ಶಾಸಕರಿಗೆ ಕಾರ್ಮಿಕರ ಆಹಾರ ಕಿಟ್ ಯಾಕೆ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕೊವೀಡ್ ಸಮಯದಲ್ಲಿ ಖರೀದಿ ಮಾಡಿದ ಎಲ್ಲ ವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ಮಂಡಳಿ ಹಣದಲ್ಲಿ ಖರೀದಿಸಿದ ಆಹಾರ ಕಿಟ್, ಟೂಲ್ ಕಿಟ್ ಹಾಗೂ ಸೇಪ್ಟೀ ಕಿಟ್ ಗಳನ್ನು ಶಾಸಕರ ಮೂಲಕ ನೀಡುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು, ಬಾಕಿ ಇರುವ ಎಲ್ಲ ಸೌಲಭ್ಯಗಳನ್ನು ಜಾರಿ ಮಾಡಬೇಕು, ಜುಲೈ 12ರಂದು ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಮುಂಭಾಗ ನಡೆದ ಪ್ರತಿಭಟನೆಗೆ ಆಗಮಿಸಿದ 40 ಕಾರ್ಮಿಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು, ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಯಾಗಬೇಕು ಹಾಗೂ ಸೆಸ್ ಹಣದಲ್ಲಿ ಸಾಮಗ್ರಿ, ಖರೀದಿ, ವಾಹನಗಳ ಖರೀದಿ, ನಿರ್ಮಾಣ ಕಾಮಗಾರಿಗಳನ್ನು ನಡೆಸುವ ತೀರ್ಮಾನ ಕೈ ಬಿಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ರಾಜ್ಯದ ರಾಜ್ಯದ ಕಲುಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಧಾರವಾಡ, ತುಮಕೂರು, ಚಿತ್ರದುರ್ಗ, ಮಂಡ್ಯ, ಉಡುಪಿ, ಉತ್ತರ ಕನ್ನಡ, ಗದಗ, ಕೋಲಾರ, ದಾವಣಗೆರೆ ಮೊದಲಾದ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಲ್ಲದೆ ಅಂಚೆ ಕಾರ್ಡು ಚಳವಳಿಯ ಕಾನೂನು ಸೇವಾ ಪ್ರಾಧಿಕಾರ, ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ತನಿಖೆ ಮತ್ತು ಮಧ್ಯ ಪ್ರವೇಶಿಸಲು ಕೋರಿ ಈ ದಿನ ಸಾವಿರಾರು ಅಂಚೆ ಕಾರ್ಡುಗಳನ್ನು ಪೊಸ್ಟ್ ಮಾಡಿದರು.
ಒಂದು ತಿಂಗಳ ಪೂರ್ತಿ ಈ ಪತ್ರ ಹಾಗೂ ಈ-ಮೇಲ್ ಚಳವಳಿ ರಾಜ್ಯಾದ್ಯಂತ ನಡೆಯಲಿದೆ. ಅಂತಿಮ ವಾಗಿ ಸೆಪ್ಟೆಂಬರ್ 1 2021 ರಂದು ಹತ್ತು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಬೆಂಗಳೂರಿನಲ್ಲಿ ಇರುವ ಕಲ್ಯಾಣ ಮಂಡಳಿ ಮುತ್ತಿಗೆ ಹಾಕಲಿದ್ದಾರೆ.




