ಐ.ಎಸ್.ಐ ಸಂಪರ್ಕ ಹೊಂದಿರುವ ಜೊತೆಗೆ ಸಿಎಂ ವೇದಿಕೆ ಹಂಚಿಕೊಂಡಿದ್ದಾರೆ: ಯತ್ನಾಳ್

2 years ago

#CM #shared #platform #ISI #nexus #BasanagowdaPatilaYatnal

ಬೆಳಗಾವಿ: ಪಾಕಿಸ್ತಾನದ ಗುಪ್ತಚರ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಆ ವ್ಯಕ್ತಿಯ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಐಎಸ್ಐ ಹಾಗೂ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಇದು ಅತ್ಯಂತ ದುರ್ದೈವ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಅದು ಹೇಗೆ ಜಾರಿ ಮಾಡುತ್ತೀರಿ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ. ಇಂಥವರ ಬಗ್ಗೆ ಕಾಳಜಿ ತೋರುವ ಮುಖ್ಯಮಂತ್ರಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಅವರ ಜೊತೆ ಯಾರು, ಯಾರು ಇರಬೇಕೆಂದು ಮೊದಲು ತೀರ್ಮಾನವಾಗುತ್ತದೆ. ಅಲ್ಲದೆ ಅವರ ಪೂರ್ವಾಪರ ಹಿನ್ನೆಲೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವಾಗ ಪೊಲೀಸ್ ಇಲಾಖೆ ಹಾಗೂ ಗುಪ್ತಚರಕ್ಕೆ ಮಾಹಿತಿ ಇರುವುದಿಲ್ಲವೇ ಎಂದರು.

ಮೌಲ್ವಿಯ ಹಿನ್ನೆಲೆ ಏನೆಂಬುದನ್ನು ಒಂದು ವಾರದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ. ಮುಖ್ಯಮಂತ್ರಿಯವರು ಇಂಥವರ ಜೊತೆ ವೇದಿಕೆ ಹಂಚಿಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಣ ಹಂಚುತ್ತೇನೆ ಎಂದು ಹೇಳಿದ್ದಾರೆ. ನೀವು ಕೇವಲ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ನಿಮಗೆ ಕೇವಲ ಅವರೊಬ್ಬರೇ ಮಾತ್ರ ಮತ ಹಾಕಿದ್ದಾರೆಯೇ ಎಂದರು.

ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣಬೇಕು. ಕೇವಲ ವೋಟ್ ಬ್ಯಾಂಕ್ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಹೀಗೆ ತುಷ್ಟೀಕರಣ ಮಾಡಿದ್ದರಿಂದಲೇ ನಿಮ್ಮ ಪರಿಸ್ಥಿತಿ ಏನಾಯಿತು ಎಂಬುದನ್ನು ಪಂಚರಾಜ್ಯ ಚುನಾವಣೆಯಿಂದಾದರೂ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

ಆದರೆ ಇದು ಸುಳ್ಳು ಎಂದು ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.

Leave a Reply