ಬೆಂಗಳೂರು: ಸಂಯುಕ್ತ ಹೋರಾಟ – ಕರ್ನಾಟಕ ದ ರಾಜ್ಯ ಘಟಕದ ಕೋರ್ ಸಮಿತಿ ಸಭೆಯು ದಿನಾಂಕ:05.08.2021ರಂದು ಶ್ರೀ ಬಡಗಲಪುರ ನಾಗೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದು, ವಿದ್ಯುತ್ ತಿದ್ದುಪಡಿ ಮಸೂದೆ-2021ನ್ನು ಪ್ರತಿರೋಧಿಸಿ ಅಖಿಲ ಭಾರತ ವಿದ್ಯುತ್ ನೌಕರರ ಹಾಗೂ ಇಂಜಿನೀಯರುಗಳ ಸಂಘಗಳ ಸಮನ್ವಯ ಸಮಿತಿ (NCCOEEE) ಕರೆಯ ಮೇರೆಗೆ, ದೇಶದ್ಯಾಂತ ಎಲ್ಲಾ ವಿದ್ಯುತ್ ಕಂಪನಿ ಹಾಗೂ ಸಂಸ್ಥೆಗಳ ನೌಕರರು ಮತ್ತು ಇಂಜಿನೀಯರುಗಳು ಆಗಸ್ಟ್ 10, 2021ರಂದು 24 ತಾಸುಗಳ ಕಾಲ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ. ಸದರಿ ಮುಷ್ಕರಕ್ಕೆ ಸಂಯುಕ್ತ ಹೋರಾಟ- ಕರ್ನಾಟಕ ರಾಜ್ಯ ಘಟಕ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ಅದಾಗಲೇ, ಕಳೆದ ಆಗಸ್ಟ್–ಸೆಪ್ಟಂಬರ್ ತಿಂಗಳಿನಿಂದಲೇ ದೇಶದಾದ್ಯಂತ ರೈತರು ಹಾಗೂ ಕಾರ್ಮಿಕರು, ನಾಗರೀಕರು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೇಶದ ವಿದ್ಯುತ್ ಕ್ಷೇತ್ರವನ್ನು ತೆರೆಯುವ ಈ ಕರಾಳ ಮಸೂದೆಯನ್ನು ಕೇಂದ್ರ ಸರಕಾರ ಈ ಕೂಡಲೇ ವಾಪಾಸು ಪಡೆಯುವಂತೆ ಒತ್ತಾಯಿಸಿ ಹೋರಾಟದಲ್ಲಿ ತೊಡಗಿದ್ದಾರೆ. ಇದೀಗ ವಿದ್ಯುತ್ ಕಂಪನಿಗಳು ಹಾಗೂ ನಿಗಮ ಮುಂತಾದ ಸಂಸ್ಥೆಗಳ ನೌಕರರು ಮತ್ತು ಇಂಜಿನೀಯರುಗಳು ದೇಶವ್ಯಾಪಿಯಾಗಿ ಆ ಕರಾಳ ಕಾಯ್ದೆಗೆ ತೀವ್ರ ಪ್ರತಿರೋಧ ಒಡ್ಡಲು ಮುಂದಾಗಿರುವುದು ರೈತ ಚಳುವಳಿಗೆ ಆನೆ ಬಲ ಬಂದಂತಾಗಿದೆ.
ಇನ್ನಾದರೂ, ಕೇಂದ್ರ ಸರಕಾರ ದೇಶದ್ರೋಹಿಯಾದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿಯ ವಿರೋಧಿಯಾದ ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನ ಮತ್ತು ರೈತರ ಪಂಪ್ ಸೆಟ್ ಹಾಗೂ ಭಾಗ್ಯ ಜ್ಯೋತಿ ಮತ್ತು ಮನೆಗಳ ವಿದ್ಯುತ್‌ಗೆ ಪ್ರೀ ಪೇಯ್ಡ್ (ಮುಂಗಡ ಹಣ ಪಡೆಯುವ) ಮೀಟರ್ ಅಳವಡಿಕೆಯ ಪ್ರಸ್ತಾಪಗಳಿರುವ ಕರಾಳ ವಿದ್ಯುತ್ ಮಸೂದೆಯನ್ನು ಈ ಕೂಡಲೇ ವಾಪಾಸು ಪಡೆಯುವಂತೆ ಸಂಯುಕ್ತ ಹೋರಾಟ-ಕರ್ನಾಟಕ ಬಲವಾಗಿ ಒತ್ತಾಯಿಸಿದೆ.
ಇದು ದೇಶದ ಕೃಷಿಯನ್ನು ಸರ್ವನಾಶ ಮಾಡಲಿದೆ, ಭಾಗ್ಯಜ್ಯೋತಿ ಬಳಕೆದಾರರನ್ನು ಕತ್ತಲಲ್ಲಿಡುತ್ತದೆ. ಸಣ್ಣ ಕೈಗಾರಿಕೆಗಳನ್ನು ಹೊಸಕಿ ಹಾಕುತ್ತದೆ ಅದೇ ರೀತಿ ಗ್ರಾಹಕರನ್ನು ಲೂಟಿಗೊಳಪಡಿಸಲಿದೆ.
ಸಂಯುಕ್ತ ಹೋರಾಟ-ಕರ್ನಾಟಕ ಎಲ್ಲಾ ಅಂಗ ಸಂಘಟನೆಗಳು ಮತ್ತು ಜಿಲ್ಲಾ ಹಾಗೂ ತಾಲೂಕಾ ಘಟಕಗಳು ವಿದ್ಯುತ್ ನೌಕರರ ಮುಷ್ಕರವನ್ನು ಬೆಂಬಲಿಸಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಯುಕ್ತ ಹೋರಾಟ-ಕರ್ನಾಟಕ ರಾಜ್ಯ ಘಟಕ ಕರೆ ನೀಡಿದೆ.



