ಬೆಂಗಳೂರು ನಗರದಲ್ಲಿ ಹಲವಾರು ದಶಕಗಳ ಹಿಂದೆ ಪ್ರತಿಯೊಂದು ಬಡಾವಣೆಗಳಲ್ಲಿ ಖಾಲಿ ನಿವೇಶನಗಳಿರುತ್ತಿತ್ತು. ಇಲ್ಲದಿದ್ದರೆ ಸರ್ಕಾರದ ಮೈದಾನಗಳಿರುತ್ತಿತ್ತು. ಸಾಮಾನ್ಯ ಜನರ ಕುಟುಂಬದ ಮಕ್ಕಳು ಯಾವುದೇ ಬೇಧವಿಲ್ಲದೆ ತಮಗಿಷ್ಟಬಂದ ಆಟಗಳನ್ನಾಡುತ್ತಾ ಜೊತೆಗೆ ತುಂಟಾಟಗಳನ್ನು ಮಾಡುತ್ತಾ ಸಂತೋಷದಲ್ಲಿರುತ್ತಿದ್ದರು.
ಕಾಲ ಬದಲಾಗಿದೆ ಬೆಂಗಳೂರು ನಗರದಲ್ಲಿ ಎಲ್ಲ ಕಡೆಯಲ್ಲೂ ಉದ್ಯಾನವನಗಳನ್ನು ಮಾತ್ರ ಅಭಿವೃದ್ಧಿಪಡಿಸುತ್ತಾರೆ. ಈ ಉದ್ಯಾನವನಗಳಲ್ಲಿ ಮಕ್ಕಳಿಗಾಗಿ ಒಂದಷ್ಟು ಮುರುಕಲು ಪ್ಲಾಸ್ಟಿಕ್ ಆಟಿಕೆಗಳನ್ನು ಅಳವಡಿಸುತ್ತಾರೆ. ಇನ್ನು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿರುವ ಬಹುತೇಕ ಮೈದಾನಗಳು ಅಭಿವೃದ್ಧಿಗೊಂಡು ಅಲ್ಲಿನ ಚುನಾಯಿತ ಪ್ರತಿನಿಧಿಗಳ ಅಥವಾ ಅವರ ಹಿಂಬಾಲಕರ ಅಧೀನಕ್ಕೆ ನೀಡಿ ಅವರುಗಳಿಗೆ ಇಷ್ಟವಾಗುವ ಆಟಗಳ ಕ್ಲಬ್‌ಗಳನ್ನು ಆರಂಭಿಸಿ ಅವರುಗಳ ಜೇಬುಗಳನ್ನು ತುಂಬಿಸಿಕೊಳ್ಳುವ ಆಟ ಚೆನ್ನಾಗಿ ನಡೆಯುತ್ತಿದೆ. ಇಲ್ಲಿನ ಕ್ರೀಡೆಗಳಿಗೆ ಸದಸ್ಯರಾಗಿ ಹಣ ಕೊಟ್ಟು ಆಟವಾಡಲು ಶಕ್ತಿ ಇಲ್ಲದ ಬಡವರ ಮನೆಯ ಮಕ್ಕಳು ಇದನ್ನು ದೂರದಿಂದ ನೋಡಿ ಕಣ್ಣುಂಬಿಸಿಕೊಳ್ಳಬೇಕಷ್ಟೇ.
ಇನ್ನು ಮುಂದಾದರೂ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಆ ಪಾರ್ಕಿನ ಕನಿಷ್ಠ 25ರಷ್ಟು ಭಾಗವನ್ನಾದರೂ ಖಾಲಿ ಬಿಟ್ಟು ಹಣವಿಲ್ಲದೆ ಸದಸ್ಯತ್ವದ ಹಂಗಿಲ್ಲದೆ ಬಡವರ ಮನೆಯ ಮಕ್ಕಳು ಆಟವಾಡಿ ಸಂಭ್ರಮಿಸಲು ಯೋಜನೆಯನ್ನು ರೂಪಿಸಿ.
ಕೇವಲ ಹಿರಿಯ ನಾಗರಿಕರ ಚಿಂತೆ ಮಾಡಿದರೆ ಸಾಲದು. ಬೆಳೆಯುವ ಮಕ್ಕಳ ಚಿಂತೆಯೂ ಮಾಡಬೇಕಾಗಿದೆ. ಆಟವಾಡಲು ಮಕ್ಕಳು ಮೈದಾನವಿಲ್ಲ, ರಸ್ತೆಗಳಲ್ಲಿ ಆಟವಾಡಲು ಸ್ಥಳೀಯ ನಾಗರಿಕರು ಬಿಡುವುದಿಲ್ಲ. ಎಲ್ಲ ರಸ್ತೆಯಲ್ಲಿಯೂ ವಾಹನಗಳ ಓಡಾಟ. ಮಕ್ಕಳು ಕುಣಿದು ಕುಪ್ಪಳಿಸಲು ಜಾಗವೆಲ್ಲಿದೆ?
– ಕೆ.ಎಸ್. ನಾಗರಾಜ್, ಬೆಂಗಳೂರು




