ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆ ಹಾಗೂ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡುವಂತೆ ವರಿಷ್ಠರಿಗೆ ಮನವಿ ಸಲ್ಲಿಸಲು ಬಿಜೆಪಿ ಶಾಸಕರು ತೀರ್ಮಾನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕೆಲವು ಶಾಸಕರು, ಈ ಕುರಿತಂತೆ ವರಿಷ್ಠರಿಗೆ ಮನವರಿಕೆ ಮಾಡಿ ಕೊಡುವಂತೆ ಮನವಿ ಮಾಡಿದರು.
ಒಂದು ವೇಳೆ ಅಧಿವೇಶನ ಆರಂಭಕ್ಕೆ ಮುನ್ನ ಪ್ರತಿಪಕ್ಷ ನಾಯಕನ ಆಯ್ಕೆಯಾಗದೆ ಹೋದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಎದುರಿಸುವುದು ಕಷ್ಟವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಡಳಿತ ಪಕ್ಷದವರು ಪ್ರತಿ ಹಂತದಲ್ಲೂ ನಮ್ಮನ್ನು ಸದನದ ಒಳಗೆ ಮತ್ತು ಹೊರಗೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲದವರು ಎಂದು ಟೀಕಿಸುತ್ತಾರೆ. ಒಂದೊಂದು ವೈಫಲ್ಯವನ್ನು ಮುಂದಿಡಲು ಮುಂದಾಗುತ್ತಿದ್ದಂತೆ ಈ ಪ್ರಶ್ನೆಯನ್ನೇ ಮುಂದಿಟ್ಟು ನಮ್ಮ ಬಾಯಿ ಮುಚ್ಚಿಸುತ್ತಾರೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಅಧಿವೇಶನ ಮುಗಿದಿದೆ. ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದಿದ್ದರೆ ಬೆಳಗಾವಿ ಅವೇಶನಕ್ಕೆ ಹೋಗುವುದರಲ್ಲಿ ಅರ್ಥವೇ ಇಲ್ಲ. ತಕ್ಷಣವೇ ದೆಹಲಿ ನಾಯಕರ ಬಳಿ ಚರ್ಚಿಸಿ ಇದಕ್ಕೊಂದು ಅಂತ್ಯ ಹಾಡಬೇಕೆಂದು ಶಾಸಕರು ಕೇಳಿಕೊಂಡಿದ್ದಾರೆ.
ಎಷ್ಟು ದಿನ ನಾವು ಸದನದಲ್ಲಿ ಸರ್ಕಾರದಿಂದ ಕುಹುಕ, ವ್ಯಂಗ್ಯ ಮಾತುಗಳನ್ನು ಕೇಳಬೇಕು, ಸದನದಲ್ಲಿ ಸ್ವಾಭಿಮಾನ ಬಿಟ್ಟು ಕೂರಬೇಕೆ ಎಂದು ಬಿಎಸ್ವೈ ಬಳಿ ಬೆಂಗಳೂರಿನ ಹಿರಿಯ ಶಾಸಕರೊಬ್ಬರು ನೋವು ಹೊರಹಾಕಿದ್ದಾರೆ.
ನಾವು ವರಿಷ್ಠರ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಆದರೆ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಆರು ತಿಂಗಳು ಮುಗಿಯುತ್ತಾ ಬಂದಿದೆ. ಈವರೆಗೂ ಪ್ರತಿಪಕ್ಷದ ನಾಯಕ ಆಯ್ಕೆ ಮಾಡಿಲ್ಲ ಎಂದರೆ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾದರೂ ಹೇಗೆ ಎಂದು ಬೇಸರ ಹೊರ ಹಾಕಿದ್ದಾರೆ.
ಶಾಸಕರ ನೋವಿಗೆ ದನಿಗೂಡಿಸಿದ ಯಡಿಯೂರಪ್ಪ, ಹಿಂದೆ ನಾನು ದೆಹಲಿಗೆ ಭೇಟಿ ನೀಡಿದ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತಕ್ಷಣವೇ ವಿಧಾನಸಭೆ ಹಾಗೂ ಪ್ರತಿಪರಿಷತ್ಗೆ ಸೂಕ್ತರಾದವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಯ್ಕೆ ಮಾಡುವ ಆಶ್ವಾಸನೆ ಕೊಟ್ಟಿದ್ದರು. ಆದರೂ ಈಗಲೂ ಮಾಡದಿರುವುದು ವೈಯಕ್ತಿಕವಾಗಿ ನನಗೂ ಬೇಸರ ತಂದಿದೆ ಎಂದು ಹೇಳಿದ್ದಾರೆ.
ಶಾಸಕರು ಇದರ ಬಗ್ಗೆ ಅಧೀರರಾಗುವ ಅಗತ್ಯವಿಲ್ಲ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ನಾನೇ ದೆಹಲಿಗೆ ತೆರಳಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.




