ನಾರಾಯಣ ಗುರು ಮತ್ತು ವಿವಾದಾತ್ಮಕ, ವಿಚಾರ ಭ್ರಷ್ಟ, ಅಪರಾಧ ಹಿನ್ನೆಲೆಯ ಕೂಗುಮಾರಿ

3 years ago

#NarayanaGuru #controvery #corrupt #criminal #rabble #rouser #dineshaminmattu

ಕಳೆದ ಒಂದು ದಶಕದಲ್ಲಿ ಹಲವಾರು ಅವತಾರಗಳನ್ನು ತಾಳಿರುವ ಪ್ರಣಾವಾನಂದ ಸ್ವಾಮೀಜಿ ಈಗ ಈಡಿಗ-ಬಿಲ್ಲವ ಸಮುದಾಯದ ನಾಯಕನ ಅವತಾರ ಎತ್ತಿದ ಹಾಗೆ ಕಾಣುತ್ತಿದೆ.

ಒಂದು ಕಾಲದಲ್ಲಿ ‘’ಅಖಿಲ ಭಾರತೀಯ ಹಿಂದೂ ಮಹಾಸಭೆ’ಮತ್ತು ‘’ಭಾರತ ಕ್ರಾಂತಿ ಸೇನೆ’’ಯ ನಾಯಕನಾಗಿ ಬಿಜೆಪಿ-ಆರ್ ಎಸ್ ಎಸ್ ವಿರೋಧಿಗಳು ಮತ್ತು ಪ್ರಗತಿಪರರನ್ನು ಅವಹೇಳನ ಮಾಡುತ್ತಿದ್ದ ಈ ಸ್ವಾಮೀಜಿ, ಮಂಗಳೂರಿನಲ್ಲಿ ನಾಥುರಾಮ್ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿದ್ದ. ಅದರ ನಂತರ ವಿಧಾನಸೌಧದ ಎದುರು ಆತ್ಮಹತ್ಯೆಗೆ ಪ್ರಯತ್ನಿಸಿ ಸುದ್ದಿಯಲ್ಲಿದ್ದ.

ಕೆಲವರ್ಷಗಳ ಕಾಲ ತೆರೆಮರೆಯಲ್ಲಿದ್ದ ಈತ ಇದ್ದಕ್ಕಿದ್ದಂತೆ ಒಂದು ಹುಡುಗಿಯನ್ನು ಮದುವೆಯಾಗಿ ಸಂಸಾರಸ್ಥನಾಗಿ ಸುದ್ದಿಯಾದ. ಈ ನಡುವೆ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ. ಉತ್ತರಕರ್ನಾಟಕದ ಕೆಲವು ಈಡಿಗ ಸಂಘಟನೆಗಳ ಜೊತೆ ಗುರುತಿಸಿಕೊಳ್ಳುತ್ತಿದ್ದ ಈ ಸ್ವಾಮೀಜಿ ಆರ್ಯ ಈಡಿಗ ಮಹಿಳೆಯರೆಲ್ಲರೂ ನಾಲ್ಕು ಮಕ್ಕಳನ್ನು ಹೆತ್ತು ಹಿಂದೂ ಜನಸಂಖ್ಯೆ ಹೆಚ್ಚಿಸಬೇಕೆಂದು ಕರೆನೀಡಿದ್ದ.

ಕಳೆದ ವರ್ಷ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧಾರಣೆಯನ್ನು ವಿರೋಧಿಸಿ ಹೇಳಿಕೆ ನೀಡಿದ್ದ ಈ ಸ್ವಾಮೀಜಿ, ಹಿಜಾಬ್ ಧರಿಸದಂತೆ ಒತ್ತದ ಹೇರುವುದುನ್ನು ವಿರೋಧಿಸಿದ್ದ ಸಿದ್ದರಾಮಯ್ಯನವರನ್ನು ಅವಹೇಳನ ಮಾಡಿದ್ದ. ತಾಕತ್ತಿದ್ದರೆ ಮುಲ್ಲಾ ಮತ್ತು ಪಾದ್ರಿಗಳಿಗೆ ಬುದ್ದಿ ಹೇಳಿ ನೋಡೋಣ ಎಂದು ಸವಾಲು ಹಾಕಿದ್ದ.

ವರ್ಷದ ಹಿಂದೆ ಶೇಂದಿ ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದಾಗಲೇ ಈಡಿಗ-ಬಿಲ್ಲವ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕಾಗಿತ್ತು. ತನ್ನನ್ನು ನಾರಾಯಣ ಗುರುಗಳ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಈ ಸ್ವಾಮೀಜಿ, ಈ ರೀತಿಯ ಒತ್ತಾಯ ‘’ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ ಎಂದು ಕರೆನೀಡಿದ್ದ ನಾರಾಯಣ ಗುರುವಿಗೆ ಬಗೆವ ದ್ರೋಹ” ಎನ್ನುವುದನ್ನು ಮರೆತೇ ಬಿಟ್ಟಿದ್ದಾನೆ.

ಬಹುಷ: ಬಲಪಂಥೀಯರ ಸ್ವಾಮಿಗಳ ಗುಂಪು ದೊಡ್ಡದಾಗಿರುವ ಕಾರಣ ಇನ್ನೊಂದು ಕಡೆ ಸಕ್ರಿಯವಾಗುವ ದೂರಾಲೋಚನೆಯಿಂದಲೋ ಏನೋ ಇದ್ದಕ್ಕಿದ್ದಂತೆ ಈ ಸ್ವಾಮೀಜಿ, ಬಿಜೆಪಿ ಮತ್ತು ನರೇಂದ್ರಮೋದಿಯವರ ವಿರುದ್ದ ಒಂದೆರಡು ಹೇಳಿಕೆಗಳನ್ನು ನೀಡಿದ್ದ. ನಮ್ಮ ಪ್ರಗತಿಪರರಿಗೆ ಇಷ್ಟೇ ಸಾಕಾಯಿತು ಈತನನ್ನು ತಲೆಮೇಲೆ ಹೊತ್ತು ಮೆರವಣಿಗೆ ಮಾಡಲು.

ನಾರಾಯಣ ಗುರುಗಳನ್ನು ತಮ್ಮ ಗುರುವೆಂದು ಸ್ವೀಕರಿಸಿರುವ ರಾಜ್ಯದ ಈಡಿಗ -ಬಿಲ್ಲವ ಸಮುದಾಯಕ್ಕೆ ಇಂತಹ ವಿವಾದಾತ್ಮಕ, ವಿಚಾರ ಭ್ರಷ್ಟ ಮತ್ತು ಅಪರಾಧ ಹಿನ್ನೆಲೆಯ ಕೂಗುಮಾರಿ ಸ್ವಾಮೀಜಿಯನ್ನು ಗುರುವಾಗಿ ಸ್ವೀಕರಿಸುವ ಅನಿವಾರ್ಯತೆ ಬಂದಿರುವುದು ದುರಂತವೇ ಸರಿ.

  • ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply