ಬಿಜೆಪಿ – ಜೆಡಿಎಸ್ ನವರಿಗೆ ಕೆಲಸವಿಲ್ಲ: ಡಿ.ಕೆ.ಶಿವಕುಮಾರ್

2 years ago

#nowork #BJP #JDS #DKShivakumar #Siddaramaiah #Yatindra

ಬೆಂಗಳೂರು: ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಹತಾಶೆ ಹಾಗೂ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿಯವರಿಗೆ ಕೆಲಸ ಇಲ್ಲ. ಯತೀಂದ್ರ ಸಿದ್ದರಾಮಯ್ಯ ಕೆಡಿಪಿ ಸದಸ್ಯರಾಗಿದ್ದಾರೆ. ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು. ಜನಸಂಪರ್ಕ ಸಭೆ ನಡೆಸುವಾಗ ಫೋನಿನಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕೆಲವು ಶಾಲೆಗಳಿಗೆ ಕುರ್ಚಿ, ಬೆಂಚುಗಳನ್ನು ಪೂರೈಸುವ ಪ್ರಯತ್ನ ನಡೆಯುತ್ತಿದೆ. ಆ ಪಟ್ಟಿ ತಯಾರಿಸುವಾಗ ವಿವೇಕಾನಂದ ಎಂಬ ಅಧಿಕಾರಿ ಒಂದೆರಡು ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಸಮಾಜಾಯಿಷಿ ನೀಡಿದರು.

ಸ್ಥಳೀಯರು ಈ ಬಗ್ಗೆ ಯತೀಂದ್ರ ಅವರಿಗೆ ದೂರು ನೀಡಿದ್ದಾರೆ. ಚುನಾವಣೆ ವೇಳೆ ಮಾತುಕೊಟ್ಟಂತೆ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕರ್ತವ್ಯ. ಯತೀಂದ್ರ ಅದರಂತೆ ನಡೆದುಕೊಂಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದರು.

ತಂದೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪರವಾಗಿ ಯತೀಂದ್ರ ವರುಣಾ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಫೋನ್ನ್ಲ್ಲಿ ಮಾತನಾಡುವಾಗ ಎಲ್ಲಿಯೂ ಅಧಿಕಾರಿಗಳ ಹೆಸರು ಹಾಗೂ ಹುದ್ದೆ ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್-ಬಿಜೆಪಿಯವರು ವರ್ಗಾವಣೆ ದಂಧೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply