ನಾನು ಢುಂಢಿ ಕಾದಂಬರಿಯನ್ನು ಬರೆದಾಗ ಗಣಪತಿಯನ್ನು ಅವಹೇಳನ ಮಾಡಿದ್ದೇನೆಂದು ಬೊಬ್ಬೆ ಇಟ್ಟವರಾರೂ ಕೃತಿಯನ್ನು ತೆರೆದ ಮನದಿಂದ ಓದಲೇ ಇಲ್ಲ ಎಂಬುದು ನನಗೆ ಆಗ ಸ್ಪಷ್ಟವಾಗಿತ್ತು. ಏಕೆಂದರೆ ಢುಂಢಿಯಲ್ಲಿ ಗಣಪತಿಯೇ ನಾಯಕ. ಬಂಡಾಯದ ನಾಯಕ. ಅತ್ಯಂತ ಗೌರವಾನ್ವಿತ ನಿಲುವಿನ ಮತ್ತು ಸ್ವಾಭಿಮಾನದ ಒಲವಿನ ಅರಣ್ಯಕನಾಗಿದ್ದು ಹೇಗೆ ಮಹಾಗಣಪತಿಯಾದನೆಂದು ಚಿತ್ರಿಸುತ್ತದೆ.

ಕಾದಂಬರಿಯು ಬೊಟ್ಟು ಮಾಡುವುದು ಆರ್ಯರ ಆಕ್ರಮಣಕಾರಿ ಧೋರಣೆಗಳ ಬಗ್ಗೆ, ಅವರ ಕುಟಿಲ ನೀತಿಗಳ ಬಗ್ಗೆ ಮತ್ತು ಭಾರತದ ಮೂಲ ನಿವಾಸಿಗಳ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ. ಗಣಪತಿ ಅನಾರ್ಯನೆಂದೂ, ಅದರಲ್ಲೂ ಭಾರತೀಯ ಬುಡಕಟ್ಟು ಗಣಗಳಿಗೆ ಸೇರಿದವನೆಂದು ಪ್ರತಿಪಾದಿಸುವುದೇ ಆಗಿದೆ.
ಅದೇನೇ ಇರಲಿ, ಗಣಪತಿಯ ಪರಿಕಲ್ಪನೆಯ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಅನೇಕಾನೇಕ ಹಂತಗಳಿವೆ. ಅದರಲ್ಲೂ ಆತನ ಹಿಗ್ಗಾಮುಗ್ಗ ಬಳಸಿಕೊಳ್ಳುವುದರಲ್ಲೂ ನಮ್ಮ ಜನ ಹಿಂದೆ ಬಿದ್ದಿಲ್ಲ.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇ ಸರ್ವವಿಘ್ನೋಪ ಶಾಂತಯೇ
ಈ ಶ್ಲೋಕದಲ್ಲಿ ವಿಘ್ನ ಎಂಬ ಪದ ಪ್ರಯೋಗವನ್ನು ಆಧರಿಸಿ ವಿಷ್ಣುವಿನ ಕುರಿತಾದ ಈ ಸ್ತುತಿಯನ್ನು ಗಣೇಶನಿಗೆ ಅರ್ಪಿಸಿಬಿಟ್ಟರು.
ಹಾಗಾಗಿ ವಿಷ್ಣುವಿನ ಸ್ತೋತ್ರವು ಗಣಪತಿಗೆ ಸಲ್ಲಿಸುವುದು ರೂಢಿಯಾಗಿಬಿಟ್ಟಿದೆ.
ಈ ಶ್ಲೋಕದ ಮೂಲ ಮತ್ಸ್ಯಪುರಾಣದಲ್ಲಿದೆ. ಕೃತಯುಗದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯಕ್ಕೆ ನೇಮಿಸಲ್ಪಟ್ಟಾಗ ಸೋಮಕನೆಂಬ ಅಸುರನು ವೇದಗಳನ್ನು ಅಪಹರಿಸಿಕೊಂಡು ಓಡಿ ಹೋಗುವನು. ಏನು ಮಾಡುವುದೆಂದು ತೋಚದೇ ಬ್ರಹ್ಮನು ವಿಷ್ಣುವನ್ನು ಕುರಿತು ಪ್ರಾರ್ಥಿಸುವನು. ದಶಾವತಾರದ ಮೊದಲನೆಯ ಅವತಾರವಾದ ಈ ಮತ್ಸ್ಯಾವತಾರದಲ್ಲಿ ವಿಷ್ಣುವು ರೂಪುಗೊಂಡಾಗ ಶುಕ್ಲಾಂಬರಧರಂ ವಿಷ್ಣುಂ ಶ್ಲೋಕವನ್ನು ಬ್ರಹ್ಮನು ಹೇಳುವನು ಎಂದು ಆ ಪುರಾಣದಲ್ಲಿ ಹೇಳಲಾಗುತ್ತದೆ.
ಹಾಗೆಯೇ ಮತ್ತೊಂದು ಮೂಲದಲ್ಲಿ ಗಜೇಂದ್ರನು ಮೊಸಳೆಯ ಬಾಯೊಳು ಸಿಕ್ಕಿ ತಪ್ಪಿಸಿಕೊಳ್ಳಲಾಗದೇ ಹೋದಾಗ ಈ ರೀತಿ ವಿಷ್ಣುವನ್ನು ಪ್ರಾರ್ಥಿಸಿದನೆಂದೂ ಹೇಳಲಾಗುತ್ತದೆ. ಏನಾದರಾಗಲಿ, ಈ ಶ್ಲೋಕವು ವಿಷ್ಣುವಿಗೆ ಸಂಬಂಧಿಸಿದ್ದು. ಎಮ್ ಎಸ್ ಸುಬ್ಬುಲಕ್ಷ್ಮಿಯವರು ವಿಷ್ಣುಸಹಸ್ರನಾಮವನ್ನು ಪಠಿಸುವಾಗ ಮೊದಲನೆಯ ಶ್ಲೋಕವಾಗಿ ಇದನ್ನು ಹೇಳುವುದು ಗಣೇಶನ ಸ್ಮರಿಸಲು ಅಲ್ಲ. ವಿಷ್ಣುವಿನ ನಾಮ ಪರಾಯಣವೇ ಆಗಿದೆ.
ಇರಲಿ, ಈ ಶ್ಲೋಕವನ್ನು ಸಾಧಾರಣ ಶ್ಲೋಕವೆಂದು ಪರಿಗಣಿಸಿ ಯಾವ ದೇವತೆಗಾದರೂ ವಿಘ್ನವನ್ನು ಪರಿಹರಿಸು ಎಂದು ಪ್ರಾರ್ಥಿಸಿದರೆ ತಲೆ ಹೋಗುವುದೇನಿಲ್ಲ. ಆದರೆ, ಈ ಲೇಖನದ ಉದ್ದೇಶವೆಂದರೆ ಗಣಪತಿಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಅಥವಾ ಅದರ ಬಗ್ಗೆ ಇರುವಂತಹ ವಿಷಯಗಳ ಒಗಟುಗಳನ್ನು ಬಿಡಿಸಿ ಗಣಪತಿಯನ್ನು ಇನ್ನೂ ಆಪ್ತವಾಗಿ ಅರಿಯುವುದು.
ಮೂರ್ತಿರಾಯರ ಗಣಪತಿಯ ಬಗ್ಗೆ ಪ್ರಶ್ನೆ:-
“…….. ಶಿವನೂ ವಿಷ್ಣುವೂ ಕೊನೆಮೊದಲಿಲ್ಲದವರು. ಅವರ ಅವತಾರಗಳಿಗೆ ಆದಿ-ಅಂತ್ಯಗಳುಂಟೇ ಹೊರತು ಮೂಲತಃ ಅವರಿಗೆ ಇಲ್ಲ. ಗಣಪತಿಯ ಜನ್ಮದ ವಿಷಯದಲ್ಲಿ ಹಲವಾರು ಕಥೆಗಳುಂಟು. ಅವನಿಗೆ ಆದಿ ಉಂಟು, ಸ್ಪಷ್ಟವಾಗಿ ಹುಟ್ಟು ಉಂಟು. ಈಗ ನಾನು ಹೇಳಲಿರುವ ಜನ್ಮ ಕಥೆ ಎಲ್ಲರಿಗೂ ಪರಿಚಿತವಾದದ್ದು.
ಪಾರ್ವತಿ ಒಂದು ದಿನ ಸ್ನಾನಕ್ಕೆ ಹೊರಟಳಂತೆ. ಸ್ನಾನದ ಮನೆಗೆ ಇತರರು ನುಗ್ಗದಂತೆ ತಡೆಯಲು ಕಾವಲುಗಾರನೊಬ್ಬ ಬೇಕಾಯಿತು. ತನ್ನ ಮೈಮೇಲಿನ ಕೊಳೆಯನ್ನು (ಪಾಠಾಂತರ: ಮೈಗೆ ಲೇಪಿಸಿದ್ದ ಸುಗಂಧವನ್ನು) ಶೇಖರಿಸಿ ಹುಡುಗನ ಆಕಾರವುಳ್ಳ ಪುಟ್ಟ ಗೊಂಬೆಯೊಂದನ್ನು ತಯಾರಿಸಿದಳು. ಅದಕ್ಕೆ ಜೀವ ಕೊಟ್ಟು ಕಾವಲಾಗಿ ನಿಲ್ಲಿಸಿದಳು. ಕೆಲವು ನಿಮಿಷಗಳಾದ ಮೇಲೆ ಶಿವ ಅಲ್ಲಿಗೆ ಬಂದ. ಆ ಹುಡುಗ ಅವನನ್ನು ತಡೆದ. ಶಿವ ರೇಗಿ ಅವನ ತಲೆಯನ್ನು ಕತ್ತರಿಸಿದ. ಪಾರ್ವತಿ ಇದನ್ನು ನೋಡಿ ಸಂಕಟಪಟ್ಟಳು. ಅವಳನ್ನು ಸಮಾಧಾನಿಸಲು ಶಿವ ಆ ಹುಡುಗನನ್ನು ಬದುಕಿಸುವ ಪ್ರಯತ್ನ ಮಾಡಿದ. ಹುಡುಗನಿಗೆ ತಲೆ ಇರಲಿಲ್ಲವಲ್ಲ! “ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿರುವವನೊಬ್ಬನ ತಲೆಯನ್ನು ಕತ್ತರಿಸಿ ತನ್ನಿ” ಎಂದು ಸೇವಕರಿಗೆ ಅಪ್ಪಣೆ ಮಾಡಿದ. ಹಾಗೆ ಮಲಗಿದ್ದವರು ಯಾರೂ ಸಿಕ್ಕಲಿಲ್ಲ –ಆನೆಯೊಂದನ್ನು ಹೊರತು. ಸೇವಕರು ಅದರ ತಲೆಯನ್ನೇ ತಂದರು. ಶಿವ ಅದನ್ನು ಹುಡುಗನ ಮುಂಡಕ್ಕೆ ಜೋಡಿಸಿ ಆ ವ್ಯಕ್ತಿಗೆ ಜೀವ ತುಂಬಿದ. ಹೀಗೆ ಹುಟ್ಟಿದವನು, ನಮ್ಮ ಗಜವದನ!
ಗೊಂಬೆಯನ್ನು ಮಾಡುವುದಕ್ಕೆ ಪಾರ್ವತಿಗೆ ಹಿಟ್ಟು, ಮಣ್ಣು ಮುಂತಾದ ಬೇರೆ ಯಾವ ಸಾಮಗ್ರಿಯೂ ಸಿಕ್ಕಲಿಲ್ಲವೇ?
ಆಕೆಯ ಮೈಮೇಲೆ ಪುಟ್ಟ ಹುಡುಗನ ಪ್ರಮಾಣದ ಗೊಂಬೆಯನ್ನು ಮಾಡುವುದಕ್ಕೆ ಬೇಕಾದಷ್ಟು ಕೊಳೆ (ಅಥವಾ ಸುಗಂಧ ದ್ರವ್ಯ) ಇತ್ತೇ?
ಅವಳ ಸ್ನಾನದ ಮನೆಗೆ ಬಾಗಿಲು ಅಗುಳಿಗಳೇನೂ ಇರಲಿಲ್ಲವೇ? ಶಿವನಾದರೂ ದಾದು ಫಿರ್ಯಾದು ಏನೂ ಯೋಚಿಸದೇ ಚಿಕ್ಕ ಹುಡುಗನನ್ನು ಕೊಲ್ಲುವಷ್ಟು ಕ್ರೂರಿಯೇ?
ಹುಡುಗನನ್ನು ಮತ್ತೆ ಬದುಕಿಸಲು ಬೇಕಾದ ತಲೆ – ಆ ಹುಡುಗನದೇ ತಲೆ- ಹತ್ತಿರದಲ್ಲಿಯೇ ಬಿದ್ದಿತ್ತಲ್ಲ (ಅಥವಾ ಶವದ ರುಂಡವೊಂದನ್ನು ಮಾತ್ರ ಸಾಗಿಸಿಬಿಟ್ಟಿದ್ದರೋ?) ಅದನ್ನು ಬಿಟ್ಟು ಬೇರೆ ತಲೆಯನ್ನೇಕೆ ತರಿಸಬೇಕಿತ್ತು? ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದವರು ಯಾರೇ ಆಗಲಿ, ನಿಷ್ಕಾರಣವಾಗಿ ಅವರನ್ನು ಕೊಲ್ಲುವುದು ಅನ್ಯಾಯವಲ್ಲವೇ? ಅವರು ಮಾಡಿದ ಅಪರಾಧವೇನು? (ಇದಕ್ಕೆ ಕೆಲವರು ಖೋಟಾ ವೈಜ್ಞಾನಿಕ ಉತ್ತರ ಕೊಡುತ್ತಾರೆ. ಅದೇನೆಂಬುದು ಮರೆತುಹೋಗಿದೆ-ಉತ್ತರದಿಕ್ಕಿನಿಂದ ಹರಿಯುತ್ತದೆಂದು ಹೇಳಲಾದ ಕಾಂತ ಶಕ್ತಿಗೆ ಸಂಬಂಧಪಟ್ಟದ್ದು)-ಇಂಥ ಪ್ರಶ್ನೆಗಳನ್ನು ಕೇಳಬಾರದು.
ನದೀಮೂಲ ಋಷಿಮೂಲಗಳನ್ನು ಬೆದಕಿಕೊಂಡು ಹೋಗಬಾರದಂತೆ. ಅಂದಮೇಲೆ ದೇವರ ಮೂಲವನ್ನು ಬೆದಕುವವನಿಗೆ ಕ್ಷಮೆಯುಂಟೇ?” ಎಂದು ಶ್ರೀ ಎ ಎನ್ ಮೂರ್ತಿರಾವ್‍ರವರು, 1991ರಿಂದ 2ಂ12ರವರೆಗೆ 22 ಮುದ್ರಣಗಳನ್ನು ಕಂಡಿರುವ, ತಮ್ಮ ಪಂಪ ಪ್ರಶಸ್ತಿ ಪಡೆದಿರುವ ವೈಚಾರಿಕ ಕೃತಿಯಾದ “ದೇವರು” ಪುಸ್ತಕದಲ್ಲಿ ಕೇಳಿದ್ದಾರೆ.
ಈ ಬಗೆಯ ಪ್ರಶ್ನೆಗಳು ಯಾವುದೇ ಒಂದು ಸಣ್ಣ ಹುಡುಗನಿಗೂ ಬರುವವು. ಹಾಗೆ ಪ್ರಶ್ನೆಗಳು ಬಾರದೇ ಹೋದಲ್ಲಿ, ಆ ವ್ಯಕ್ತಿಯ ಮನಸ್ಥಿತಿಯ ಬಗ್ಗೆ, ಸಹಜವಾಗಿ ಇರಬೇಕಾದ ವೈಚಾರಿಕ ಮನೋಭಾವದ ಆರೋಗ್ಯದ ಬಗ್ಗೆ ಅನುಮಾನ ಬರುತ್ತದೆ. ಪ್ರಶ್ನೆಗಳು ಬಂದಾಗ ನಿರ್ಧಿಷ್ಟವಾಗಿ ಉತ್ತರವನ್ನು ಪಡೆಯಲಾಗದಿದ್ದರೂ ಪ್ರಶ್ನೆಗಳು ಒಯ್ಯುವ ದಾರಿಯಲ್ಲಿ ನಡೆಯುವುದು ಒಂದು ಅದ್ಭುತವಾದ ಅನುಭವ ಮತ್ತು ಅನುಭೂತಿ. ಪ್ರಶ್ನೆಗಳನ್ನು ಕೇಳುವುದರಿಂದ ಉತ್ತರಗಳು ಸಿಗುವ ಖಾತ್ರಿಯೇನೂ ಇಲ್ಲ. ಆದರೆ, ಅವುಗಳಿಂದ ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಅವುಗಳು ಮತ್ತಷ್ಟು ಹೊಸತಾಗಿರುತ್ತವೆ. ನಿಜ ಹೇಳಬೇಕೆಂದರೆ, ಹೊಸ ಪ್ರಶ್ನೆಗಳು ನೀಡುವ ಆನಂದ, ನಿರ್ಧರಿತವಾದ ಉತ್ತರಗಳು ದೊರಕುವುದಕ್ಕಿಂತ ಆಹ್ಲಾದಕರ. ಒಂದು ಬಗೆಯ ಉನ್ಮತ್ತವಾದ ಪ್ರಯಾಣ. ಪ್ರಶ್ನೆಗಳು ಹುಟ್ಟಬಾರದು ಎಂದರೆ, ಹುಟ್ಟಿದರೂ ಕೇಳಬಾರದು, ಕೇಳಿದರೂ ಉತ್ತರಿಸಬಾರದು ಎಂದರೆ- ಅದೇ ಪ್ರಗತಿಪರ ಚಿಂತನೆಗಳಿಗೆ ಕೊನೆ. ವೈಚಾರಿಕತೆಯು ಅರಳಬಾರದು, ಬೆಳೆಯಬಾರದೆಂದೇ ಮಾಡಿರುವ ಚಂಡಶಾಸನ.
ಮನುಕುಲದ ಯಾವ ವಿಷಯಗಳೂ ಇಂತಹ ಚಂಡಶಾಸನದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿಯೇ ಯಾವುದೇ ಪಟ್ಟಭದ್ರ ಹಿತಾಸಕ್ತಿಯ ಅಂಕುಶಕಾರರು ಅದೆಷ್ಟೇ ಪ್ರಯತ್ನಿಸಿದರೂ ವೈಚಾರಿಕ ಕ್ರಾಂತಿ ನಡೆಯುತ್ತಲೇ ಇದೆ. ವಿಕಾಸ ಕ್ರಮ ಜೀವಂತವಾಗಿಯೇ ಇದೆ. ಬರಿಯ ವೈಚಾರಿಕ ವಿಶ್ಲೇಷಣೆಗಳು ಆಧಾರ ರಹಿತವಾದಾಗ ವಿಷಯಗಳು ಪೊಳ್ಳಾಗಿಬಿಡುತ್ತವೆ. ಅವುಗಳು ಅಧ್ಯಯನದ ವ್ಯಾಪ್ತಿಗೂ ಒಳಪಟ್ಟಾಗ ವಿಚಾರಗಳು ಗಟ್ಟಿಯಾಗುವುದಲ್ಲದೇ, ನಮಗೇ ತಿಳಿದಿರದ ನಮ್ಮದೇ ಸಮಾಜದ ಮತ್ತು ಸಂಸ್ಕೃತಿಯ ಹರವು ಅರಿವಾಗುತ್ತಾ ಹೋಗುತ್ತದೆ. ಇದು ಆತ್ಮ ಸಾಕ್ಷಾತ್ಕಾರದಷ್ಟೇ ಶ್ರೇಷ್ಟವಾದುದು.
ಗತಕಾಲದ ಸತ್ಯಗಳು ಪುರಾಣಗಳ ಕಲ್ಪನೆಗಳಲ್ಲಿ ಅಭಿವ್ಯಕ್ತವಾಗುತ್ತವೆ ಎಂದು ಮಾರ್ಕ್ಸ್ ಹೇಳಿರುವುದು ಪೂರ್ವಾಗ್ರಹಗಳಿಲ್ಲದ ಅಧ್ಯಯನಶೀಲನಿಗೆ ಒಂದು ಹಂತಕ್ಕೆ ಅಹುದೆಂದು ಗೋಚರವಾಗುವುದು.
ಪುರಾಣಗಳ ರಚನೆ ನಾನಾ ಉದ್ದೇಶಗಳಿಂದ, ನಾನಾ ಪರಿಕಲ್ಪನೆಗಳಿಂದ, ನಾನಾ ಕಾರಣಗಳಿಂದ ರಚಿತವಾಗಿದ್ದರೂ ಅಧ್ಯಯನ ದೃಷ್ಟಿಯಿಂದ ಪರಿಶೀಲಿಸಲು ಹೊರಟಾಗ ಹಲವು ಕೌತುಕವಾದ ವಿಷಯಗಳು ತಿಳಿಯುತ್ತಾ ಹೋಗುವವು. ಈ ತಿಳುವಳಿಕೆಯು ನಮ್ಮ ಸಾಂಸ್ಕೃತಿಕ ಬೆಳವಣಿಗೆಯ ಬಗ್ಗೆ ಗೌರವನ್ನು ಬೆಳೆಸುವುದೇ ಹೊರತು ತಿರಸ್ಕಾರವನ್ನಾಗಲಿ, ಉಪೇಕ್ಷೆಯನ್ನಾಗಲಿ ಉಂಟುಮಾಡುವುದಿಲ್ಲ. ಆದರೆ, ಆಯಾ ವಿಷಯದ ಬಗ್ಗೆ ಪುರೋಹಿತರು ಒಡ್ಡಿಟ್ಟಿರುವ ಅನಗತ್ಯವಾದ ಆಸೆಗಳಾಗಲಿ, ಭಯಗಳಾಗಲಿ ಇರುವುದಿಲ್ಲ. ನಾವು ಈ ಮೌಢ್ಯಾಧಾರಿತವಾದ ಭಯದಿಂದ ಅಥವಾ ಆಸೆಗಳಿಂದ ಬಿಡುಗಡೆ ಹೊಂದಿದರೆ, ಬಹುಶಃ ಅದನ್ನೇ ಬಂಡವಾಳವನ್ನಾಗಿಸಿಕೊಂಡು ದುರ್ಬಲ ಮನಸ್ಕರ ನೀಡುವಿಕೆಯ ಮೇಲೆ ಬದುಕುತ್ತಿರುವ ಅನೇಕ ವ್ಯಾಪಾರಿಗಳ ವ್ಯವಹಾರಕ್ಕೆ ತೊಡಕಾಗುವ ಕಾರಣದಿಂದಲೋ ಏನೋ ದೇವರ ಮೂಲವನ್ನು ಬೆದಕಬಾರದು, ಹುಡುಕಬಾರದು ಎಂದು ಅಲಿಖಿತ ಶಾಸನವೊಂದನ್ನು ಜಾರಿಯಲ್ಲಿಟ್ಟಿರುವುದು. ಅದೇನೇ ಇರಲಿ, ಈ ಬಗೆಯ ಅಧ್ಯಯನಗಳು ನಮ್ಮದೇ ಆದ ಸಾಮಾಜಿಕವಾದ ವಿಕಾಸ ಕ್ರಮವನ್ನು ಹೇಳುವುದಲ್ಲದೇ, ವೈಚಾರಿಕ ನೆಲೆಗಟ್ಟಿನಿಂದ ಧಾರ್ಮಿಕವೆಂದು ಹೇಳಿರುವಂತಹ ಹಲವು ವಿಷಯಗಳು ಅರ್ಥವಾಗುತ್ತಾ ಹೋಗುತ್ತವೆ.
ಆದಿಪೂಜಿತನೆಂದು ಹೇಳಲಾಗುವ ಗಣಪತಿಯಿಂದಲೇ ಈ ತಿಳುವಳಿಕೆಯ ಜಾಡನ್ನು ಹಿಡಿದು ಹೋಗುವುದರಿಂದ ನಮಗೇನೂ ತೊಂದರೆಯಿಲ್ಲ. ಗಣಪತಿಯಿಂದ ಆರಂಭವಾಗಿ, ಗೌರಿ, ಕೃಷ್ಣ, ಇಂದ್ರ, ಅಗ್ನಿ, ಮರುತ್ತರು, ಶಿವ ಇತರರ ಮೂಲಕ ಸಮಕಾಲಿನ, ಇತ್ತೀಚೆಗೆ ಹುಟ್ಟಿಕೊಂಡಿರುವ ದೇವತೆಗಳವರೆಗೂ ಬರಬಹುದು ಎಂದೆನಿಸುತ್ತದೆ.
ನಿಮಗೆ ಆಶ್ಚರ್ಯವೆನಿಸಬಹುದು. ಕೆಲವು ದೇವತೆಗಳು ತೀರಾ ಇತ್ತೀಚೆಗೆ, ಕೆಲವೇ ವರ್ಷಗಳ ಹಿಂದೆ ಹುಟ್ಟಿದರು. ಆದರೆ, ಅವರನ್ನು ತೀರಾ ಪುರಾತನರೆಂದು ಬಿಂಬಿಸಲಾಗಿದೆ. ಅದು ಹೇಗೆ? ಏಕೆ? ಎಲ್ಲವನ್ನೂ ಸವಿಸ್ತಾರವಾಗಿ ನೋಡುತ್ತಾ ಬರೋಣ.
ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಂಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದ ಸಾದನಂ
ಎಂದು ಋಗ್ವೇದದ ಎರಡನೆಯ ಮಂಡಲದ ಇಪ್ಪತ್ತಮೂರನೆಯ ಸೂಕ್ತದ ಮೊದಲನೆಯ ಮಂತ್ರವಿದೆ.
ಈ ಮಂತ್ರಕ್ಕೆ, ಗಣಪತಿ-ಸೂಕ್ತ ಮತ್ತು ಬ್ರಹ್ಮಣಸ್ಪತಿ-ಸೂಕ್ತ ಎಂದು ಎರಡೂ ರೀತಿಯಿಂದ ಕರೆಯಲಾಗುತ್ತದೆ.
ವೇದಕಾಲದ ಕವಿಗಳಿಗೆ ಆನೆ ಮುಖದ ಗಣಪತಿ ಗೊತ್ತಿರಲಿಲ್ಲ. ಇಲ್ಲಿ ಹೇಳಲಾಗುವ ಗಣಪತಿಯನ್ನು ಸದಸತ್ಪತಿ, ಜ್ಯೇಷ್ಠರಾಜ, ಬೃಹಸ್ಪತಿ ಮೊದಲಾದ ನಾಮಗಳಿಂದ ಸಂಭೋಧಿಸಿದೆ. ಎರಡನೆಯ ಮಂಡಲದ ಇಪ್ಪತ್ತಮೂರನೆಯ ಸೂಕ್ತದ ಒಂಭತ್ತೂ ಮಂತ್ರಗಳಲ್ಲಿ ಗಣಪತಿಯನ್ನು ಬೃಹಸ್ಪತಿ ಎಂದೇ ಸಂಬೋಧಿಸಿದೆ.
ಈ ಬೃಹಸ್ಪತಿ, ಬ್ರಹ್ಮಣಸ್ಪತಿ ಮತ್ತು ಬ್ರಹ್ಮ ಎಂದರೆ ಒಂದೇ ಎಂದು ಶ್ರೀ ಅರವಿಂದರು ಹೇಳಿದ್ದಾರೆ.
ಗಣಪತಿಯು ದೇವತೆಗಳಲ್ಲಿ ಗಣನೆಗೆ ಬಂದಾಗ ಮಾತ್ರ ದೃಷ್ಟ ಋಷಿಗಳು ಮಂತ್ರಗಳ ಜನಕರಾಗಿಹೋಗಿದ್ದರು. ಗಣಪತಿಯ ಪೂಜೆಗೆ ಆಗ ಮಂತ್ರಗಳಿರಲಿಲ್ಲ. ಮಂತ್ರಗಳಿಲ್ಲದೇ ಪೂಜೆಯನ್ನು ಮಾಡುವಂತಿರಲಿಲ್ಲ. ಲೌಕಿಕ ಸಂಸ್ಕೃತದಲ್ಲಿ ಶ್ಲೋಕಗಳನ್ನು ಗಣಪತಿಯ ಪರವಾಗಿ ರಚಿಸಿದರು. ಆದರೂ ವೇದಮಂತ್ರಗಳ ಅಭಾವದಿಂದ ಕಾರ್ಯಗಳು ಪೂರ್ಣವಾದರೂ ಮನಸ್ಸಿಗೆ ಸಮಾಧಾನ ಉಂಟಾಗುತ್ತಿರಲಿಲ್ಲ. ಯಾವ ಮಂತ್ರದಲ್ಲಿ ಗಣಪತಿ ಶಬ್ದದ ಪ್ರಯೋಗವಿರುತ್ತಿತ್ತೋ ಆ ಮಂತ್ರಗಳೆಲ್ಲವೂ ಗಣೇಶನ ಪರಗಳೆಂದಾದವು. ವೇದಗಳಲ್ಲಿ ಎಲ್ಲಿಯೂ ಆ ಮಂತ್ರಗಳು ಗಣೇಶನ ಪರಗಳೆಂದು ಹೇಳಿಲ್ಲ. ಗಣಪತಿ ಶಬ್ದ ಪ್ರಯೋಗವು ಬೃಹಸ್ಪತಿಗೆ ಸಂಬಂಧಿಸಿದುದು.
ಅಂದರೆ, ವೇದಗಳಲ್ಲಿ ಗಣೇಶನ ದರ್ಶನವಿಲ್ಲ. ಆದರೆ ಪುರಾಣಗಳಲ್ಲಿ ಅವನ ವಿಷಯ ಬಹಳವಾಗಿ ವರ್ಣಿತವಾಗಿದೆ. ತಂತ್ರಗಳಲ್ಲಿ ಚಕಿತಗೊಳಿಸುವ ಅವನ ವಿಗ್ರಹವಿಚಾರಗಳಿವೆ.
ಪುರಾಣಗಳ ರಚನಾಕಾಲವು ಗುಪ್ತರ ಕಾಲಕ್ಕೆ ಸಮನಿರಬಹುದೆಂದು ತಿಳಿಯಬರುತ್ತದೆ. ಕೆಲವು ತಂತ್ರ-ಗ್ರಂಥಗಳು ಹಾಗೂ ಆ ಗ್ರಂಥಗಳ ಕೆಲವು ಅಂಶಗಳು ಪುರಾಣದಷ್ಟೇ ಪ್ರಾಚೀನ.
ಪುರಾಣಗಳಲ್ಲಿ ಗಣಪತಿಯ ಪೂಜೆಯು ಚರ್ಚಿತವಾಗಿರುವುದರಿಂದ ಪುರಾಣಗಳಿಗಿಂತ ಮೊದಲೇ ಗಣಪತಿ ಪ್ರಸಿದ್ಧನಾಗಿರಬೇಕು. ವಿಕ್ರಮಶಕೆ 5 ಅಥವಾ 6ನೆಯ ಶತಮಾನದಲ್ಲಿ ಭಾರತೀಯರಿಗೆ ಗಣಪತಿ ಪರಿಚಿತನಾಗಿದ್ದನು. ಬುದ್ಧನ ಕಾಲದ ದೇವಗಣಗಳಲ್ಲಿ ಗಣಪತಿಯು ಸೇರಿದ್ದನೆಂದು ಹೇಳುವುದು ಕಷ್ಟ.
ಬುದ್ಧನು ಬ್ರಹ್ಮ, ಇಂದ್ರ ಹಾಗೂ ಇತರ ದೇವತೆಗಳನ್ನು ಉಲ್ಲೇಖಿಸಿದ್ದಾನೆ. ಆದರೆ ಗಣೇಶನನ್ನು ಎಲ್ಲಿಯೂ ಹೇಳಿಲ್ಲ. ಅದೇ ಸಮಯದ ತೀರ್ಥಂಕರ ವರ್ಧಮಾನನು ಎಲ್ಲಿಯೂ ಗಣಪತಿಯನ್ನು ಉದಾಹರಿಸಿಲ್ಲ.
ಡಾ. ಸಂಪೂರ್ಣಾನಂದ ಆ. ಮರಿಬಸವರಾಧ್ಯರು ಹೀಗೇ ತಮ್ಮ ವಿದ್ವತ್ಪೂರ್ಣ ಸಂಶೋಧನಾತ್ಮಕ ಗಮನಿಸುವಿಕೆಯನ್ನು ಮುಂದುವರಿಸುತ್ತಾರೆ. ಶ್ರುತಿಕಾಲದ ಆನಂತರ ಮತ್ತು ಪುರಾಣಕಾಲದ ಮಧ್ಯದಲ್ಲಿ ಗಣಪತಿಯು ಎಲ್ಲಿಂದ ಹೇಗೆ ಬಂದು ದೇವತೆಗಳ ಶ್ರೇಣಿಯಲ್ಲಿ ಸ್ಥಾನವನ್ನು ಪಡೆದನು? ಬುದ್ಧ ಹಾಗೂ ಪುರಾಣಗಳ ಅಂತರ ಸುಮಾರು 1000 ವರ್ಷಗಳಿರಬಹುದು. ಈ ಅಂತರದಲ್ಲಿ ಆರ್ಯರ ದೇವತೆಗಳ ಶ್ರೇಣಿಯಲ್ಲಿ ಹೇಗೆ ಬಂದನೆಂಬುದೇ ಸಮಸ್ಯೆಯಾಗಿದೆ. ವೇದಗಳಲ್ಲಿ ಇಂದ್ರ, ಅಗ್ನಿ, ವರುಣರು ಪಧಾನರಾಗಿದ್ದು ಪುರಾಣಗಳಲ್ಲಿ ಮಾಂಡಲೀಕರಾಗಿದ್ದಾರೆ. ವೇದಗಳಲ್ಲಿ ಅಪ್ರಧಾನರಾದ ವಿಷ್ಣು ಮತ್ತು ರುದ್ರರು ಪುರಾಣಗಳಲ್ಲಿ ಪ್ರಧಾನರಾಗಿದ್ದಾರೆ. ಆದರೆ ವೈದಿಕದಲ್ಲಿ ಅಸ್ತಿತ್ವವಿಲ್ಲದೇ ಇದ್ದರೂ ಪುರಾಣಗಳಲ್ಲಿ ಅಗ್ರಸ್ಥಾನ ಪಡೆದವನು ಗಣಪತಿಯೊಬ್ಬನೇ. ಇಷ್ಟಲ್ಲದೇ ವೇದಾನುಯಾಯಿಗಳು ಗಣಪತಿಯ ಉಪಾಸಕರಾಗಿದ್ದಾರೆ. ನಂತರ ವಿಕಸಿತವಾಗಿದ್ದ ಬೌದ್ಧ- ಸಂಪ್ರದಾಯದಲ್ಲಿ ಗಣೇಶನ ವರ್ಣನೆಗಳು ಬರುತ್ತವೆ.
ಪುರಾಣಗಳೆಲ್ಲವೂ ಒಂದೇ ಸಮಯದಲ್ಲಿ, ಒಂದೇ ಸ್ಥಾನದಲ್ಲಿ ಒಬ್ಬನೇ ಬರೆದವಲ್ಲ. ಆದುದರಿಂದ ಕಥೆಗಳು ಒಂದೇ ತೆರನಾಗಿಲ್ಲ.
ಗಣಪತಿಯ ವಿಷಯದಲ್ಲೂ ಅಷ್ಟೇ. ಅವನಿಗೆ ಸಂಬಂಧಪಟ್ಟ ಪುರಾಣಗಳೂ ಭಿನ್ನ ಭಿನ್ನವಾಗಿವೆ. ಒಂದೊಂದನ್ನೂ ಹಲವಾರು ರೀತಿಯಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತವೆ.
ಪುರಾಣಗಳ ವಿಶ್ಲೇಷಣೆಗಳು ಏಕಪ್ರಕಾರವಾಗಿ, ಏಕಮುಖವಾಗಿ ನಡೆಯಲು ಸಾಧ್ಯವಿಲ್ಲ. ಅಧ್ಯಯನಗಳು ನಾನಾ ಮುಖವಾಗಿ ನಡೆದರೂ ಕೊನೆಗೊಂದು ಸಂಕ್ಷಿಪ್ತ ಉತ್ತರದ ಗುರಿಯನ್ನು ತಲುಪಬೇಕಾಗುತ್ತದೆ. ನಾನಿಲ್ಲಿ, ಗಣಪತಿ: ಬಂಡಾಯದ ದಳಪತಿ ಎಂದು ಶೀರ್ಷಿಕೆಯಲ್ಲಿ ಕರೆದಿರುವ ಕಾರಣವು ಒಂದು ತುಲನಾತ್ಮಕ ವಿಚಾರವೇ ಆಗಿದೆ. ಏಕೆ ಮತ್ತು ಹೇಗೆ ಎಂದು ಮುಂದೆ ನೋಡೋಣ.
ವಿನಾಯಕ: ಕೇಡಿನ ಅಪರಾವತಾರ ಎನ್ನುವವರು ಯಾರು?
ಇದು ಬೇಡ, ಇದು ಕೇಡು ಎಂದ ವಸ್ತುವನ್ನು ಅಥವಾ ವ್ಯಕ್ತಿಯನ್ನು ಇದೇ ಬಹುಮುಖ್ಯವಾದುದು, ಇದೇ ಶ್ರೇಷ್ಟ ಎಂದು ಹೇಳುವುದು ಏನೂ ಆಶ್ಚರ್ಯದ ವಿಷಯವಲ್ಲ ಹಾಗೂ ತಪ್ಪೂ ಅಲ್ಲ. ಯಾವುದೇ ಒಂದು ವಿಷಯವನ್ನು ನಕಾರಾತ್ಮಕಗುಣದಿಂದ ಗುರುತಿಸಿದ್ದು, ತದ ನಂತರ ಅದನ್ನು ಸಕಾರಾತ್ಮಕವಾಗಿ ನೋಡುವಂತಹ ಪ್ರಕ್ರಿಯೆಯಾಗಲಿ ಅಥವಾ ಬೇರೊಂದು ಮಗ್ಗುಲಿನಿಂದ ನೋಡುವಂತಹ ದೃಷ್ಟಿಕೋನವಾಗಲಿ, ಅದು, ವಿಚಾರಗಳು ಮಡುಗಟ್ಟದೇ ವಿಕಾಸವಾಗುವಂತಹ ಸಂಕೇತವೇ. ಆದರೆ, ವಿಷಯದ ಮೇಲಾಗಿರುವ ಗುರುತುಗಳ ಚರಿತ್ರೆಯನ್ನು ಅಲ್ಲಗಳೆಯಲಾಗದು. ಪ್ರಸ್ತುತ ಯಾವುದೇ ಅಭಿಪ್ರಾಯದಲ್ಲಿ ಅಥವಾ ಮನೋಭಾವದಲ್ಲಿ ವಸ್ತುವನ್ನು ಸ್ವೀಕರಿಸಿದ್ದರೂ, ಅದರ ಬಗ್ಗೆ ಇದ್ದಂತಹ ಈ ಹಿಂದಿನ ಮನೋಭಾವವೂ ಅಸ್ತಿತ್ವದಲ್ಲಿದ್ದು, ನಂತರ ಬದಲಾಗಿದ್ದು ಎಂಬುದನ್ನು ನಿರಾಕರಿಸಲು ಹೇಗೆ ಸಾಧ್ಯ?
ಒಂದು ಮನೋಭಾವದಿಂದ ಮತ್ತೊಂದು ಮನೋಭಾವಕ್ಕೆ ಬದಲಾಗುವಂತಹ ಪ್ರಕ್ರಿಯೆಗೆ ನಾನಾ ಕಾರಣಗಳಿರುತ್ತವೆ, ಆಶಯಗಳಿರುತ್ತವೆ ಮತ್ತು ಉದ್ದೇಶಗಳಿರುತ್ತವೆ. ಅವು ಬಹಳ ಕುತೂಹಲಕರವಾಗಿತ್ತದೆ. ಅವು ಬಹಳ ಮುಖ್ಯವಾದುದ್ದೂ ಕೂಡ. ಅದರಿಂದಲೇ ವಸ್ತುವನ್ನು ಸತ್ಕರಿಸುವ ರೀತಿ, ಸ್ವೀಕರಿಸುವ ಕಾರಣ ಅಥವಾ ನಿರಾಕರಿಸುವ ಕಾರಣ ಎಲ್ಲವೂ ತಿಳಿಯುವುದು. ಆಗಲೇ ಒಬ್ಬನ ವಸ್ತುನಿಷ್ಠತೆ, ದೃಷ್ಟಿಕೋನ, ಸೈದ್ಧಾಂತಿಕ ನಿಲುವು ಮತ್ತು ಒಲವು ಎಲ್ಲವೂ ತಿಳಿಯುವುದು.
ವಿಘ್ನಗಳ ಒಡೆಯನು ವಿಘ್ನೇಶ್ವರ.
ತೊಂದರೆಗಳನ್ನು ತಂದೊಡ್ಡುವಂತಹ ವಿಘ್ನಕರ್ತನು ಕಾಲಕ್ರಮೇಣ ತೊಂದರೆಗಳನ್ನು ನಿವಾರಿಸುವಂತಹ ವಿಘ್ನಹರ್ತನಾಗಿದ್ದು ಒಂದು ಸುದೀರ್ಘಪ್ರಯಾಣ.
ಮಹಾಭಾರತದಲ್ಲಿಯೂ ಗಣೇಶ್ವರರು, ಗಣಪತಿಯರು ಅಥವಾ ವಿನಾಯಕರು ಎಷ್ಟೋ ಸಂಖ್ಯೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಇರುವವರೆಂದು ಹೇಳಿದೆ.
ಗಣಪತಿ ಕೆಡುಕಿನ ಅವತಾರವೆಂದು ಕ್ರಿಸ್ತಪೂರ್ವ 5ನೆಯ ಶತಮಾನಗಳಷ್ಟು ಹಳೆಯದಾದ ಗೃಹ್ಯ ಸೂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಮಾನವ ಗೃಹ್ಯಸೂತ್ರ(2.14)ದಲ್ಲಿ ದೆವ್ವ ಅಥವಾ ಪಿಶಾಚಿ ಮೆಟ್ಟಿಕೊಂಡರೆ ಆಗುವಂತೆ ಈ ವಿನಾಯಕರು ಮೆಟ್ಟಿಕೊಂಡರೆ ಆಗುತ್ತದೆ ಎಂದು ತಿಳಿಸುವರು.
“ವಿನಾಯಕರು ಆವರಿಸಿಕೊಂಡರೆ, ನೀರಿನ ಕೊಳಗಳ ಬಳಿ ಅಲೆದಾಡಿಕೊಂಡು, ಹುಲ್ಲನ್ನು ಕತ್ತರಿಸಿಕೊಂಡು, ಮೈಮೇಲೆ ಗೀಚಿಕೊಂಡಿರುವನು. ಕನಸಿನಲ್ಲಿ ನೀರನ್ನೂ, ತಲೆಬೋಳಿಸಿಕೊಂಡಿರುವ ಮನುಷ್ಯರನ್ನೂ, ಒಂಟೆಗಳನ್ನು, ಹಂದಿಗಳನ್ನು, ಕತ್ತೆಗಳನ್ನು ನೋಡುವನು. ಗಾಳಿಯಲ್ಲಿ ತೇಲಿಕೊಂಡು ಹೋಗುತ್ತಿರುವ ಹಾಗೆ ಭಾಸವಾಗುವ ಇವನಿಗೆ, ಹಿಂದಿನಿಂದ ಯಾರೋ ಬಂದು ಹಿಡಿದುಕೊಂಡು ಅಧೀನದಲ್ಲಿಟ್ಟುಕೊಳ್ಳುವಂತೆ ಭಾಸವಾಗುವುದು.” ಹಾಗೆಯೇ ಮುಂದುವರಿಸಿ, ಈ ವಿನಾಯಕರು ದೆವ್ವದಂತೆ ಮೆಟ್ಟಿಕೊಂಡಾದ ಮೇಲೆ, “ಆಳಲು ಯೋಗ್ಯವಾಗಿದ್ದರೂ ರಾಜಕುಮಾರನು ಸಿಂಹಾಸನವೇರನು. ಕನ್ಯೆಯು ಸುಲಕ್ಷಣವಾಗಿದ್ದರೂ ಅವಳಿಗೆ ಮದುವೆಯಾಗದು. ಹೆಣ್ಣು ಫಲವತ್ತಾಗಿದ್ದರೂ ಅವಳಿಗೆ ಮಕ್ಕಳಾಗದು. ಬೋಧಿಸಲು ಯೋಗ್ಯವಾಗಿರುವ ಗುರುವು ಶಿಷ್ಯರನ್ನು ಪಡೆಯನು. ವಾಣಿಜ್ಯ ಮತ್ತು ಕೃಷಿ ಯಶಸ್ವಿಯಾಗದು.”
ನೀತಿಶಾಸ್ತ್ರವನ್ನು ಹೇಳುವ ಯಾಜ್ಞವಲ್ಕ್ಯನೂ ತನ್ನ ಸ್ಮೃತಿಯಲ್ಲಿ (1.271) ರುದ್ರ ಮತ್ತು ಬ್ರಹ್ಮರಿಂದ ನೇಮಿತವಾದ ವಿನಾಯಕನು ಗಣಗಳಿಗೆ ಒಡೆಯನಾಗಿದ್ದು, ತೊಂದರೆಗಳನ್ನು ತಂದೊಡ್ಡುವನು ಎಂದೇ ಪ್ರಾರಂಭಿಸುವನು. ಮಾನವ ಗೃಹ್ಯಸೂತ್ರ ಮತ್ತು ಯಾಜ್ಞವಲ್ಕ್ಯ ಸ್ಮೃತಿಗಳ ನಡುವೆ ಮನುಸ್ಮೃತಿಯೆಂಬುದೊಂದಿದೆ. ಈ ಗ್ರಂಥದಲ್ಲಿ(3.164) ಮನು ಗಣಹೋಮದಲ್ಲಿ ಭಾಗವಹಿಸಿರುವವರನ್ನು ಶ್ರಾದ್ಧದ ಊಟಕ್ಕೂ ಕರೆಯಬಾರದೆಂದು ಹೇಳುವನು. ಹಾಗೆಯೇ ಗಣಪತಿಯು ಶೂದ್ರರ ದೇವತೆಯೆಂದೂ ಹೇಳುವನು (ಗಿಕಿ1931-2. 475).
ಶೂದ್ರರೆಂದರೆ, ಮನುವು ಹೇಳುವಂತೆ (1ಂ.125) ಕೇವಲ ಉಟ್ಟು ಬಿಟ್ಟ ಬಟ್ಟೆಯನ್ನು ತೊಡುವವರು, ಉಂಡು ಬಿಟ್ಟ ಎಂಜಿಲೂಟವನ್ನು ತಿನ್ನುವ ಅಧಿಕಾರದವರು.
ಯಾಜ್ಞವಲ್ಕ್ಯ, ಮನು ಮತ್ತು ಕಾತ್ಯಾಯನರಂತಹ ಬ್ರಾಹ್ಮಣ ಶಾಸ್ತ್ರಕಾರರು ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ಗಣಪತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ನಿರೂಪಣೆಗಳನ್ನು ತಿಳಿಸಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವೆಂದು ನಾವು ತಿಳಿದು ತಳ್ಳಿಹಾಕಿಬಿಡಲು ಸಾಧ್ಯವಿಲ್ಲ. ಯಾಕೆಂದರೆ, ಅವು ಕಾಲ್ಪನಿಕ ಕಾದಂಬರಿಗಳೋ, ಕಥೆಗಳೋ ಅಲ್ಲ. ಬದಲಾಗಿ ನೀತಿಶಾಸ್ತ್ರಗಳು, ಸಮಾಜವನ್ನು ಮತ್ತು ಸಮೂಹವನ್ನು ಕ್ರಿಯೆಗೆ ಹಚ್ಚುವಲ್ಲಿ ಬಹು ಮಾನ್ಯವಾಗುವಂತಹ ನಿರ್ದೇಶನಾಗ್ರಂಥಗಳು.
ಮತ್ತೊಂದು ಮಗ್ಗುಲಿನಿಂದ ನೋಡುವುದಾದರೆ, ಅವು ಆಗಿನ ಕಾಲದ ಬ್ರಾಹ್ಮಣ್ಯವರ್ಗದ ಸಾಮೂಹಿಕ ಅಭಿಪ್ರಾಯವೋ, ನಿಲುವೋ ಅಥವಾ ದೃಷ್ಟಿಕೋನವೋ ಆಗಿರಬಹುದು. ಯಾವುದೇ ಒಂದು ಪ್ರಭಾವಶಾಲಿಯಾದ ಸಮೂಹವು, ಅದರಲ್ಲೂ ಬ್ರಾಹ್ಮಣ್ಯದ ಪಂಗಡವು ಯಾರೊ ಒಬ್ಬಾತನಿಗೆ ನೀನೊಂದು ನೀತಿಶಾಸ್ತ್ರವೊಂದನ್ನು ಬರೆ ಇನ್ನು ಮುಂದೆ ಅವನ್ನು ನಾವು ಅನುಸರಿಸುತ್ತೇವೆ ಎಂದು ಅಧಿಕಾರ ಕೊಟ್ಟುಬಿಡುವುದಿಲ್ಲ. ಅವರಲ್ಲಿ ನಡೆದುಬರುತ್ತಿರುವ ವಿಚಾರ, ಆಚಾರ ಮತ್ತು ಪದ್ಧತಿಗಳನ್ನು ಗಮನಿಸುತ್ತಾ, ಅವುಗಳನ್ನು ಕ್ರೋಢೀಕರಿಸುತ್ತಾ ಅದರ ನಿಲುವಿಗೆ ಬದ್ಧವಾಗಿಯೇ ನೀತಿಶಾಸ್ತ್ರವನ್ನು ರಚಿಸುವರು. ಪರಂಪರೆಯಾಗಿ ನಡೆದುಕೊಂಡು ಬಂದಿರುವಂತಹ ಪದ್ಧತಿಗಳನ್ನು ಸೂಚ್ಯವಾಗಿ ತಿಳಿಸಿರಲಿಕ್ಕೂ ಸಾಧ್ಯ. ಹಿಂದೂ ಧರ್ಮವನ್ನು ಪ್ರತಿನಿಧಿಸುವ ಗ್ರಂಥಗಳಾದ ಯಾಜ್ಞವಲ್ಕ್ಯ ಸ್ಮೃತಿ, ಮಾನವ ಗೃಹ್ಯಸೂತ್ರಗಳಲ್ಲಿ ಮತ್ತು ಮನು ಗಣಪತಿಯ ಬಗ್ಗೆ ಅಸಹನೆ, ಕಟುತ್ವ ಮತ್ತು ದ್ವೇಷವನ್ನು ವ್ಯಕ್ತಪಡಿಸಿದಂತೆ, ಅದೇ ಮುಂದುವರೆದು ಬೌದ್ಧಾಯನ ಬರೆದಿರುವಂತಹ ಧರ್ಮಸೂತ್ರದಂತಹ ಬೌದ್ಧಗ್ರಂಥಗಳಲ್ಲಿಯೂ ಗಣಪತಿಯ ಬಗ್ಗೆ ದ್ವೇಷವನ್ನು ಮತ್ತು ಅಸಹನೆಯನ್ನು ವ್ಯಕ್ತಪಡಿಸಿರುವ ಉದಾಹರಣೆಗಳು ಉಂಟು.
ನೀತಿ ನೇಮಗಳ ಬೌದ್ಧ ದೇವತೆಯಾದ ಮಹಾಕಾಲನು ತನ್ನ ಪಾದಗಳ ಕೆಳಗೆ ಗಣಪತಿಯನ್ನು ಮಣಿಸಿರುವ ನೇಪಾಳದ ಬೌದ್ಧ ವಿಗ್ರಹಗಳಿವೆ. ಹಾಗೆಯೇ ಬೌದ್ಧರ ದೇವತೆಯಾದ ಮಂಜುಶ್ರೀಯು ಗಣಪತಿಯನ್ನು ತನ್ನ ಕಾಲ ಕೆಳಗೆ ಹಾಕಿಕೊಂಡಿರುವಂತಹ ಶಿಲ್ಪಗಳೂ ಅಪರೂಪವೇನಲ್ಲ. ಮಹಾಕಾಲ ದೇವತೆಯ ಪರಿಕಲ್ಪನೆಯು ಆಗಿನ ಕಾಲದ ಮೇಲ್ವರ್ಗದವರೊಂದಿಗೆ ತಳುಕು ಹಾಕಿಕೊಂಡಿದ್ದಂತಹ ನಿರೂಪಣೆಗಳು ಸಾಕಷ್ಟಿವೆ.
ಇನ್ನು ಪುರಾಣಗಳ ಕಡೆ ಹೊರಳೋಣ.
ಗಣಪತಿಯನ್ನು ಕುರಿತಂತೆ, ಗಣಪತಿಯ ಹುಟ್ಟಿನ ಕುರಿತಂತೆಯೂ ಹಲವು ಪುರಾಣಗಳಲ್ಲಿ ಹಲವು ರೀತಿಗಳಲ್ಲಿ ಹೇಳಲ್ಪಟ್ಟಿವೆ. ಆದರೆ, ಜನಪ್ರಿಯವಾದ ಹಾಗೂ ಹೆಚ್ಚು ಪ್ರಚಲಿತದಲ್ಲಿರುವ ಕಥೆಯನ್ನೇ ನಾವು ಪರಿಗಣಿಸೋಣ. ಪಾರ್ವತಿ ತನ್ನ ಮೈಯ ಮಲದಿಂದ ಅಥವಾ ಮಣ್ಣಿಂದ ಮೂರ್ತಿಯನ್ನು ಮಾಡಿ ಅದಕ್ಕೆ ಜೀವತುಂಬಿ ತನ್ನ ಸ್ನಾನದ ಮನೆಗೆ ಕಾವಲಿಗೆ ನಿಲ್ಲಿಸುವುದು. ಆ ನಂತರ ಶಿವ ಬರುವುದು. ಇವನು ತನ್ನ ತಾಯಿಯ ಆಜ್ಞೆಯಂತೆ ಶಿವನನ್ನೇ ತಡೆಯುವುದು. ನಂತರ ಯುದ್ಧವಾಗುವುದು. ಶಿವನ ತ್ರಿಶೂಲಕ್ಕೆ ಬಾಲಕನ ಶಿರ ಹರಿದುಬೀಳುವುದು. ಪಾರ್ವತಿಯ ಗೋಳು. ಉತ್ತರಕ್ಕೆ ತಲೆ ಹಾಕಿ ಮಲಗಿರುವವರ ತಲೆ ತರುವ ಆಜ್ಞೆ. ಹಾಗೆ ಹುಡುಕಿದಾಗ ಯಾರೂ ಸಿಗದೇ ಆನೆಯ ತಲೆಯನ್ನು ತರಿದು ತಂದು ಬಾಲಕನ ಮುಂಡಕ್ಕೆ ಅಂಟಿಸುವುದು. ಆಪರೇಷನ್ ಸಕ್ಸಸ್ ಆಗಿ ನಮಗೆ ಗಜವದನನಾದ ಗಣಪತಿಯು ದೊರಕುವುದು.
ಸರಿ, ಪುರಾಣದ ಮಾತ್ರವಲ್ಲ, ನೈಜ ಚಿತ್ರಣದ ಕಥೆಯನ್ನು ಓದುವಾಗಲೂ, ಆ ಕಥೆಗಳಲ್ಲಿ ಅಮೂರ್ತವಾದ ಸಿದ್ಧಾಂತಗಳು, ನಿಲುವುಗಳು, ಸಾಂಸ್ಕೃತಿಕ ಪ್ರಭಾವಗಳು, ಸಾಮಾಜಿಕ ಸ್ಥಿತಿಯ ಪ್ರತಿಫಲನಗಳು ಮತ್ತು ವೈಯಕ್ತಿಕ ಒಲವುಗಳು ಹಾಗೂ ಅಭಿರುಚಿಗಳು ಅವುಗಳಲ್ಲಿ ಹಾಸುಹೊಕ್ಕಾಗಿರುತ್ತವೆ. ಯಾವುದೇ ಕಥೆಯನ್ನು ನೇರವಾಗಿ ಪದಗಳನ್ನು ಓದಿ ಹಾಗೆಯೇ ಗ್ರಹಿಸುವುದೆಂದರೆ, ತೊಟ್ಟಿರುವ ಉಡುಪಿನ ಹಿಂದೆ ದೇಹವೇ ಇಲ್ಲ ಎಂಬಷ್ಟೇ ಆಗುತ್ತದೆ. ಪದಗಳೆಂಬುವು ಭಾವ ಹಾಗೂ ವಿಚಾರದ ಸಂಕೇತಗಳು. ಅವುಗಳ ಜೋಡಣೆಗಳೆಂದರೆ ಭಾವಾರ್ಥಗಳ ಮತ್ತು ವಿಚಾರಗಳ ಹರವುಗಳು ಮತ್ತು ಚಲನೆಗಳಾಗಿ ವಾಕ್ಯಗಳಾಗುವವು. ಆವೆಲ್ಲಾ ವಾಕ್ಯಗಳ ಸಮಗ್ರ ಸಂಗ್ರಹವು ಒಂದು ಬಗೆಯ ಚಿತ್ರಣವನ್ನು ಒದಗಿಸುತ್ತದೆ. ಇಷ್ಟು ಕೆಲಸವಾಗುವಂತಹ ಬರವಣಿಗೆಯನ್ನು ಮತ್ತು ಓದುವಿಕೆಯನ್ನು ಸಹನೆಯಿಂದ ಗ್ರಹಿಸಲಾಗದ ಮನಃಸ್ಥಿತಿಯವರಿಗೆ ಯಾವುದೇ ಓದು ಮತ್ತು ಬರವಣಿಗೆ ಸಾಧ್ಯವೂ ಇಲ್ಲ.
ರಸಗ್ರಹಣವೋ, ಅರ್ಥಗ್ರಹಣವೋ… ಹಾಗೆಂದರೆ ಏನು? ಅಸಹನೀಯರಿಗೆ ಅವೆಲ್ಲವೂ ಅಸ್ತಿತ್ವದಲ್ಲೇ ಇಲ್ಲ!
ಸಂಕೇತಗಳು ಸೂಚ್ಯವಾಗಿರುತ್ತವೆ. ಕೆಲವೊಮ್ಮೆ ಸರಳವಾಗಿದ್ದರೆ, ಕೆಲವೊಮ್ಮೆ ಒಗಟಿನ ರೀತಿಯಲ್ಲಿ ಮಾರ್ಮಿಕವಾಗಿರುತ್ತವೆ. ಯಾವುದಕ್ಕೂ ಪದಗಳ ಹಿಂದಿನ ಅಮೂರ್ತಭಾವವನ್ನು ಪರಿಗ್ರಹಿಸುವ ಸೂಕ್ಷ್ಮ ಮನಃಸ್ಥಿತಿ ತಕ್ಕ ಮಟ್ಟಿಗಾದರೂ ಅಗತ್ಯ.
ಬ್ರಾಹ್ಮಣ್ಯದ ಮುಂದಾಳುಗಳು ಅಂದು ಸೂಚಿಸಿರುವಂತೆ ಕೇಡಿನ ಅಪರಾವತಾರವಾದ ಗಣಪತಿ ಬರಿಯ ಕ್ಷುಧ್ರನಷ್ಟೇ ಅಲ್ಲ, ಕೆಳವರ್ಗದವನೂ ಕೂಡ. ಅಂದು, ಪ್ರಾಯಶಃ ಇಂದೂ ಅವರಿಗೆ ಅಪಾರ ಅಸಹನೆಯ ಕಿರಿಕಿರಿಯಾಗಿರುವ ಶೂದ್ರ ವರ್ಗವು ಅವರಿಂದ ಸಹಜವಾಗಿಯೇ ತಿರಸ್ಕೃತಗೊಳ್ಳಲಾಗುವ, ಒಪ್ಪಿಕೊಳ್ಳಲಾಗದಂತಹುದ್ದೇ ಆಗಿದೆ. ಅಂತಹ ವರ್ಗದಲ್ಲಿ ಸೂಚಿಸಿರುವಂತಹ ಗಣಪತಿಯನ್ನು ಪುರಾಣದ ಕತೆಗಳಲ್ಲಿರುವ ಸಂಕೇತದೊಡನೆ ಸಮೀಕರಿಸಿದಾಗ, ಅದು ಪರ್ವತ ರಾಜನ ಮಗಳು ಪಾರ್ವತಿಯ, ಗಿರಿಕನ್ಯೆಯಾದ ಗಿರಿಜೆಯ ಮೈಯ ಮಲಕ್ಕೆ ಅಥವಾ ಮಣ್ಣಿಗೆ ಒಯ್ಯಲಾಗುತ್ತದೆ. ಹಾಗೆ ಮೂರ್ತೀಕರಿಸಿದ ಗಣಪತಿ ಸಂಘರ್ಷದ ನಂತರ ಗಣಪತಿಯಾಗಿ ಅಧಿಕಾರಕ್ಕೆ ಬರುತ್ತಾನೆ. ಪ್ರಕೃತಿ, ಅರಣ್ಯ, ಪರ್ವತಗಳನ್ನೇ ಸಂಕೇತಿಸುವ ಮಾತೃಪ್ರಧಾನ ಪಾರ್ವತಿಯ ಸಂಕೇತವು ಗಣಪತಿಯನ್ನು ಪೋಷಿಸಿದ್ದು, ಬೆಳೆಸಿದ್ದು ಢಾಳಾಗಿ ಕಾಣುತ್ತದೆ. ಹಾಗೆ ಬೆಳೆದಿರುವ ಗಣಪತಿಯು ತನ್ನ ಬ್ರಾಹ್ಮಣ್ಯಾಧಿಕ್ಯದ ವಿರುದ್ಧದ ಮೂಲವಾದ ಶೂದ್ರ ಅಥವಾ ಅರಣ್ಯಕ-ಆದಿವಾಸಿಗಳೊಂದಿಗೇ ಗುರುತಿಸಲ್ಪಟ್ಟಿದ್ದು, ವೈದಿಕರೊಂದಿಗೆ ಸಂಘರ್ಷವನ್ನು ಸಹಜವಾಗಿಯೇ ಹೊಂದಿರುತ್ತಾನೆ.
ಶಿವ ಮತ್ತು ಪಾರ್ವತಿಯರು ಏಕಾಂತದಲ್ಲಿರುವಾಗ ಅಧಿಕ ಪ್ರಸಂಗದಲ್ಲಿ ವರ್ತಿಸುತ್ತಾ ಹೋಗುವ ಪರಶುರಾಮನ ಜೊತೆ ಗಣಪತಿಯು ಯುದ್ಧವಾಡುತ್ತಾನೆ. ಆ ಕಾಳಗದಲ್ಲಿ ಗಣಪತಿಯ ದಂತವೊಂದು ಮುರಿದು ಅವನು ಏಕದಂತನಾಗುತ್ತಾನೆ.
ಬ್ರಹ್ಮವೈವರ್ತ ಪುರಾಣದ ಕಥೆಯಲ್ಲಿ ಸೂಚ್ಯವಾಗಿರುವ ಈ ವಿಷಯವನ್ನು ಗಮನಿಸಿದರೆ, ಇದು ಇನ್ನೂ ಸ್ಪಷ್ಟವಾಗುತ್ತದೆ. ಪರಶುರಾಮ ಶಾಸ್ತ್ರಪಾರಂಗತನಾಗಿದ್ದು, ಶಸ್ತ್ರವನ್ನು ಹಿಡಿದು, ತನ್ನ ಬ್ರಾಹ್ಮಣ್ಯದ ಅಧಿಪತ್ಯವನ್ನು ಕೆಳವರ್ಗದವರ ಮೇಲೆ ಸ್ಥಾಪಿಸುವವನಾಗಿ ಕಂಡು ಬಂದರೆ, ಗಣಪತಿ ಅವನೊಡನೆ ಹೋರಾಡಿ, ತನ್ನ ಒಂದು ದಂತವನ್ನು ಮುರಿದುಕೊಂಡು, ಶಿವನ ಮೇಲಿನ ಗೌರವದಿಂದ ಅಂದರೆ, ತನ್ನಂತದ್ದೇ ಬುಡಕಟ್ಟಿನ ಒಡೆಯನ ಸಂಸರ್ಗವು ಆ ಬ್ರಾಹ್ಮಣನೊಡನೆ ಇರುವುದರಿಂದ ತಾನು ಸುಮ್ಮನಾಗಿಬಿಡುವ ರಾಜೀಮನೋಭಾವವಿದೆ.
ಅದೇನೇ ಇರಲಿ, ಸಂಘರ್ಷವೊಂದು ಎದ್ದು ಕಾಣುವುದನ್ನು ನಾವು ತಳ್ಳಿ ಹಾಕಲು ಸಾಧ್ಯವೇ ಇಲ್ಲ. ತದ ನಂತರದ ಕಾಲಘಟ್ಟದಲ್ಲಿ ಇದೇ ಬ್ರಾಹ್ಮಣ್ಯವರ್ಗವು ಅದೇ ಗಣಪತಿಯನ್ನು ಆದಿಪೂಜಿತನಾಗಿ ಕಂಡು ಆರಾಧಿಸುವುದು ಯಾರಿಗೇನು ಆಕ್ಷೇಪ? ಆದರೆ, ಇತಿಹಾಸವಾಗಿರುವ ಕುರುಹನ್ನು ಅಳಿಸುವುದಾಗಲಿ, ನಿರಾಕರಿಸುವುದಾಗಲಿ, ಅದರಿಂದ ತಪ್ಪಿಸಿಕೊಳ್ಳುವುದಾಗಲಿ ಮೊಂಡುತನದ ಅವಿವೇಕವಾಗಿ ಕಾಣುವುದು. ಅದರ ಬದಲಿಗೆ, ಆ ಬಗೆಯ ಆಧಾರಗಳು ಹೇಗೆ ಸತ್ಯವಾಗಿದ್ದವು, ಅಥವಾ ಹೇಗೆ ಮಿಥ್ಯವಾಗಿದ್ದವು? ಯಾವ ಬಗೆಯ ತಳದಿಂದ ಅಂತಹ ಚಿಂತನೆಗಳು ಒಡಮೂಡಿರಬಹುದು ಎಂಬ ಜಿಜ್ಞಾಸೆ ನಮ್ಮ ಪರಿಕಲ್ಪನೆಗಳನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ವೈಚಾರಿಕ ಸಾಮರಸ್ಯವೂ ಉಂಟಾಗುತ್ತದೆ. ಇಲ್ಲವಾದರೆ ಆಳುವ, ದಬ್ಬಾಳಿಕೆಯ ವರ್ಗದಲ್ಲಿ ಗುರುತಿಸಲ್ಪಟ್ಟು, ಸ್ವಾರ್ಥಪರರು, ಅಧಿಕಾರಿಶಾಹಿಗಳು, ಅಹಂಕಾರಿಗಳು, ಕುತಂತ್ರಿಗಳು ಎಂಬೆಲ್ಲಾ ಮಾಡುವಂತಹ ಆಪಾದನೆಗಳೆಲ್ಲವೂ ನಿಜವೇನೋ ಎನಿಸುವಂತೆ ಮಾಡಿಬಿಡುತ್ತಾರೆ.
ತಮ್ಮ ಕೃತಿಗಳಲ್ಲಿ ಗಣಪತಿಯನ್ನು ಕೀಳಾಗಿ ನೋಡಿದ ಉಲ್ಲೇಖಗಳು ಈಗ ಸಂಖ್ಯಾ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅದೇ ವರ್ಗದವರಿಂದಲೇ ಅದೇ ಗಣಪತಿಯನ್ನು ಬಹುಮಾನ್ಯ ಮಾಡಿರುವ ಕೃತಿಗಳು ಬಹು ಸಂಖ್ಯೆಯಲ್ಲಿವೆ. ವಿಷಯ ಅದಲ್ಲ. ಆದರೆ, ಕೃತಿ ರಚನೆಯ ಚರಿತ್ರೆಯಲ್ಲಿ ಅಂತಹ ಗುರುತುಗಳು ಮೂಡಿರುವುದಕ್ಕೆ ಕಾರಣವಿರುತ್ತದೆ ಎಂಬುದಷ್ಟೇ ಈಗಿನ ಅಧ್ಯಯನ. ಆ ಬಗೆಯ ಅಧ್ಯಯನಗಳಲ್ಲಿ ದೊರಕುವಂತಹ ವಿಷಯಗಳು ತಪ್ಪುಗಳನ್ನು, ಭಿನ್ನತೆಗಳನ್ನು ಸರಿಪಡಿಸಿಕೊಳ್ಳಲು ನೆರವಾಗಬೇಕೇ ಹೊರತು, ಅವುಗಳನ್ನು ನಿರಾಕರಿಸುತ್ತಾ ಮೊಂಡು ಹಟಮಾಡುವುದು ಸಾಮರಸ್ಯವನ್ನು ಬೆಳೆಸುವಲ್ಲಿ, ಸಂಸ್ಕೃತಿಯನ್ನು ಅರಳಿಸುವಲ್ಲಿ, ಸಾಮಾಜಿಕವಾಗಿ ಬೆರೆಯುವಲ್ಲಿ ಮತ್ತು ರಾಜಕೀಯವಾಗಿ ಬೆಸೆಯುವಲ್ಲಿಯೂ ಒಳ್ಳೆಯ ಲಕ್ಷಣಗಳಲ್ಲ. ಭೂತದೊಡನೆ ಗುದ್ದಾಡಿಕೊಂಡು, ವರ್ತಮಾನವನ್ನು ಕಳೆದುಕೊಂಡು, ಭವಿಷ್ಯವನ್ನು ನಾಶಮಾಡಿಕೊಳ್ಳುವುದು ಯಾವುದೇ ಸಮಾಜಕ್ಕೆ ಮತ್ತು ಸಂಸ್ಕೃತಿಗೆ ಬೇಕಾಗಿರುವುದೇನಲ್ಲವಲ್ಲ!
ಅರಣ್ಯಕರ ಗಣಗಳು, ಪ್ರಾಣಿಗಳ ಸಂಕೇತಗಳ ಬುಡಕಟ್ಟುಗಳು ಗೋತ್ರಗಳಾಗಿದ್ದು, ಅನಾರ್ಯ ಮೂಲದವರುಗಳು ಬ್ರಾಹ್ಮಣಾಧಿಕ್ಯದ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದು; ಇತ್ಯಾದಿಗಳನ್ನು ಮುಂದೆ ನೋಡೋಣ.
ಗಣಗಳು, ಗಣಪತಿಗಳು ಮತ್ತು ಗೋತ್ರಗಳು:-
ಆರ್ಯರಾಗಲಿ, ಇತರ ಬುಡಕಟ್ಟುಗಳಾಗಲಿ, ಪ್ರಾರಂಭದಲ್ಲಿ ತಮಗೆ ತೀರಾ ಪರಿಚಿತವಾದಂತಹ, ನೇರವಾಗಿ ಸಂಪರ್ಕ ಇದ್ದಂತಹ ಪ್ರಕೃತಿಯನ್ನೇ ಲಕ್ಷ್ಯಕೊಟ್ಟು ತಮ್ಮ ಸಿದ್ಧಾಂತಗಳನ್ನಾಗಲಿ, ಕಾವ್ಯಗಳನ್ನಾಗಲಿ ಹೊಮ್ಮಿಸಿದವರು. ಆದರೆ, ಅವರಿಗೆ ಅದು ಸಿದ್ಧಾಂತವೆಂದು ಕರೆಯುವುದಾಗಲಿ, ಕಾವ್ಯಗಳೆಂದು ಒಂದು ಪ್ರಕಾರಕ್ಕೆ ಹೆಸರಿಸುವುದಾಗಲಿ ಖಂಡಿತ ತಿಳಿದಿರಲಿಲ್ಲ. ಅದು ಹಾಗೆ, ತಂತಾನೇ ಓತಪ್ರೋತವಾಗಿ ಹರಿದಿದ್ದಿತು.
ನಿತ್ಯ ಕಾಣುತ್ತಿದ್ದ ಪ್ರಕೃತಿಯ ಸತ್ಯಗಳನ್ನು, ತಮ್ಮ ಭಯದಿಂದಲೋ, ಆನಂದದಿಂದಲೋ ಉಂಟಾಗುತ್ತಿದ್ದ ಅನುಭವಗಳನ್ನು ತಮಗೆ ತೋಚಿದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದರು. ಭೂ ಸ್ವಾಧೀನದ ಪರಿಕಲ್ಪನೆಯೂ ಇಲ್ಲದಿದ್ದಂತಹ ಸಮಯದಲ್ಲಿ ತಮ್ಮ ಸಿದ್ಧಾಂತಗಳಿಗೆ ಹೋರಾಡುವಂತಹ ವಿಷಯವೂ ಬಲು ದೂರ. ಅವರೇನೇ ಹೋರಾಟಗಳನ್ನು ಮಾಡಿದ್ದರೂ, ಆಹಾರಕ್ಕಾಗಿ, ಆಹಾರ ಮತ್ತು ತಮ್ಮ ಜೀವನ ನಿರ್ವಹಣೆಗೆ ಅನುಕೂಲವಾಗುವಂತಹ ಪಶುಗಳಿಗಾಗಿ ಹೋರಾಡುತ್ತಿದ್ದರು. ಇದು ಆರ್ಯರಿಗಾದರೂ, ದ್ರಾವಿಡರಿಗಾದರೂ ಅಥವಾ ಇನ್ನಾವುದೇ ಬುಡಕಟ್ಟಿನವರಿಗಾದರೂ ಪ್ರಸ್ತುತವೇ. ಕಾಲ ಕ್ರಮೇಣ ಕೃಷಿ ಮಾಡುವುದನ್ನು ಕಂಡುಕೊಂಡ ಮೇಲೆ ಒಂದು ಕಡೆ ನೆಲೆ ನಿಲ್ಲುವುದು ಅನಿವಾರ್ಯವೂ, ಅಗತ್ಯವೂ ಆಯಿತು. ಕೃಷಿಯೂ ಹೆಣ್ಣಿನ ಆವಿಷ್ಕಾರವೆಂಬುದು ನೆನಪಿರಲಿ. ಬಸುರು, ಹೆರಿಗೆ, ಎಳೆಯ ಮಕ್ಕಳನ್ನು ಪಾಲನೆ ಮಾಡುವಂತಹ ತನ್ನ ಪ್ರಾಕೃತಿಕವಾದಂತಹ ವಿಷಯಗಳಿಗೆ ಅನಿವಾರ್ಯವಾಗಿ ಒಂದು ಕಡೆ ನಿಲ್ಲಲೇ ಬೇಕಾದಾಗ, ಹೆಣ್ಣು ಬೆಂಕಿಯಲ್ಲಿ ಆಹಾರವನ್ನು ಬೇಯಿಸುವುದಾಗಲಿ, ತಿಂದ ಹಣ್ಣಿನ ಬೀಜಗಳನ್ನು ಮಣ್ಣಿಗೆಸೆದು ಅವು ಮೊಳೆಯುವುದನ್ನೂ, ಬೆಳೆಯುವುದನ್ನೂ ಕಂಡುಕೊಂಡಂತಹ ಹೆಣ್ಣುಗಳು ಕೃಷಿಯನ್ನೂ ಆವಿಷ್ಕಾರ ಮಾಡಿದ್ದಾಳೆಂಬ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.
ಒಟ್ಟಿನಲ್ಲಿ ಪುರುಷ ಬೇಟೆಯಾಡುವಂತಹ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡರೆ, ಹೆಣ್ಣು ಒಂದೆಡೆ ನೆಲೆನಿಲ್ಲುವ, ಬೆಂಕಿ ಮತ್ತು ನೀರನ್ನು ಉಪಯೋಗಿಸಿಕೊಂಡು ಅಡುಗೆ ಬೇಯಿಸಿ ಹಾಕುವ, ಕೃಷಿಯನ್ನು ಆವಿಷ್ಕಾರ ಮಾಡುವ, ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳುವ ಅಗತ್ಯತೆ ಮತ್ತು ಅನಿವಾರ್ಯತೆಯಿಂದ ಕುಟುಂಬ ವ್ಯವಸ್ಥೆಯನ್ನು ನೋಡಿಕೊಳ್ಳುವ ಯಜಮಾನಿಯಾಗಿ ಹೊಮ್ಮಿದ್ದು ಆಶ್ಚರ್ಯವೇನಲ್ಲ. ಹೀಗೇ ಮಾತೃಪ್ರಧಾನ ಸಮಾಜದಿಂದಲೇ ವ್ಯಕ್ತಿಗಳು ಗುರುತಿಸಿಕೊಳ್ಳುವಂತಾಗಿದ್ದು. ಗಂಗೆಯ ಮಗ ಭೀಷ್ಮ ಗಾಂಗೇಯನಾಗುವುದು, ರಾಧೆಯ ಮಗ ಕರ್ಣ ರಾಧೇಯನಾಗುವುದು, ಕುಂತಿಯ ಮಕ್ಕಳು ಕೌಂತೇಯರಾಗುವುದು ಮಾತೃ ಪ್ರಧಾನ ಸಮಾಜವನ್ನೇ ಸೂಚಿಸುವುದು.
ತಮ್ಮ ಜೊತೆಗೆ ತಾಯಿಯನ್ನೂ, ಸ್ವಂತ ಬುದ್ಧಿಯ ಅರಿವು ಕೊನರಿ ತಾವು ಬೆಳೆದು ನಿಲ್ಲುವವರೆಗೂ ತಾಯಿಯನ್ನೂ, ತಾಯಿಯೊಂದಿಗೆ ತಮ್ಮ ಸುತ್ತ ಮುತ್ತಲಿನಲ ಪ್ರಕೃತಿಯನ್ನೂ ನೋಡುತ್ತಾ, ನಿಸರ್ಗದ ಒಡನಾಡಿಯಾಗಿದ್ದ ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ, ಪ್ರಕೃತಿಯನ್ನು ಹೆಣ್ತನಕ್ಕೆ ಅಥವಾ ಪೆÇರೆಯುವ ತಾಯ್ತನಕ್ಕೆ ಸಮೀಕರಿಸಿದ್ದು ಏನೂ ಆಶ್ಚರ್ಯವಿಲ್ಲ. ಆ ವ್ಯಕ್ತಿಗಳ ಸಮೂಹವು ಮುಂದೆ ಗುಂಪುಗಳಾದಾಗ, ಆಯಾ ಗುಂಪುಗಳನ್ನು ಗುರುತಿಸಿಕೊಂಡಿದ್ದೂ, ಅವರ ನೆಚ್ಚಿನ ಯಾವುದೋ ಒಂದು ಪ್ರಕೃತಿಯಲ್ಲಿರುವ ವಸ್ತು, ಪಶು ಅಥವಾ ಪಕ್ಷಿಗಳನ್ನು ಲಾಂಛನವಾಗಿಟ್ಟುಕೊಳ್ಳುವ ಮೂಲಕವೇ.
ಆರ್ಯರ ಮೂಲದ ಬ್ರಾಹ್ಮಣರಿಗಾಗಲಿ, ದ್ರಾವಿಡ ಅಥವಾ ಇನ್ನಿತರ ಬುಡುಕಟ್ಟುಗಳ ಮೂಲದ ಪಂಗಡಗಳಾಗಲಿ ಈ ಮೇಲ್ಕಂಡ ರೀತಿಯಲ್ಲಿಯೇ ಬಂದಿರುವುದರಿಂದ ಗಣಗಳ ಲಾಂಛನಗಳು ಪ್ರಾಣಿಗಳು, ವೃಕ್ಷಗಳು ಅಥವಾ ಪಕ್ಷಿಗಳೇ ಆದವು. ಬ್ರಾಹ್ಮಣ ಜಾತಿಯ ಸದಸ್ಯರ ಸಮುದಾಯಗಳೂ ಸಣ್ಣ ಭಾಗಗಳಾಗಿ ಗೋತ್ರಗಳಾಗಿದ್ದು ಇದೇ ಬಗೆಯ ಮೂಲಗಳಿಂದಲೇ.
ಕಶ್ಯಪ ಗೋತ್ರದ ಉದಾಹರಣೆಯನ್ನು ಗಮನಿಸಿದರೆ, ಕಚ್ಛಪ ಅಂದರೆ ಆಮೆಯನ್ನು ಲಾಂಛನವಾಗಿಟ್ಟುಕೊಂಡಿದ್ದ ಪೂರ್ವಿಕರ ಮೂಲದಿಂದ ಬಂದಿರುವಂತಹದು. ಕೌಶಿಕ ಸೂತ್ರ(4.2)ದಲ್ಲಿ ಹೇಳುವಂತೆ, ಒಂದು ಮೂಲದಿಂದ (ಪ್ರಾಯಶಃ ರಕ್ತ ಸಂಬಂಧದ) ಬಂದಿರುವಂತಹ ವ್ಯಕ್ತಿಗಳ ಒಂದು ಸಮೂಹ. ಗೌತಮದ ಮೂಲ ಗೋ-ಲಾಂಛನದ್ದಾದರೆ, ಶುನಕವೆಂಬುದು ನಾಯಿ, ಮುದ್ಗಲವು ಒಂದು ಬಗೆಯ ಮೀನು, ಭಾರಧ್ವಜ, ಶಾಂಡಿಲ್ಯ ಒಂದು ಬಗೆಯ ಪಕ್ಷಿಗಳಾದರೆ, ಕೌಶಿಕವು ಗೂಬೆ; ಈ ಬಗೆಯ ಉದಾಹರಣೆಗಳನ್ನು ಗಮನಿಸಿದರೆ, ಬ್ರಾಹ್ಮಣರೂ ಪಶು ಅಥವಾ ಪ್ರಕೃತಿಯ ಲಾಂಛನವುಳ್ಳ ಬುಡಕಟ್ಟುಗಳ ಸಮೂಹದಿಂದಲೇ ಬಂದವರೆಂದು ಸ್ಪಷ್ಟವಾಗುತ್ತದೆ. ಆಯಾ ಪಶು ಲಾಂಛನಗಳ ಮೂಲದಿಂದ ಬಂದಂತಹ ಋಷಿಗಳ ಹೆಸರುಗಳೂ ಮುಂದೆ ಗೋತ್ರಕ್ಕೆ ನಾಮಧೇಯವಾಯಿತು.
ಅಂತಹ ಸಮೂಹಗಳು ಗಣಗಳು ಎನಿಸಿಕೊಂಡವು. ಆ ಗಣಗಳ ಒಡೆಯರು ಯಾರಾದರೂ ಅವರೆಲ್ಲರೂ ಗಣಪತಿಗಳಾದರು. ಆರ್ಯರ ದೇವತೆಗಳೆಂದು ಕರೆಯಿಸಿಕೊಳ್ಳಲ್ಪಟ್ಟ ಗಣದ ಒಡೆಯ ಇಂದ್ರನೂ ಗಣಪತಿಯೇ, ಬೃಹಸ್ಪತಿಯೂ ಗಣಪತಿಯೇ. ನಿಷಾಧರ ಗಣದ ಒಡೆಯ ರುದ್ರನೂ ಗಣಪತಿಯೇ. ಎಷ್ಟೆಷ್ಟು ಗಣಗಳಿದ್ದವೋ ಅಷ್ಟೆಲ್ಲಾ ಗಣಪತಿಯರಿದ್ದರು. ಗಣಗಳು ಒಡೆದು ಸಣ್ಣ ಸಣ್ಣ ಗಣಗಳಾದ ಅವುಗಳ ನಾಯಕರು ಹೊಮ್ಮಿದಂತೆ ಗಣಪತಿಯರು ಹುಟ್ಟಿಕೊಂಡರು. ಬೇರೆ ಬೇರೆ ಗಣಗಳು ಸಂಘರ್ಷದ ಫಲವಾಗಿಯೋ, ಸಂಧಾನದ ಫಲವಾಗಿಯೂ ಒಂದು ದೊಡ್ಡ ಗಣವಾಗಿ ಹೊಮ್ಮಿದಾಗ ಮಹಾಗಣಪತಿಗಳೂ ಹೊಮ್ಮಿರುವ ಸಾಧ್ಯತೆಗಳುಂಟು.
ಭಾರತದಲ್ಲಿ ರಾಜ್ಯ ವ್ಯವಸ್ಥೆಯು ನಿಂತದ್ದೇ ಬುಡಕಟ್ಟುಗಳ ಅವಶೇಷಗಳ ಮೇಲೆ. ಆಗ ಇದ್ದಂತಹ ಬುಡಕಟ್ಟುಗಳ ಬಣಗಳು ಗಣಗಳೆಂದು ಕರೆಯಿಸಿಕೊಳ್ಳುತ್ತಿದ್ದವು. ನಾಗರಿಕತೆ ಮತ್ತು ರಾಜ್ಯ ವ್ಯವಸ್ಥೆಯೂ ಎಲ್ಲೆಡೆಯೂ ಸಮವಾಗಿ ಬೆಳೆದು ಅಭಿವೃದ್ಧಿ ಹೊಂದಿರುವುದೇನಲ್ಲ. ಆರ್ಯರೆಂಬುವರು ಅವರೂ ಏನೂ ಒಮ್ಮಿಂದೊಮ್ಮೆಲೆ ಇತರರಿಗಿಂತ ಶಿಷ್ಟರೆಂಬಂತೆ ತೋರುವ ತಮ್ಮ ಪದ್ಧತಿಯನ್ನು ರೂಢಿಸಿಕೊಂಡೇ ಹುಟ್ಟಿಬಂದವರಲ್ಲ. ಅವರೂ ಆಗಿನ ಇತರ ಬುಡಕಟ್ಟುಗಳಿದ್ದಂತೆ ಇದ್ದವರೇ. ಅವರ ಸಂಪತ್ತನ್ನು ಪಶುಗಳಲ್ಲಿ ಅಳೆಯಲಾಗುತ್ತಿತ್ತು. ಈ ಪಶು ಸಂಪತ್ತಿಗಾಗಿ ಅವರವರ ಬಣಗಳಲ್ಲಿ ಮತ್ತು ಇತರರ ಅಂದರೆ, ಆರ್ಯರಲ್ಲದ ಬಣಗಳೊಡನೆಯೂ ಹೋರಾಟಗಳಾಗುತ್ತಿದ್ದವು. ಇಂತಹ ಹೋರಾಟಗಳಲ್ಲಿ ಸೋಲು ಮತ್ತು ಗೆಲುವು ಎಲ್ಲವೂ ಇದ್ದಂತಹುದ್ದೇ.
ಭಾರತದಲ್ಲಿ ಕಾಲಕಾಲಕ್ಕೆ ಬಂದು ನೆಲೆಸಿದ ಜನಾಂಗಗಳು ಇಲ್ಲಿಯ ಮೂಲ ನಿವಾಸಿಗಳೊಂದಿಗೆ ಐತಿಹಾಸಿಕವಾಗಿ ಹೋರಾಡಿ ಗೆದ್ದರೂ ಕೊನೆಗೂ ಸಾಂಸ್ಕೃತಿಕವಾಗಿ ಅವರಿಗೇ ಸೋತು ಬಾಳಿದ ಸಂದರ್ಭದಲ್ಲಿ ಕೆಲವೊಂದು ಒಡಂಬಡಿಕೆ, ಹೊಂದಾಣಿಕೆ ಮಾಡಿಕೊಂಡಾಗ ಗೆದ್ದವರ ದೇವತೆಗಳಿಗೆ ಸೋತವರ ದೇವತೆಗಳು ವಾಹನಗಳಾದವು. ಒಬ್ಬರ ವಾಹನ (ಗಣಗಳ ಲಾಂಛನ?)ಇನ್ನೊಬ್ಬರ ವಾಹನವೂ ಆಯಿತು. ಒಬ್ಬರಿಗಿದ್ದಷ್ಟೇ ಭುಜಗಳು ಇನ್ನೊಬ್ಬರಿಗೂ ಆದವು. ವೈದಿಕ ದೇವತೆಗಳು ಹಿಂದೆ ಬಿದ್ದು ಪೌರಾಣಿಕ ವ್ಯಕ್ತಿತ್ವಗಳು ದೇವತ್ವವನ್ನು ಪಡೆದವು. ಅಲ್ಲಲ್ಲಿಯ ಪ್ರಾದೇಶಿಕ ದೇವರುಗಳು ಭಾರತೀಯ ಪ್ರಾಶಸ್ತ್ಯವನ್ನೂ ಪಡೆದರು. ಇಂದ್ರನಿಗೂ ಗೌಣನಾದ ಉಪೇಂದ್ರನು ವಿಷ್ಣುವಾದನು. ಸರಸ್ವತಿಯ ಮಯೂರವು ಸುಬ್ರಹ್ಮಣ್ಯನದಾಯಿತು. ದುರ್ಗೆಯ ಸಿಂಹವು ಕೃತಯುಗದ ಗಣಪತಿಯ ವಾಹನವೂ ಆಯಿತು. ದೇವರ ಸಹಸ್ರನಾಮಗಳಲ್ಲಿಯೂ ಹಲವಷ್ಟು ಸ್ವತಃ ಬೇರೆ ಬೇರೆ ದೇವತೆಗಳ ಹೆಸರುಗಳಾದವು.
ಪ್ರತಿಯೊಂದಕ್ಕೂ ಒಂದೊಂದು ಕಥೆ, ಅದು ಬೆಳೆದು ಒಂದೊಂದು ಪುರಾಣ ಕಟ್ಟಿಕೊಂಡಿತು. – ಎಂದು ಗೌರೀಶ ಕಾಯ್ಕಿಣಿಯವರು ತಮ್ಮ “ಗಣಪತಿ ಮತ್ತು ಮಾರುತಿ” ಎಂಬ ಒಂದು ಲೇಖನವೊಂದರಲ್ಲಿ ವಿವರಿಸುತ್ತಾ, ಗಣಪತಿಯೊಬ್ಬ ಕೃಷಿದೇವತೆಯಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಏಕದಂತ ಒಂದೇ ಹಲ್ಲಿನ ನೇಗಿಲನ್ನು ನೆನಪಿಸುತ್ತದೆ. ಭಾದ್ರಪದದ ಜಡಿಮಳೆಗೆ ಆಕಾಶ ಮೋಡ ಕವಿದಿರಬೇಕು. ಆಗ ನಿರಭ್ರ ಶುಭ್ರವಾಗಿ ಚಂದ್ರ ನಗುತ್ತಿದ್ದರೆ, ಅದು ಕೃಷಿದೇವತೆಗೆ ಹೇಗೆ ಸಹನವಾಗಬೇಕು ಎಂದು ಗೌರೀಶ ಕಾಯ್ಕಿಣಿಯವರು ಪ್ರಶ್ನಿಸುತ್ತಾರೆ. ಹಾಗೆಯೇ ಮುಂದುವರಿದು, “ಈತ ಗಣಪತಿ, ಈ ಗಣಗಳು ಯಾವುವು? ಸಂಸ್ಕೃತದಲ್ಲಿ ಧಾತುಗಳ ಗಣಗಳಿವೆ, ಛಂದಸ್ಸಿನ ಮಾತ್ರಾಗಣಗಳಿವೆ, ಮರುತ್ ಗಣಗಳಿವೆ, ಪ್ರಮಥಗಣಗಳಿವೆ. ಯಾವ ಗಣಗಳಿಗೆ ಈತ ಪತಿ? ಮೂಲತಃ ಪ್ರಾದೇಶಿಕ, ಜಾನಪದವಾದ ಕೃಷಿ ದೇವತೆಯನ್ನು ಬ್ರಾಹ್ಮಣೀಕರಣದ ಯುಗದಲ್ಲಿ ವೈದಿಕದೇವತೆಯನ್ನಾಗಿ ಪುನರ್ಘಟಿಸಲಾಗಿದೆ.
ವೈದಿಕವಾಗಿ ಗಣಪತಿಯವೆನ್ನುವ ವರ್ಣನೆಗಳಲ್ಲಿ ಆತ ಗಜಾನನನೆಂಬುದೇ ಇಲ್ಲ. ಒಂದೆಡೆಗೆ ‘ಮಹಾಹಸ್ತೀ ದಕ್ಷಿಣೇನ’ ಎಂಬ ಉಲ್ಲೇಖ ಬರುತ್ತದೆ. ಆದರೆ ಅಲ್ಲಿ ಅದರ ಅರ್ಥ ಬಲಬದಿಗೆ ಒಲಿದ ಸೊಂಡಿಲಿನ ಆನೆಯೆಂದು ಅಲ್ಲವೇ ಅಲ್ಲ. ಇದು ಇಂದ್ರನ ಹೊಗಳಿಕೆ. ಆತ ಮಹಾಹಸ್ತೀ ಅಂದರೆ ದೊಡ್ಡ ಹಸ್ತ ಉಳ್ಳವ, ದಕ್ಷಿಣೆ (ದಾನ) ನೀಡುವುದರಲ್ಲಿ, ಕನ್ನಡದಲ್ಲಿ ‘ಕೊಡುಗೈ ದೊರೆ’ ಎನ್ನುವಂತೆ. ಇಲ್ಲಿ ಬರುವ ಹಸ್ತೀ ಎಂಬುದನ್ನು ಕೈಯುಳ್ಳವನೆನ್ನುವ ಬದಲು ಸೊಂಡಿಲುಳ್ಳವನೆಂದು ಅರ್ಥ ಮಾಡಿಕೊಂಡು ಗಣಪತಿಯ ಗಜಮುಖಕ್ಕೆ ವೈದಿಕ ಆಧಾರ ಕಲ್ಪಿಸುವ ಪ್ರಯತ್ನವಾಗಿದೆ, ಎಂದು ಗೌರೀಶ ಕಾಯ್ಕಿಣಿಯವರು ತಮ್ಮ ಉಪಪತ್ತಿಯಲ್ಲಿ (ಇಂಟರ್‍ಪ್ರಿಟೇಶನ್) ಹೇಳುತ್ತಾರೆ.
ಶ್ರೀ ಭಗವಾನ್ ದಾಸರು ತಮ್ಮ ಮಾನವಧರ್ಮ ಸಾರದಲ್ಲಿ, “ಪ್ರಾಚೀನೇನಾರ್ಯವೈದಿಕ ಸಮಾಜೇನ ಪರಾಜಿತ ಬರ್ಬರ ನಿಷಾದ ಆದಿ ಜಾತೀಃ ಸ್ವಸಮಾಜವ್ಯವಸ್ಥಾಯಾಂ ಯಥಾ ಸ್ಥಾನಂ ನಿವೇಶಯಿತು, ಮೈತ್ರೀ ಬುದ್ಧಾಂಚ ಸಾನ್ತ್ವಯಿತುಂ ತಾಸಾಂ ಕಾಶ್ಚಿದ್ಬಹು ಪೂಜಿತಾ ದೇವತಾಃ ತದರ್ಚನ ಪ್ರಕಾಶಾಣಾಮಾಂಶಾಂಶ್ಚ ಕಾಂಶ್ಚಿತ್ ಯಥಾ ಶಕ್ಯಂ ಪರಿಷ್ಕೃತ್ಯಾನುಮೇನಿರೆ | ಆಧ್ಯಾತ್ಮಿಕೈ ರರ್ಥೈಶ್ಚಾಪಿ ತಾಸಾಂ ಜಾತೀನಾಂ ಕ್ರಮಶಃ ಉದ್ಭೋಧನಾಯ ಚೋತ್ಕರ್ಷಣಾಯ ಚ ತಾ ದೇವತಾಶ್ಚ ತಾನರ್ಚಪ್ರಕಾರಂಶ್ಚ ಯುಯುಜಿರೆ |” ಎಂದು ಹೇಳಿರುವುದನ್ನು ಆಧರಿಸಿ, “ಪ್ರಾಚೀನ ಆರ್ಯ ವೈದಿಕ ಸಮಾಜವು ತಮ್ಮಿಂದ ಸೋತ ಬರ್ಬರ ಮತ್ತು ನಿಷಾದಾದಿಗಳ ಸಾಮಾಜಿಕ ಸ್ಥಿತಿಗಳನ್ನು ಯಥಾಸ್ಥಾನದಲ್ಲಿರಸಲು ಮತ್ತು ಸ್ನೇಹಬುದ್ಧಿಯಿಂದ ಅವರನ್ನು ಸಮಾಧಾನಪಡಿಸಲು ಅವರಲ್ಲಿಯ ಬಹುಪೂಜಿತ ದೇವತೆಗಳನ್ನು ಮತ್ತು ಮುಖ್ಯವಾದ ಪೂಜಾಂಶಗಳನ್ನು ತಮ್ಮ ಶಕ್ತ್ಯಾನುಸಾರ ಪರಿಷ್ಕರಿಸಿ ಅವುಗಳನ್ನು ಒಪ್ಪಿಕೊಂಡರು ಆ ಜಾತಿಗಳ ಉದ್ಬೋಧನೆ ಮತ್ತು ಉತ್ಕರ್ಷಣಕ್ಕಾಗಿ ಆ ದೇವತೆಗಳಿಗೂ ಹಾಗೂ ಪೂಜಾವಿಧಾನಗಳಿಗೂ ಆಧ್ಯಾತ್ಮಿಕ ಅರ್ಥವನ್ನು ಕಲ್ಪಿಸಿದರು. ಹಾಗಾಗಿ, ಆರ್ಯ ವೈದಿಕ ಸಮಾಜವು ಬುದ್ಧಿ ಪೂರ್ವಕವಾಗಿಯೇ ತಮ್ಮ ದೇವತೆಗಳ ಸಾಲಿನಲ್ಲಿ ಗಣಪತಿಯನ್ನು ಸೇರಿಸಿದರು.
ಆದರೆ ಪ್ರಾರಂಭದಲ್ಲಿ ಆರ್ಯರು ಅನಾರ್ಯರ ಸಹವಾಸದಿಂದ ವಿನಾಯಕನ ರೂಪದಲ್ಲಿ ಗಣಪತಿಯನ್ನು ಬಲತ್ಕಾರವಾಗಿ ಸೇರಿಸಿದರು. ಅನಂತರ ಅವನನ್ನು ಪರಿಷ್ಕರಿಸಬೇಕಾಗಿ ಬಂದಿತೆಂಬುದು ಡಾ. ಸಂಪೂರ್ಣಾನಂದ ಅ. ಮರಿಬಸವಾರಾಧ್ಯರವರು ಅಭಿಪ್ರಾಯ ಪಡುತ್ತಾರೆ. (ಗಣಪತಿ ತತ್ವ: ವಿಶ್ವವ್ಯಾಪಿ ಗಣೇಶ).
ಇವುಗಳಾದದ್ದು ಬಹುಕಾಲದ ನಂತರ. ಹಲವಾರು ಕಾಲಘಟ್ಟಗಳು ಈ ಬೆಳವಣಿಗೆಗೆ ಸಾಕ್ಷಿಯಾಗಿವೆ.
ಅದಿರಲಿ, ಮತ್ತೆ ಈ ಮೊದಲು ಪ್ರಾರಂಭಿಸಿದ ವಿಷಯಕ್ಕೇ ಮರಳೋಣ. ಆರ್ಯರೇ ಆಗಲಿ, ಇತರರೇ ಆಗಲಿ, ಪ್ರಕೃತಿಯಲ್ಲಿನ ತಮ್ಮ ಅನುಭವವನ್ನು ಅಭಿವ್ಯಕ್ತ ಪಡಿಸುತ್ತಾ ಬಂದಂತೆ, ಕವಿತ್ವಗಳಾದವು, ಸಿದ್ಧಾಂತಗಳಾದವು. ಬರವಣಿಗೆ ಇಲ್ಲದ ಆ ಕಾಲಘಟ್ಟದಲ್ಲಿ ಬಾಯಿಂದ ಬಾಯಿಂದ ಹರಿಯುತ್ತಾ ಬಂದಂತೆ, ವ್ಯಕ್ತಿಗಳ ಅನುಭವದ ಬೆಳವಣಿಗೆಗೆ ತಕ್ಕಂತೆ ಸಿದ್ಧಾಂತಗಳೂ ಬದಲಾಗುತ್ತಾ ಬಂದವು. ಆಗಿನ ಕೆಲವು ವಿಷಯಗಳನ್ನು ಈಗಿರುವ ವಸ್ತು ಸ್ಥಿತಿ, ಸಿದ್ಧಾಂತಗಳಿಗೆ ಅವಲೋಕಿಸಿದರೆ ಆಶ್ಚರ್ಯವೆನಿಸುತ್ತದೆ. ಆಗಿನ ಆರ್ಯರ, ವೈದಿಕರ ಅಭಿವ್ಯಕ್ತಿಯಲ್ಲಿ ಮೋಕ್ಷವೆಂಬುದೇ ಇರಲಿಲ್ಲ. ಎಲ್ಲವೂ ಲೌಕಿಕವಾದ ಫಲಾಪೇಕ್ಷೆಗಳೇ ಆಗಿದ್ದವು. ಅತಿಭೌತಿಕವಾದ ವಿಷಯಗಳಿಗೆ ಪ್ರಾಮುಖ್ಯತೆ ನೀಡದೇ ದೈನಂದಿನ ಸುಖಕ್ಕಾಗಿ, ಆಗಿನ ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಬೇಕಾದ ವಸ್ತುಗಳಿಗೆ, ಸವಲತ್ತುಗಳಿಗೆ ಹಾತೊರೆಯುತ್ತಿದ್ದರು. ಅದನ್ನೇ ಬಯಸಿ ತಮ್ಮ ಪ್ರಾರ್ಥನೆಗಳಲ್ಲಿ ಹೇಳುತ್ತಿದ್ದರು. ಗಾಳಿ, ಬೆಳಕು, ನೀರು, ಆಹಾರ ಇತ್ಯಾದಿಗಳಿಗೆ ತಮ್ಮ ಕಾಲ್ಪನಿಕ ಅಧಿಪತಿಗಳನ್ನು ರೂಪಿಸಿಕೊಂಡು ಅವರಲ್ಲಿ ಸದಾ ಲೌಕಿಕ ಕೋರಿಕೆಗಳನ್ನು ಮುಂದಿಡುತ್ತಿದ್ದರು. ಹಾಗೆಯೇ ಆಸೆ, ಅಚ್ಚರಿ, ಆತಂಕ ಮತ್ತು ಭಯಗಳ ಮೂಲದಿಂದಲೇ ದ್ರಾವಿಡರೇ ಮೊದಲಾದ ಅರಣ್ಯಕರೂ ತಮ್ಮ ಕಾಲ್ಪನಿಕ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳನ್ನು ನಂಬುತ್ತಿದ್ದರು. ಆದರೆ, ಅವರಲ್ಲಿ ಪ್ರಾರ್ಥನೆಯೆಂಬುದು ಇರಲಿಲ್ಲ. ಬದಲಾಗಿ ಆದೇಶಗಳಿರುತ್ತಿತ್ತು. ತಮಗೆ ಬೇಕಾದ ವಿಷಯವನ್ನು ಪ್ರಕೃತಿಗೆ ಆಜ್ಞಾಪಿಸುತ್ತಿದ್ದರು. ಅದು ಈಡೇರುವಂತೆ ಅಬ್ಬರದ ನಾಟಕವಾಡುತ್ತಿದ್ದರು. ಮಾಂತ್ರಿಕತೆ ಮೂಲವಾಗಿರುವುದು ಇಂತಹ ಆಚರಣೆಗಳೇ ಎಂಬ ಜಿಜ್ಞಾಸೆಗಳಿವೆ.
ಏನೇ ಆಗಲಿ, ಪ್ರಕೃತಿ ಮೂಲದಿಂದ ಬಲು ಸರಳವಾಗಿ, ಬಹು ಸಹಜವಾಗಿ ಬಂದಂತಹ ಸಿದ್ಧಾಂತಗಳು ಮಾನವ ಜೀವನಕ್ಕೆ ನಿಕಟವಾಗಿದ್ದು, ದೈನಂದಿನ ಬದುಕಿಗೆ ಹತ್ತಿರವಾಗಿದ್ದು, ಅತಿ ಭೌತಿಕವಾದಂತಹ ಪುರಾಣಗಳು ಹೇಗೆ ಹುಟ್ಟಿಕೊಂಡು ಬಂದವು ಎಂಬುದು ಅತ್ಯಂತ ಆಶ್ಚರ್ಯದ ವಿಷಯ. ಸಹಜವಾದಂತಹ, ಸರಳವಾದಂತಹ ವಿಷಯಗಳನ್ನು ಮಹಾ ರಹಸ್ಯ ವಿಷಯಗಳೆಂಬಂತೆ ತೋರ್ಪಡಿಸುತ್ತಾ, ಬಹು ದೊಡ್ಡ ಸಿದ್ಧಾಂತಗಳೆಂಬಂತೆ ಸಾಧಿಸುತ್ತಾ ಅತಿ ಮಾನುಷವಾದ ಅಭಿವ್ಯಕ್ತಿಯ ಹಿಂದೆ ಬಹು ದೊಡ್ಡ ರಾಜಕೀಯ ಪ್ರೇರಣೆ ಮತ್ತು ಸ್ವಾರ್ಥ ಸಾಧನೆಗಳು ಇರುವುದು ಆಶ್ಚರ್ಯವೇನೂ ಅಲ್ಲ. ಆಗಿನ ಒಂದು ಸಮುದಾಯದ ಅಥವಾ ಹಲವು ವರ್ಗಗಳ ಜೀವನ ಕ್ರಮ ಮತ್ತು ಪದ್ಧತಿಗಳನ್ನು, ಅನುಭವ ಮತ್ತು ಅನುಭಾವ ಸಿದ್ಧಾಂತಗಳನ್ನು ಉಲ್ಲೆಖಿಸಿದ ದಾಖಲೆಗಳಾದ ವೇದಗಳ ಹಾಗೂ ಕೆಲವೊಮ್ಮೆ ವೈದಿಕ ಪದ್ಧತಿಗಳನ್ನು ಅಲ್ಲಗಳೆಯುತ್ತಾ, ಮುಕ್ತವಾದ ವಿಚಾರ, ವಿವೇಚನೆಗಳಿಂದ, ವ್ಯಕ್ತಿಯ ಒಳಗಿನ ಮತ್ತು ಹೊರಗಿನ ಅನುಭವ ಮತ್ತು ಅನುಭೂತಿಗಳನ್ನು ನಿಷ್ಪಕ್ಷಪಾತವಾಗಿ, ನಿರ್ವಂಚನೆಯಿಂದ ಜಿಜ್ಞಾಸೆ ಮಾಡುತ್ತಾ ಬಂದ ಉಪನಿಷತ್ತುಗಳ ಕಾಲಗಳ ನಂತರ ಅಥವಾ ಅವುಗಳ ಜೊತೆ ಜೊತೆಯಾಗಿಯೇ ಪುರಾಣಗಳು ಹೇಗೆ ಮೂಡಿ ಬಂದವು ಎಂಬುದೇ ಒಂದು ಕುತೂಹಲಕರವಾದ ಅಂಶ. ಅದರಲ್ಲೂ ಈ ಪುರಾಣಗಳಲ್ಲಿ ರಾಜಕೀಯ, ಸ್ವಜನ ಪಕ್ಷಪಾತ, ಸಿದ್ಧಾಂತಗಳ ವೈಭವೀಕರಣವಾಗಿದ್ದು ಇನ್ನೂ ಆಸಕ್ತಿದಾಯಕ. ಪುರಾಣಗಳಲ್ಲಿ ಪಕ್ಷಪರ ರಾಜಕೀಯಗಳು ಆದವು. ಅದರಲ್ಲೂ ಗಣಪತಿಯನ್ನು ಸಾರ್ವಜನಿಕವಾಗಿ ಕೂರಿಸುವ ತಿಲಕರ ಧೋರಣೆ ಮತ್ತು ಇತರ ಗಣೇಶೋತ್ಸವಗಳಲ್ಲಿ ಭಯಂಕರ ಸಮಾಜೋಧಾರ್ಮಿಕ ರಾಜಕೀಯಗಳಿವೆ. ಅವುಗಳು ಈ ಲೇಖನದ ವಿಷಯವಲ್ಲ. ಹಾಗಾಗಿ ಈಗ ಇಷ್ಟು ಸಾಕು.
(ನನ್ನ ಪುರಾಣದ ಹೂರಣದ ಸರಣಿಯಲ್ಲಿ ಬೌದ್ಧ, ಜೈನ ಯಕ್ಷರು, ದಕ್ಷಿಣ ಕನ್ನಡದ ಭೂತಗಳು, ಶಿವನ ಗಣಂಗಳು ಹೇಗೆ ಗಣಪತಿಗಳಾದರು, ಯಾವ್ಯಾವ ಯಕ್ಷ, ಭೂತ, ಗಣಂಗಳು ನಮಗೆ ಪರಿಚಿತವಾಗಿರುವ ಗಣೇಶ ಅಥವಾ ಗಣಪತಿ ಅಲ್ಲ ಎಂದು ವಿವರಿಸಿದ್ದೇನೆ. ನೋಡಿ.)
- ಯೋಗೇಶ್ ಮಾಸ್ಟರ್ , ರಂಗಕರ್ಮಿಗಳು




