ಲೋಕಸಭೆ ಚುನಾವಣೆ: ಸಮಾಲೋಚನೆ ನಡೆಸಿದ ಕಾಂಗ್ರೆಸ್

2 years ago

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ  ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಚುನಾವಣೆ ರಣತಂತ್ರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಚಿವರ ಜೊತೆ ಸಮಾಲೋಚನೆ ನಡೆಸಿದರು.

ಬೆಳಗ್ಗಿನ ಉಪಾಹಾರಕ್ಕೆ ಸಚಿವರನ್ನು ತಮ್ಮ ನಿವಾಸಕ್ಕೆ ಮುಖ್ಯಮಂತ್ರಿ ಆಹ್ವಾನಿಸಿದ್ದರು.‌ ಇದರಲ್ಲಿ ಸಚಿವರಾದ ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೆ.ಎನ್. ರಾಜಣ್ಣ, ಎಚ್.ಸಿ. ಮಹಾದೇವಪ್ಪ, ಬೈರತಿ‌ ಸುರೇಶ್, ರಾಮಲಿಂಗಾ ರೆಡ್ಡಿ, ದಿನೇಶ್‌ ಗುಂಡೂರಾವ್‌, ಎನ್.ಎಸ್. ಬೋಸರಾಜ, ಸಂತೋಷ್ ಲಾಡ್, ಕೆ.ಎಚ್‌. ಮುನಿಯಪ್ಪ, ಜಮೀರ್ ಅಹಮ್ಮದ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್ ಭಾಗವಹಿಸಿದರು.

ಅನಾರೋಗ್ಯದ ಕಾರಣ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಗೈರಾದರು. ಈ ಬಗ್ಗೆ ಮುಖ್ಯಮಂತ್ರಿಗೆ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಹಾಗೂ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಎಲ್ಲರಿಗೂ ಸೂಚನೆ‌ ನೀಡಲಾಗಿದೆ ಎಂದು ಹೇಳಿದರು.

ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳು ನೇರವಾಗಿ ತಿಳಿಸಿದ್ದಾರೆ. ನಾನು ಸೇರಿದಂತೆ ಯಾರೊಬ್ಬರೂ ಈ ವಿಚಾರವಾಗಿ ಮಾತನಾಡುವುದು ಬೇಡ. ಮಾಧ್ಯಮಗಳು ಪ್ರಶ್ನೆ ಕೇಳುತ್ತಾರೆ, ಆದರೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ ಎಂದರು.

ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಅನಗತ್ಯ.ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ ಸಚಿವರುಗಳಿಗೆ ತಮ್ಮ ಜಿಲ್ಲಾ ಪ್ರವಾಸ ಮಾಡಲು ಸೂಚನೆ ನೀಡಿದ್ದೆವು. ಕೆಲ ಸಚಿವರ ಪ್ರವಾಸಕ್ಕೆ ಸಮಿತಿ ಜೋಡಿಸಿರಲಿಲ್ಲ. ಈಗ ಸಮಿತಿಯಲ್ಲಿ ಸೇರಿಸುವ ಬಗ್ಗೆ ಚರ್ಚೆ ಮಾಡಲಾಯಿತು ಎಂದರು.

ಲೋಕಸಭೆ ಚುನಾವಣೆಯಲ್ಲಿ ಆಯಾ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಯಾ ಸಚಿವರಿಗೆ ಆ ಜಿಲ್ಲೆ ಜವಾಬ್ದಾರಿ ನೀಡಿಲ್ಲ. ಭೈರತಿ ಸುರೇಶ್ ಅವರು ಕೋಲಾರ ಉಸ್ತುವಾರಿಗಳು, ಆದರೆ ಅಭ್ಯರ್ಥಿ ಆಯ್ಕೆ ಸಂಬಂಧ ಅವರಿಗೆ ಮಂಡ್ಯ ಹಾಗೂ ಮೈಸೂರು ಜಿಲ್ಲೆ ನೀಡಲಾಗಿದೆ. ಹಾಸನ ಉಸ್ತುವಾರಿ ರಾಜಣ್ಣ ಅವರಿಗಿದ್ದರೂ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಚೆಲುವರಾಯಸ್ವಾಮಿ ಅವರಿಗೆ ನೀಡಿದ್ದೇವೆ. ರಾಮನಗರ ಉಸ್ತುವಾರಿ ರಾಮಲಿಂಗಾ ರೆಡ್ಡಿ ಅವರಿದ್ದರೂ ವೆಂಕಟೇಶ್ ಅವರಿಗೆ ಜವಾಬ್ದಾರಿ ನೀಡಿದ್ದೇವೆ. ಜಾರ್ಜ್ ಅವರು ಕೇಂದ್ರ ಚುನಾವಣಾ ಸಮಿತಿಯಲ್ಲಿರುವ ಕಾರಣ ಅವರಿಗೆ ಈ ಜವಾಬ್ದಾರಿ ನೀಡಿಲ್ಲ ಎಂದರು.

Leave a Reply