ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣ ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೇ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಹಿಂದಿನ ಸರ್ಕಾರದ ತನಿಖೆಗೆ ಆದೇಶ ನೀಡಿರುವುದು ಕಾನೂನು ಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂಪುಟ ಸಭೆಯಲ್ಲಿ ಹಿಂದಿನ ಸರ್ಕಾರದ ನಿರ್ಧಾರ ವಾಪಸ್ ಪಡೆಯಲು ಕೈಗೊಂಡ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸರ್ಕಾರದ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರ್ಕಾರದ ಅನುಮತಿ ಅವಶ್ಯ ಎಂದರು.
ಕಳೆದ 2019ರಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಇವರ ವಿರುದ್ಧ ತನಿಖೆಗೆ ಕಾನೂನು ರೀತ್ಯ ವಿಧಾನ ಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು. ಆದರೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆದಿಲ್ಲ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಅಂದಿನ ಸಿಎಂ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ರೀತ್ಯ ಸರಿಯಲ್ಲ ಎಂದರು.
ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿರುವುದರಿಂದ ಅದು ಸರಿಯಲ್ಲ. ಅದನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದು ತೀರ್ಮಾನಿಸಿರುವುದಾಗಿ ಹೇಳಿದರು.
ನವೆಂಬರ್ 29 ರಂದು ನ್ಯಾಯಾಲಯ ಕೂಡ ಆದೇಶವನ್ನು ಎತ್ತಿಹಿಡಿಯುವ ಭಯದಿಂದ ಸರ್ಕಾರ ಇದನ್ನು ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ ಎಂದರು.




