ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ತಡೆಗಟ್ಟಲು ವಿಶೇಷ ಕಾಯ್ದೆ: ದಿನೇಶ್ ಗುಂಡೂರಾವ್

2 years ago

ಬೆಳಗಾವಿ: ನಾಗರಿಕ ಸಮಾಜಕ್ಕೆ ಕಳಂಕವಾಗಿ ಪರಿಣಮಿಸಿರುವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಐಪಿಸಿ‌ ಕಲಂ ಗೆ ತಿದ್ದುಪಡಿಯ ಜೊತೆಗೆ ವಿಶೇಷ ಕಾಯ್ದೆ ತರಲಾಗುತ್ತದೆ. ಅಷ್ಟೇ ಅಲ್ಲ ಇದಕ್ಕಾಗಿ ಪ್ರತ್ಯೇಕ ನೀತಿ ರಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಹೇಳಿದರು.

ಶೂನ್ಯವೇಳೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕುರಿತು ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು, ಅಮಾನವೀಯ ಪಿಡುಗನ್ನು ತಡೆಗಟ್ಟಲು ಗೃಹ,ಕಾನೂನು ಮಹಿಳಾ ಮತ್ತು ಮಕ್ಕ‌ಳ‌ ಕಲ್ಯಾಣ ಇಲಾಖೆಯ ಜೊತೆ ಸಮನ್ವಯ ಸಾಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರು ಮಂಡ್ಯ ಇನ್ನಿತರ ಕಡೆಗಳಲ್ಲಿ ನಡೆದ ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ದೊರೆಯಲು ಸೆಕ್ಷನ್ 315 ಹಾಗೂ 316 ಅಳವಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಮುಂದಿನ ಅಧಿವೇಶನದಲ್ಲಿ ಇದಕ್ಕಾಗಿ ಐಪಿಸಿ ಸೆಕ್ಷನ್ ಗೆ ತಿದ್ದುಪಡಿ ತಂದು ಕಠಿಣ ಕಾನೂನು ಜಾರಿ ಮಾಡಲಾಗುವುದು ಎಂದರು.

ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯಲ್ಲಿ ಪೋಷಕರು, ಕುಟುಂಬದವರ ಪಾಲು ಇದೆ ಹಿಂದಿನ ಕಾಲದಿಂದಲೂ ಹೆಣ್ಣು ನಷ್ಟ ಗಂಡು ಲಾಭ ಎನ್ನುವ ಮನಸ್ಥಿತಿ ಬೇರೂರಿದೆ. ಇದು ಇಂತಹ ಪಿಡುಗು ಮುಂದುವರೆಯಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಕ್ಯಾನಿಂಗ್ ಡಯಾಗ್ನಸ್ಟಿಕ್ ಸೆಂಟರ್ ಇಲ್ಲದ ಕಾಲದಲ್ಲಿ ಮಗು ಜನಿಸಿದ ಬಳಿಕ ಹೆಣ್ಣು ಮಗುವಾಗಿದ್ದರೆ ಅದರ ಬಾಯಿಗೆ ಕಾಳು ಹಾಕಿ ಉಸಿರುಗಟ್ಟುವಂತೆ ಮಾಡಿ ಹತ್ಯೆ ಮಾಡಿರುವ ಕೃತ್ಯಗಳನ್ನು ನಾವು ಕೇಳಿದ್ದೇವೆ ಇಂತಹ ಕೆಟ್ಟ ಮನಸ್ಥಿತಿಯಿಂದ ಹೆಣ್ಣುಮಕ್ಕಳ ಅನುಪಾತ ಕಡಿಮೆಯಾಗಿದೆ ಎಂದರು.

ಆಧುನಿಕ ತಂತ್ರಜ್ಞಾನದ ಫಲವಾಗಿ ಚೀನಾ ಯಂತ್ರಗಳಿಂದ ಭ್ರೂಣ ಲಿಂಗ ಪತ್ತೆ ಮಾಡುವುದು ಸುಲಭವಾಗಿದ್ದು ಇದರ ಲಾಭ ಪಡೆದು ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿದ್ದು ಇದಕ್ಕೆ ವೈದ್ಯರು,ಟೆಕ್ನಿಷಿಯನ್ ಗಳು ಮಾತ್ರವಲ್ಲ ಪೋಷಕರು ಅವರ ಕುಟುಂಬದವರು, ಒತ್ತಡ ತರುವವರು ಕಾರಣರಾಗುತ್ತಾರೆ ಎಂದರು.

ಭ್ರೂಣ ಲಿಂಗ ಪತ್ತೆ ಸಂಬಂಧ ಕಳೆದ 2002ರಿಂದ 2023ರವರೆಗೆ 21 ವರ್ಷದಲ್ಲಿ ಕೇವಲ 200 ಪ್ರಕರಣಗಳನ್ನು ದಾಖಲಿಸಲಾಗಿದ್ದು ಇದನ್ನು ನೋಡಿದರೆ. ಅಧಿಕಾರಿಗಳು ಕಾಳಜಿ ಹಾಗೂ ಪ್ರಾಣಿಕತೆಯಿಂದ ತಪಾಸಣೆ ನಡೆಸಿಲ್ಲ ಎಂದರು.

ಭ್ರೂಣ ಹತ್ಯೆ ಮೊದಲಿನಿಂದಲೂ ನಡೆಯುತ್ತಿದ್ದರೂ ಇದು ಆ ಕುಟುಂಬಕ್ಕೆ ಸಂಬಂಧಿಸಿ ವಿಷಯ ನಮಗ್ಯಾಗೆ ಎನ್ನುತ್ತಾ ಕಂಡು ಕಾಣದಂತೆ ಇದ್ದು ಬಿಡುತ್ತೇವೆ. ಇದರಿಂದಾಗಿ ದೇಶದಲ್ಲಿ ಲಿಂಗಾನುಪಾತ 947 ರಿಂದ 979ಕ್ಕೆ ಕುಸಿದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಹೆಣ್ಣಿನ ಬಗ್ಗೆ ನಿರ್ಲಕ್ಷ್ಯದ ಕಾರಣದಿಂದ ಅಮಾನವೀಯ ಗುಣವುಳ್ಳವರು ಭ್ರೂಣ ಹತ್ಯೆಯನ್ನು ಬಯಸುತ್ತಿದ್ದು ಇದರಿಂದಾಗಿ ಅಕ್ರಮ ಸ್ಕ್ಯಾನಿಂಗ್ ಸೆಂಟರ್ ಗಳು, ಹೆಚ್ಚಾಗಿ ಹತ್ಯೆ ಕೃತ್ಯಗಳು ನಡೆಯುತ್ತಿವೆ ಇದರ ಕುರಿತು ಜನಜಾಗೃತಿ ಹೆಚ್ಚಾಗಬೇಕು, ಭ್ರೂಣ ಹತ್ಯೆ ಮಾಡಿಸುವವರು, ಮಾಡಿದವರು ಸೇರಿ ಕೃತ್ಯದಲ್ಲಿ ಭಾಗಿಯಾಗುವ ಎರಡು ಕಡೆಯವರನ್ನು ಹೊಣೆ ಮಾಡಬೇಕು. ಭ್ರೂಣ ಹತ್ಯೆ ಕೊಲೆಯೇ ಆಗಿದ್ದು, ತಾಯಿ ಹೊಣೆಗಾರಿಕೆಯಿಂದ ನುಣಚಿಕೊಳ್ಳವಂತಿಲ್ಲ ಗರ್ಭಪಾತ ಮಾಡಿಸುವುದು ನನಗೆ ಗೊತ್ತಿಲ್ಲ, ಒತ್ತಡ ಹೇರಿ ಭ್ರೂಣ ಹತ್ಯೆ ಮಾಡಿಸಿದರು ಎಂದು ಹೇಳುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಂಡ್ಯದ ಕಬ್ಬಿನ ಆಲೆಮನೆಯಲ್ಲಿ ನಡೆಯುತ್ತಿದ್ದ ಕೃತ್ಯವನ್ನು ಗಮನಿಸುವಲ್ಲಿ ಅಧಿಕಾರಿಗಳು ಲೋಪವೆಸಗಿದ್ದು, ಆರೋಪಿಗಳನ್ನು ಬಂಧಿಸಿದ ಬಯ್ಯಪ್ಪನಹಳ್ಳಿ ಪೊಲೀಸರು ಅಭಿನಂದನಾರ್ಹರು ಎಂದರು.

ಪೊಲೀಸರ ತನಿಖೆಯಲ್ಲಿ ಹೆಚ್ಚು ಪ್ರಕರಣಗಳು ನಡೆದಿರುವುದು ಸಮಾಜದ ಕಣ್ಣು ತೆರೆಸಿದೆ ಸರ್ಕಾರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಜಾರಿಗೆ ತರಬೇಕು. ಭ್ರೂಣ ಲಿಂಗ ಪತ್ತೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ ಕಾನೂನಿನ ಬಲವನ್ನು ನೀಡಲು ಐಪಿಸಿಗೂ ಸೆಕ್ಷನ್ ಗೆ ತಿದ್ದುಪಡಿ ತರಲಾಗುವುದು ಎಂದರು.

ಪ್ರಕರಣವನ್ನು ಸಿಐಡಿಯ ತನಿಖೆಯ ವಹಿಸಲಾಗಿದ್ದು ತನಿಖೆಯ ಮೇಲೆ ನಿಗಾವಹಿಸಲಾಗುತ್ತಿದೆ. ಇದು ಮಂಡ್ಯ ಅಥವಾ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಜಾಲದ ಮೇಲೆ ನಿರಂತರ ನಿಗಾ ವಹಿಸಿ ಕಾಲಕಾಲಕ್ಕೆ ತಪಾಸಣೆ ನಡೆಸಲಾಗುತ್ತದೆ ಎಂದರು.

ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಗೆ ರಚಿಸುವ ವಿಶೇಷ ಕಾರ್ಯಪಡೆಯು ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆ ನಡೆಸಲಾಗುವುದು. ಈ ಕಾರ್ಯಚರಣೆಗಾಗಿಯೇ ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಶೇಷವಾಗಿ ನಿಯೋಜಿಸುವಂತೆ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

ಇದಕ್ಕೂ ‌ಮೊದಲು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗೆ ವಿಶೇಷ ತನಿಖಾ‌ ತಂಡ(ಎಸ್ ಐಟಿ)ರಚಿಸುವಂತೆ ಆಗ್ರಹಿಸಿದರು.

ಇದು ಸಮಾಜ ತಲೆತಗ್ಗಿಸುವ ಕೃತ್ಯ ರಾಜ್ಯಾದ್ಯಂತ ಹರಡಿರುವ ಜಾಲದ ಹಿಂದೆ ಇರುವ ಅಧಿಕಾರಿಗಳು ಸೇರಿ ಎಲ್ಲರನ್ನೂ ಶಿಕ್ಷೆಗೊಳಪಡಿಸಿ ನೇಣಿಗೆ ಹಾಕಿ ಎಂದು ಒತ್ತಾಯಿಸಿದರು.

ಸದಸ್ಯರಾದ ಶರತ್ ಬಚ್ಚೇಗೌಡ, ನರೇಂದ್ರಸ್ವಾಮಿ, ಶಶಿಕಲಾ ಜೊಲ್ಲೆ ಮತ್ತಿತರರು ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆಯನ್ನು ಕೂಡಲೇ ತಡೆಗಟ್ಟಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಕಾನೂನನ್ನು ಭ್ರೂಣ ಹತ್ಯೆ ಮಾಡಿದ ಕುಟುಂಬದವರನ್ನು ಮಾತ್ರ ಹೊಣೆ ಮಾಡಲು ಬಳಕೆಯಾಗುತ್ತದೆ. ಆಸ್ಪತ್ರೆಗಳು ಹಾಗೂ ಇತರ ಸಂಸ್ಥೆಗಳನ್ನು ಜವಾಬ್ದಾರಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕಾನೂನು ತಿದ್ದುಪಡಿ ತನ್ನಿ ಎಂದು ಸಲಹೆ ನೀಡಿದರು.

Leave a Reply