ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಸರ್ಕಾರದಿಂದ ಕ್ರಮ: ಜಮೀರ್ ಅಹಮದ್ ಖಾನ್

2 years ago

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳ ವರದಿ ಆಧರಿಸಿ, ಆಸ್ತಿಗಳ ವಿವರ ಕ್ರೋಡೀಕರಿಸಲಾಗುತ್ತಿದೆ. ಈ ಕುರಿತು ಜಿಲ್ಲಾ ವಕ್ಫ್ ಅಧಿಕಾರಿಗಳ ಸಭೆ ನಡೆಸಿದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ವಕ್ಪ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸಮಗ್ರ ವರದಿ ಒಂದು ತಿಂಗಳಲ್ಲಿ ಸಲ್ಲಿಸಲು ಗಡುವು ನೀಡಿದ್ದಾರೆ.

ಜಮೀರ್ ಅಹಮದ್ ಖಾನ್, ಜಿಲ್ಲಾವಾರು ವಕ್ಫ್ ಆಸ್ತಿಗಳ ಸರ್ಕಾರಿ ಒತ್ತುವರಿ, ಖಾಸಗಿ ಒತ್ತುವರಿ, ನ್ಯಾಯಾಲಯದಲ್ಲಿರುವ ಪ್ರಕರಣ ಸೇರಿ ಸಮಗ್ರ ಮಾಹಿತಿ ಜಿಲ್ಲಾ ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚಿಸಿದರು.

ವಕ್ಫ್ ಆಸ್ತಿಗಳ ಒತ್ತುವರಿ ಬಗ್ಗೆ ಖಾಸಗಿ ಸಂಸ್ಥೆಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ. ಅಧಿಕಾರಿಗಳು ನೀಡುವ ವರದಿ, ಖಾಸಗಿ ಸಂಸ್ಥೆಯ ಮಾಹಿತಿ ತಾಳೆ ಆಗಬೇಕು. ಒಂದೊಮ್ಮೆ ತಾಳೆ ಆಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಲಯದಲ್ಲಿ ಇರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸದೆ ನ್ಯಾಯಾಲಯಕ್ಕೆ ಹಾಜಾರಾಗದೆ ಪರೋಕ್ಷವಾಗಿ ಒತ್ತುವರಿದಾರರ ಜತೆ ಶಾಮೀಲಾಗಿರುವ ಮಾಹಿತಿ ಇದೆ. ಇಂತಹ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಣ ಮಾಡಲು ವಕ್ಫ್ ಇಲಾಖೆಗೆ ಬರಬೇಡಿ. ಇದು ದೇವರ ಕೆಲಸ. ಆರೋಪ ಕೇಳಿ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.

ವಕ್ಫ್ ಆಸ್ತಿಗಳ ರಕ್ಷಣೆಗೆ ಕಾಂಪೌಂಡ್ ಗೋಡೆ ನಿರ್ಮಿಸಲು ಅಗತ್ಯ ಇರುವ ಕಡೆ ಪ್ರಸ್ತಾವನೆ ಸಲ್ಲಿಸಿ. ವಕ್ಫ್ ಆಸ್ತಿ ಎಂದು ಗುರುತಿಸುವಂತಾಗಲು ಏಕರೂಪದ ಕಾಪೌಂಡ್ ಹಾಕಬೇಕು ಎಂದು ಸೂಚಿಸಿದರು.

ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಉಪಸ್ಥಿತರಿದ್ದರು.

Leave a Reply