ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಒಟ್ಟು 31 DIET ( ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಗಳಿವೆ. ಎನ್ ಇಪಿ 86 ಶಿಕ್ಷಣ ನೀತಿಯ ಶಿಫಾರಸ್ಸಿನ ಆಶಯದಂತೆ ಇದನ್ನು ಪ್ರಾರಂಬಿಸಲಾಯಿತು. ಕೇಂದ್ರೀಕರಣಗೊಂಡಿದ್ದ ತರಬೇತಿಯನ್ನು ಜಿಲ್ಲಾ ಕೇಂದ್ರಗಳ ಹಂತಕ್ಕೆ ವಿಕೇಂದ್ರೀಕರಿಸುವುದು ಮುಖ್ಯ ಉದ್ದೇಶವಾಗಿತ್ತು
ಇದರ ಮುಖ್ಯ ಕಾರ್ಯಬಾರಗಳು
1. ಪ್ರಾಥಮಿಕ ಶಿಕ್ಷಕರ ತರಬೇತಿ
2. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕ್ಷೇತ್ರ ಮಟ್ಟದ ಶಿಕ್ಷಣ ಅದಿಕಾರಿಗಳಿಗೆ ತರಬೇತಿ
3. ಎಸ್ ಡಿ ಎಂಸಿ ಸದಸ್ಯರಿಗೆ ತರಬೇತಿ
4. ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಶಿಕ್ಷಕರಿಗೆ ತರಬೇತಿ
ಜೊತೆಗೆ ಶೈಕ್ಷಣಿಕ ಸಂಪನ್ಮೂಲ ಬೆಂಬಲ ಒದಗಿಸುವುದು
ಡಯಟ್ ಗೆ ಪ್ರಾಂಶುಪಾಲರಿರುತ್ತಾರೆ.
ಇದರ ಶಾಖೆಗಳು
1) ಸೇವಾ ಪೂರ್ವ ಶಿಕ್ಷಕರ ಶಿಕ್ಷಣ (PSTE)
2) ಕೆಲಸದ ಅನುಭವ (WE)
3) ಜಿಲ್ಲಾ ಸಂಪನ್ಮೂಲ ಘಟಕ (DRU)
4) ಸೇವೆಯ ಕಾರ್ಯಕ್ರಮಗಳು, ಕ್ಷೇತ್ರ ಸಂವಹನ ಮತ್ತು ನಾವೀನ್ಯತೆ ಸಮನ್ವಯ (IFIC)
5) ಪಠ್ಯಕ್ರಮ, ಬೋದನ ಉಪಕರಣಗಳ ಅಭಿವೃದ್ಧಿ ಮತ್ತು ಮೌಲ್ಯಮಾಪನ (CMDE)
6) ಶೈಕ್ಷಣಿಕ ತಂತ್ರಜ್ಞಾನ (ಇಟಿ)
7) ಯೋಜನೆ ಮತ್ತು ನಿರ್ವಹಣೆ (P&M)
ಇದೆಲ್ಲಾ ಶುರುವಾಗಿ 36 ವರ್ಶಗಳಾದವು.
ಆದರೆ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬ್ರಶ್ಟತೆ, ಖಾಸಗೀಕರಣ ಪರವಾದ ನೀತಿ ಮತ್ತು ನಿರ್ಲಕ್ಷ್ಯಗಳ ಕಾರಣದಿಂದ “ಡಯಟ್”ನ ಉದ್ದೇಶವೇ ಸಂಪೂರ್ಣವಾಗಿ ವಿಫಲಗೊಂಡಿದೆ.
ಶಿಕ್ಷಣ ಇಲಾಖೆಯು ಹೊಸ ಒಳನೋಟಗಳ, ನಾವೀನ್ಯತೆಯಳ್ಳ, ಸದಾ ಅಪ್ ಡೇಟ್ ಆಗುವಂತಹ ಬೋದನಾ ಕ್ರಮ ರೂಪಿಸಲು ಸೋತಿದೆ.
ಶ್ರಮವಹಿಸಿ ಕಟ್ಟ ಬೇಕಾಗಿದ್ದ ಡಯಟ್ ಸಾರ್ವಜನಿಕ ಸಂಸ್ಥೆಯ ಶೇ. 90%% ಪ್ರಮಾಣದ ಕಾರ್ಯಬಾರದ ಜವಾಬ್ದಾರಿಯಿಂದ ನುಣಿಚಿಕೊಂಡು ಖಾಸಗಿ ಸಂಸ್ಥೆಗಳಿಗೆ, ಎನ್ ಜಿಓಗಳಿಗೆ ಹೊರಗುತ್ತಿಗೆ ಕೊಟ್ಟಿದೆ. ಈ ಹೊಣಗೇಡಿತನದಿಂದಾಗಿ ಸರಕಾರಿ ಶಾಲೆಯ ಬೋದನಾ ಕ್ರಮದ ಪಠ್ಯಕ್ರಮವನ್ನು ( teaching Caricullum) ನ್ನು ಖಾಸಗಿ ಸಂಸ್ಥೆಗಳು ತಯಾರಿಸುತ್ತವೆ.
ಸಹಜವಾಗಿಯೇ ಖಾಸಗಿಯವರ ಸ್ವಹಿತಾಸಕ್ತಿಯನ್ನು ಆದ್ಯತೆಯಾಗುಳ್ಳ ಈ ಪಠ್ಯಕ್ರಮವು ಮಕ್ಕಳ ಕಲಿಕೆ ಕೇಂದ್ರಿತವಾಗಿರುವುದಿಲ್ಲ, ಸ್ಥಳೀಯತೆಯನ್ನು, ನೆಲಸಂಸ್ಕ್ರತಿಯ ಪಠ್ಯಗಳನ್ನು, ಹೊಸ ತಲೆಮಾರು ಗಳನ್ನು ರೂಪಿಸುವಂತಹ ಬಹುತ್ವದ ಸೆಕ್ಯುಲರ್ ವ್ಯಾಸಂಗ ಕ್ರಮವನ್ನು ಒಳಗೊಂಡಿರುವುದಿಲ್ಲ.
ಇದು ಇಲ್ಲಿನ ಶಿಕ್ಷಣದ ದುರಂತ. ಸಾರ್ವಜನಿಕರು ಕನ್ನಡ, ಕರ್ನಾಟಕದ ಕುರಿತು ಮಾತನಾಡುವಾಗ ಈ ಬಿಕ್ಕಟ್ಟಿನ ಕುರಿತಾದ ಚರ್ಚೆಯನ್ನೇ ಕೈ ಬಿಟ್ಟರು. ಈ ಡಯಟ್ ನಲ್ಲಿ ಶಿಕ್ಷಕರಿದ್ಜಾರೆ, ಅವರೇ ಬೋಧಿಸಬೇಕು, 31 ಕೇಂದ್ರಗಳಿವೆ, ಸರಕಾರವೇ ಈ ಪಠ್ಯಕ್ರಮವನ್ನು ರೂಪಿಸಬೇಕು ಮತ್ತು ಶಿಕ್ಷಣವು ಈ “ಸಾರ್ವಜನಿಕ- ಖಾಸಗಿ ಪಾಲುದಾರಿಕೆ”ಯ ವ್ಯಾಪಾರೀಕರಣಕ್ಕೆ ಬಲಿಯಾಗಬಾರದು ಎಂದು ಯಾರೂ ಪ್ರಶ್ನಿಸಲಿಲ್ಲ. ಈ ಖಾಸಗೀಕರಣ ಒಂದು ಸಾಮಾನ್ಯ ಸಂಗತಿ ಎಂದೇ ಬಾವಿಸಲಾಯಿತು. ಪ್ರಜೆಗಳಿಗೆ ಇಲ್ಲದ ಆತಂಕ ಬ್ರಶ್ಟ ಪ್ರಬುತ್ವಕ್ಕೆ ಕಾಡಲು ಸಾದ್ಯವೇ ಇಲ್ಲ. ಇಂದು ಕಾಲಮಿಂಚಿ ಹೋದ ದುರಂತದಲ್ಲಿ ನಾವಿದ್ದೇವೆ.
ಈಗ ಏನಾಗುತ್ತಿದೆ?
‘ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ’ , (ಡಯಟ್) ಉಡುಪಿ ಹೊರಡಿಸಿದ ಎರಡು ಸುತ್ತೋಲೆಗಳನ್ನು ಲಗತ್ತಿಸಿದ್ದೇನೆ. ಅದರಲ್ಲಿ ಅರವಿಂದ ಸೊಸೈಟಿ ಎನ್ನುವ ಖಾಸಗಿ ಸಂಸ್ಥೆಯು ಶಿಕ್ಷಕರ ತರಬೇತಿ ನಡೆಸುತ್ತಿದೆ ಮತ್ತು ಎನ್ ಇಪಿ 2020 ಕುರಿತು ಕಾರ್ಯಾಗಾರ ನಡೆಸುತ್ತಿದೆ ( ಎರಡೂ ಬೇರೆ ಕಾರ್ಯಕ್ರಮಗಳು, ಒಂದೇ ಸಂಸ್ಥೆ). ಅದರಲ್ಲಿ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಶಾಲಾ ಶಿಕ್ಷಕರು ಬಾಗವಹಿಸಬೇಕೆಂದು ಸರಕಾರದ ಪ್ರಾಂಶುಪಾಲರು ಫರ್ಮಾನು ಹೊರಡಿಸಿದ್ದಾರೆ. ಆದರೆ ಈ ಅರಬಿಂದೋ ಸೊಸೈಟಿ ಸಂಸ್ಥೆಯನ್ನು ತರಬೇತಿ ಮತ್ತು ಶಿಕ್ಷಣಕ್ಕೆ ಆಯ್ಕೆ ಮಾಡಿದ್ದು ಯಾರು? ಮಾನದಂಡಗಳೇನು!? ಅದರ ಇತಿಹಾಸದ ಮೌಲ್ಯ ಮಾಪನವಾಗಿದೆಯೇ? ಎಂದು ಪ್ರಜೆಗಳು ಪ್ರಶ್ನಿಸಲಿಲ್ಲ, ಪ್ರಬುತ್ವವೂ ಅರಾಮಾಗಿತ್ತು. ಮಕ್ಕಳು ಮತ್ತು ಶಿಕ್ಷಕರು ಬಲಿಪಶುಗಳಾದರು.
ನೋಡಿ ಮುಂದಿನ ಮೂರು ತಲೆಮಾರುಗಳ ಶಿಕ್ಷಣ ರೂಪಿಸುವ ಎನ್ ಇಪಿ 2020 ಕುರಿತು ಖಾಸಗಿ ಸಂಸ್ಥೆಯಿಂದ ತರಬೇತಿ ಕೊಡುವ ದುರಂತ ತಲುಪಿದ್ದೇವೆ. ಉಡುಪಿ ವಲಯದ ಎಲ್ಲಾ ಡಯಟ್ ಜವಾಬ್ದಾರಿಯನ್ನು ಈ ಅರವಿಂದ ಸೊಸೈಟಿ ಗೆ ವಹಿಸಲಾಗಿದೆ. ಮತ್ತು ಅರವಿಂದ ಸೊಸೈಟಿಯ ಸ್ಥಾಪಿತ ಹಿತಾಸಕ್ತಿಗೆ ಸಾರ್ವಜನಿಕ ವ್ಯಾಸಂಗಕ್ರಮವೇ ಬಲಿಯಾಗುತ್ತಿದೆ.ಅವರು ಏನು ಬೋದಿಸುತ್ತಾರೆ, ಯಾವ ಪಠ್ಯಗಳು ಎಲ್ಲವೂ ಪ್ರಶ್ನಾರ್ಹವಾಗಿದೆ.
ಇದು ಒಂದು ಉದಾಹರಣೆ ಮಾತ್ರ. ಮಿಕ್ಕ ಡಯಟ್ ಕೇಂದ್ರಗಳ ಹಣೆಬರಹವೂ ಸಹ ಇದೇ ರೀತಿಯಿದೆ. ಎನ್ ಇಪಿ 86ರ ಫಲಶ್ರುತಿಯಾದ ವಿಕೇಂದ್ರೀಕರಣಗೊಂಡ ಡಯಟ್ ಸಾರ್ವಜನಿಕ ಸಂಸ್ಥೆಯು ಎನ್ ಇಪಿ 2020 ಕುರಿತು ಬೋದಿಸಲು ಖಾಸಗಿಯವರಿಗೆ ಗುತ್ತಿಗೆ ಕೊಟ್ಟಿದೆ.
ಹೇಳಿ ಮುಂದೇನು ಮಾಡಾಣ? ದಾರಿ ಹೊಳೆಯುತ್ತಿದೆಯೇ?
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




