ಬೆಂಗಳೂರು: ಬಿಜೆಪಿ ನಾಯಕರು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿದ್ದು ಆ ಭ್ರಮೆಯ ಗುಳ್ಳೆ ಒಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೂ ಕೂಡಾ ಬಿಜೆಪಿಯವರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಈ ಸನ್ನಿವೇಶಕ್ಕೆ ಸರಿಯಲ್ಲ. ಆದರೂ ನಮಗೆ ಸದಾ ಆಪರೇಷನ್ ಕಮಲದ ಆತಂಕವಿದೆ. ಆದರೂ ಅವರ ಪ್ರಯತ್ನ ಸಫಲವಾಗುವುದಿಲ್ಲ. ಈ ಹಿಂದೆ ಆದ ಅನುಭವ ನಮಗಿದ್ದು, ಈಗ ಅಂತಹ ವಾತಾವರಣವಿಲ್ಲ ಎಂದರು.
ಬಿಜೆಪಿಯಲ್ಲಿ ಅವರ ಮುಖಂಡರ ವಿರುದ್ಧವೇ ಅಪಸ್ವರ ಎದ್ದಿದೆ. ಅದನ್ನು ಅವರು ಗಮನಿಸಲಿ ಎಂದು ಕಿವಿಮಾತು ಹೇಳಿದ ಅವರು, ಬಿಜೆಪಿಯಿಂದ ಕೆಲವರು ಕಾಂಗ್ರೆಸ್ ಗೆ ಬರುವವರು ಇದ್ದಾರೆ. ಅವರಲ್ಲಿ ಕೆಲವರು ಬಹಿರಂಗವಾಗಿ ನಾಯಕರನ್ನು ಭೇಟಿ ಮಾಡಿದ್ದರೆ, ಮತ್ತೆ ಕೆಲವರು ಗೌಪ್ಯವಾಗಿ ಭೇಟಿ ಮಾಡಿದ್ದಾರೆ. ಕೆಲವರು ಸ್ವಪ್ರೇರಣೆಯಿಂದ ಬರಲು ಮುಂದಾಗಿದ್ದಾರೆ. ಯಾರೇ ಆಗಲಿ ಪಕ್ಷದ ನಾಯಕತ್ವ ಮತ್ತು ತತ್ವ ಒಪ್ಪಿ ಬರುವುದಾದರೆ ಸ್ವಾಗತ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಮಾಡುವಂತವರು ಇರಬಹುದು. ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಂಪರ್ಕದಲ್ಲಿ ಇರಬಹುದು ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯ ಲೋಕಸಭಾ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟವಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಾರದಿದ್ದರೆ ನಾನು ಲೋಕಸಭೆಗೆ ಸ್ಪರ್ಧಿಸುವುದಾಗಿ ಮೊದಲೇ ಹೇಳಿದ್ದೆ. ಸದ್ಯಕ್ಕೆ ಈಗ ಸಚಿವನಾಗಿ ಮುಂದುವರೆದಿದ್ದೇನೆ. ಮುಂದೆ ನೋಡೋಣ ಎಂದರು.




