪರಿಶೀಲನೆ ನಡೆಸುವಾಗ 32 ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಭಾಗಿಯಾದವರೂ ಸೇರಿದ್ದಾರೆ. ಆದರೆ ಅದೊಂದೇ ಪ್ರಕರಣವನ್ನು ನಾವು ಕೆದಕಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ರಾಜ್ಯಾದ್ಯಂತ ಪರಿಶೀಲನೆ ನಡೆಯುವಾಗ ಹುಬ್ಬಳ್ಳಿ ಪ್ರಕರಣವೂ ಕಂಡುಬಂದಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಇದು ಕಂಡುಬಂದಿರುವುದು ಕಾಕತಾಳೀಯವಷ್ಟೇ ಎಂದರು.
ಬಿಜೆಪಿಯವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಳೆಯ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೂ ಆಗಬೇಕು, ಶಿಕ್ಷೆಗಾದರೂ ಒಳಗಾಗಬೇಕು. ಎಷ್ಟು ದಿನ ಎಂದು ಅವು ಬಾಕಿ ಪ್ರಕರಣಗಳಲ್ಲಿ ನನೆಗುದಿಯಲ್ಲಿರಲು ಸಾಧ್ಯ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರೂ ಅಧಿಕಾರ ನಡೆಸಿದ್ದಾರೆ. ಅವರಿಗೆ ಈ ವಿಚಾರ ಗೊತ್ತಿಲ್ಲವೇ ಎಂದರು.
ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪರಮೇಶ್ವರ್, ಕರ್ನಾಟಕವನ್ನು “ಮಾದಕದ್ರವ್ಯ ಮುಕ್ತ” ರಾಜ್ಯವನ್ನಾಗಿಸುವುದು ಪ್ರಮುಖ ಗುರಿಯಾಗಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು, ಕೆಲವು ದೇಶಗಳ ಪ್ರಜೆಗಳು ಹೆಚ್ಚಾಗಿ ಮಾದಕದ್ರವ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಹಲವು ವರ್ಷಗಳಿಂದ ವಾಸಿಸುತ್ತಿರುವ ಹಾಗೂ ರಾಜ್ಯಕ್ಕೆ ಬರುವ ವಿದೇಶಿ ಪ್ರಜೆಗಳ ಮೇಲೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇ-ಬೀಟ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಬಾಯಿಸಬೇಕು, ಆಯಾ ವಿಭಾಗದಲ್ಲಿ ನಡೆಯುವ ಘಟನೆಗಳಿಗೆ ಡಿಸಿಪಿಗಳು ಜವಾಬ್ದಾರರು, ಹಳೇ ಪ್ರಕರಣಗಳ ಮೇಲೆ ನಿಗಾವಹಿಸಿ ಎಂದರು.




