ಮುಸ್ಲಿಂರಲ್ಲಿ ಯಾರಿಗೆ ಯಾವಾಗ ಯಾವ ಕಾರಣಕ್ಕೆ ಈ ಹಣ ಕೊಡುತ್ತಾರೆ?: ಬಿಜೆಪಿ

3 years ago

#Muslims #money #BJP

ಬೆಳಗಾವಿ: ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳ ಅನುದಾನ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿಸಿತು.

ಪ್ರಶ್ನೋತ್ತರದ ಬಳಿಕ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸುನಿಲ್ ಕುಮಾರ್, ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದ್ದಾರೆ. ಸದನ ನಡೆಯುವ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳ ಅನುದಾನವನ್ನು ಘೋಷಿಸಬಾರದು ಎಂಬ ನಿಯಮವಿದೆ. ಆದರೆ ಮುಖ್ಯಮಂತ್ರಿಯವರ ಈ ಹೇಳಿಕೆ ಸಂಪ್ರದಾಯಕ್ಕೆ ವಿರುದ್ಧ ಎಂದರು.

ಮುಸ್ಲಿಂರಲ್ಲಿ ಯಾರಿಗೆ ಯಾವಾಗ ಯಾವ ಕಾರಣಕ್ಕೆ ಈ ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಇವರ ಆಕ್ಷೆಪಕ್ಕೆ ದನಿಗೂಡಿಸಿದ ಆರಗ ಜ್ಞಾನೇಂದ್ರ, ಚಂದ್ರಪ್ಪ, ಅಶ್ವತ್ಥನಾರಾಯಣ ಸೇರಿದಂತೆ ಹಲವರು ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು.

ಇದಕ್ಕೆ ಉತ್ತರಿಸಿದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿಯವರನ್ನು ಕೇಳಿಯೇ ಮುಖ್ಯಮಂತ್ರಿಯವರು ಮಾತನಾಡಲಾಗುವುದಿಲ್ಲ. ವಿರೋಧಪಕ್ಷಗಳು ಹೇಳಿದಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. 10 ಸಾವಿರ ಕೋಟಿ ರೂ.ಗಳ ಅನುದಾನ ನೀಡಬೇಕಾದರೆ ಇದೇ ಅಧಿವೇಶನದಲ್ಲಿ ಬಿಲ್ ಮಂಡಿಸುತ್ತೇವೆ. ಹೊರಗೆ ಮಾತನಾಡುವುದನ್ನೆಲ್ಲಾ ಇಲ್ಲಿ ಪ್ರಸ್ತಾಪಿಸುವುದು, ಆಕ್ಷೇಪಿಸುವುದು ಸರಿಯಲ್ಲ ಎಂದರು.

ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮುಖ್ಯಮಂತ್ರಿಯವರು ಈ ವರ್ಷವೇ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಹೇಳಿಲ್ಲ. ಈಗಾಗಲೇ 2 ರಿಂದ 3 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದೇವೆ. ಮುಂದಿನ ವರ್ಷ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ಸದನದ ಸಂಪ್ರದಾಯಕ್ಕೆ ಧಕ್ಕೆಯಾಗುವ ಯಾವ ಅಂಶಗಳೂ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ದ್ವೇಷ. ಅದಕ್ಕೆ ಮುಸ್ಲಿಂರ ಅಭಿವೃದ್ಧಿಗೆ ಹಣ ನೀಡುತ್ತೇವೆ ಎಂದಾಕ್ಷಣ ಗದ್ದಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನ ನರೇಂದ್ರಸ್ವಾಮಿ ಮಾತನಾಡಿ, ಕಂಚಿನ ಪ್ರತಿಮೆ ಮಾಡುತ್ತೇವೆ ಎಂದು ಹೇಳಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಪ್ರತಿಮೆ ನಿರ್ಮಿಸಿದ ವ್ಯಕ್ತಿಗಳು ಇಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರತಿಪಕ್ಷಗಳಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Leave a Reply