ಇದು ನೋಡಿ ನನಗೆ ನಿಜಕ್ಕೂ ತುಂಬ ನೋವಾಯ್ತು..!

5 years ago

ಭಾರತದಲ್ಲಿ ಫುಟ್‌ಪಾತ್‌ಗೂ ಗತಿ ಇಲ್ಲದಂಗೆ ಆಗುತ್ತಾ? ಈ ಬಗ್ಗೆ ಯಾರಿಗೂ ಗಾಬರಿಯಾಗಲಿ, ಏನಾಗಲಿ ಅನ್ನಿಸುತ್ತಿಲ್ಲವಲ್ಲ ಅನ್ನೋದೇ ದೊಡ್ಡ ದುರಂತ. ಎಲ್ಲ ಮುಗಿದರೆ ಫುಟ್‌ಪಾತೇ ಗತಿ ಅಂತೀವಿ. ರಸ್ತೆಗಳ ನಂತರ ಫುಟ್‌ಪಾತನ್ನೂ ಖಾಸಗಿಯವರಿಗೆ ಕೊಟ್ಟರೆ ಅದೂ ಇಲ್ಲವಾಗುತ್ತಾ!?

..

ಈಗ ಮನೆಯಲ್ಲಿದ್ದವರು ಕೂಡ ಮುಂದೆ ಫುಟ್‌ಪಾತ್‌ಗೇ ಬರುವ ಸ್ಥಿತಿ ನಿರ್ಮಾಣವಾಗುತ್ತೇನೊ ಅನ್ನೋ ಆತಂಕ ಕೂಡ ನಮಗೆ ಗಂಭೀರ ವಿಷಯವಾಗಿ ಬಹುಪಾಲರಿಗೆ ಕಾಡುತ್ತಲೇ ಇಲ್ಲ.

ಹೊತ್ತೊಂಟರೆ ಪೆಟ್ರೋಲ್ ಹಾಕಿಸಲಾಗುತ್ತಿಲ್ಲ, ಸಿಲಿಂಡರ್ ಸಾವಿರವಾಗಿ ತರಲಾಗುತ್ತಿಲ್ಲ. ಎಲ್ಲೆಡೆ ಟೋಲ್ ಕಟ್ಟಬೇಕು, ಎಲ್ಲದಕ್ಕೂ ಟ್ಯಾಕ್ಸ್-ಜಿಎಸ್‌ಟಿ. ಇದಕ್ಕೂ ಮೊದಲು ನೋಟ್ ಬಂದಿ. ಈಗಂತೂ ವ್ಯಾಪಾರವಿಲ್ಲ, ‘ಉದ್ಯೋಗ’ಗಳಿಲ್ಲ. ಹೊಲ ಬೆಳೆಯುತ್ತಿಲ್ಲ, ಕಾರಖಾನೆಗಳು ಹೊಗೆಯಾಡುತ್ತಿಲ್ಲ. ಉಂಬೆಣ್ಣೆ, ಸಕ್ಕರೆ-ಚಹಾಪುಡಿಗಳು ಸೋವಿ ಇಲ್ಲ. ತಿನ್ನೋಕು, ತಿರುಗಾಡೋಕೂ ನಮಗೆ ಕಷ್ಟ ಅಲ್ಲ, ಮುಂದೆ ಇನ್ನೂ ಕಷ್ಟ ಆಗಲಿದೆಯಂತ ಯಾರಿಗೂ ಅನ್ನಿಸುತ್ತಿಲ್ಲವಲ್ಲ! ಅದು ಬಿಟ್ಟು ನಾವು ತಾಲಿಬಾನ್ ಕಡೆ ನೋಡುತ್ತಿದ್ದೇವೆ. ಹಸಿದ ಹೊಟ್ಟೆ ಇದ್ದರೂ ದೇಶ ಭಕ್ತಿ ಅಂತಿದ್ದೇವೆ.

..

ನಾನು ಯಾವ ಪಾರ್ಟಿಯೂ ಅಲ್ಲ. ನಾನು ಯಾರ ‘ಗುಲಾಮ’ನೂ ಅಲ್ಲ, ಭಕ್ತ ಅಂತೂ ಮೊದಲೇ ಅಲ್ಲ! ನಾವೆಲ್ಲ ಒಂದ್ಹೊತ್ತಾದರೂ ಚಂದಗೆ ಉಣ್ಣಬೇಕು ಅಂತ ಬಯಸೋ ಸಾಮಾನ್ಯ ಪ್ರಜೆ. ಹಾಗಾಗಿ ನನ್ನ ಸಂಕಟ ಹೇಳುತ್ತಿರುವೆ, ಇದು ನಮ್ಮೆಲ್ಲರ ಸಂಕಟವೂ ಹೌದಾಗಿರುವುದಕ್ಕೆ.

..

ಇವರು ಮೊದಲ ಸಲ ಅಧಿಕಾರ ಹಿಡಿದ ಹೊತ್ತಲ್ಲಿ.. ಆಯ್ತು, ‘ಮೊದಲಿದ್ದವರು ಏನೂ ಮಾಡಿಲ್ಲ ಅಂತ ಹೇಳುತ್ತಿರುವ ಇವರಾದರೂ ಕೆಲಸ ಮಾಡಲಿ’ ಅಂತ ಮನಸಾಪೂರ್ವಕ ಒಪ್ಪಿದವ ನಾನೂ ಒಬ್ಬ. ಆದರೆ, ನಂತರ ಆ ನಂಬಿಕೆ ಸುಳ್ಳು ಅಂತ ಖಾತ್ರಿಯಾಯಿತು. ಈಗ ನೀವೇ ನೋಡುತ್ತಿದ್ದೀರಿ, ನಾವು ದೇಶವಾಸಿಗಳು ಎಷ್ಟು ತ್ರಾಸಲ್ಲಿ ಇದೀವಿಯಂತ. ಹೀಗೆ ಹೇಳಿದರೆ ನನಗೇ ಬೈಯ್ಯುವ ಜನರಿದ್ದಾರೆ.

..

ನಾನು ಯಾರ ಮೇಲಿನ ದ್ವೇಷಕ್ಕಾಗಲಿ, ಇನ್ನಾರನ್ನೋ ಮೆಚ್ಚಿಸಲು ಇದನ್ನು ಬರೆಯುತ್ತಿಲ್ಲ. ನಾವೆಲ್ಲ ಮೂರೊತ್ತಾದರೂ ಉಂಡು, ಬದುಕಲು ಬರೆಯುತ್ತಿರುವೆ. ನೋವಿನಿಂದ.. ಅಷ್ಟೇ. ಇನ್ನಾದರೂ ನಾವು ಯೋಚಿಸಬಹುದೇ?

– ಶಿವಕುಮಾರ್ ಉಪ್ಪಿನ, ಪತ್ರಕರ್ತ 

Leave a Reply