ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕದ ನಂತರ ತೀವ್ರ ಅಸಮಾಧಾನಗೊಂಡಿರುವ ನಾಯಕರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಕರೆನೀಡಿದೆ. ಅಸಮಾಧಾನಗೊಂಡಿರುವ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ ಅವರಿಗೆ ಹೈಕಮಾಂಡ್ ಕರೆನೀಡಿದ್ದು, ಇವರೊಂದಿಗೆ ರಮೇಶ್ ಜಾರಕಿಹೊಳಿ, ರಾಮದಾಸ್, ಸಿ.ಟಿ.ರವಿ ಸೇರಿದಂತೆ ಇತರ ನಾಯಕರು ಜನವರಿ 9 ರಂದು ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಜಿ ಸಚಿವ ವಿ. ಸೋಮಣ್ಣ, ನನಗೆ ಪಕ್ಷದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಜನವರಿ 9 ಕ್ಕೆ ದೆಹಲಿಗೆ ತೆರಳುತ್ತಿದ್ದೇನೆ. ವರಿಷ್ಠರನ್ನು ಭೇಟಿ ಮಾಡುತ್ತೇನೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‌ನನ್ನು ಕೇಳುತ್ತೇನೆ ಎಂದರು.
ನನಗೆ ಅನ್ಯಾಯವಾಗಿದೆ. ನಾನೇ ಹೋಗಿ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದರೂ ನನಗೆ ಮಾಟ-ಮಂತ್ರ ಮಾಡಿಸಿದ್ದರೇನು ಗೊತ್ತಿಲ್ಲ. ಕ್ಷೇತ್ರ ಬಿಟ್ಟೆ. ನನಗೆ ಆಗಿರುವ ಅನ್ಯಾಯವನ್ನು ವರಿಷ್ಠರ ಬಳಿ ಹೇಳುತ್ತೇನೆ. ನನಗೆ ನೇರವಾಗಿ ತೊಂದರೆಯಾಗಿದೆ. ಈ ತೊಂದರೆಗೆ ಯಾರು ಕಾರಣವೋ ಅವರನ್ನು ಕೂರಿಸಿ ಮಾತುಕತೆ ನಡೆಸಿ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಈಗಾಗಲೇ ಕೇಳಿದ್ದೇನೆ. ಅವರನ್ನು ವರಿಷ್ಠರು ಕರೆಸಿ ಸೂಚನೆ ಕೊಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನನ್ನ ಜೊತೆಗೆ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಬರುತ್ತಿದ್ದಾರೆ. ಎಲ್ಲರೂ ಕೂಡಿ ವರಿಷ್ಠರಿಗೆ ತಮಗಾಗಿರುವ ಅನ್ಯಾಯದ ಬಗ್ಗೆ ವಿವರಿಸುತ್ತೇವೆ. ಇದಾದ ನಂತರ ಅವರು ಎಲ್ಲವನ್ನೂ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.




