ತಕರಾರು ಪ್ರಕರಣಗಳಿಗೆ ವೇಗ ನೀಡಿ, ಜನರ ಅಲೆದಾಟಕ್ಕೂ ಬ್ರೇಕ್ ಹಾಕಲಾಗಿದೆ: ಕೃಷ್ಣ ಬೈರೇಗೌಡ

3 years ago

#Dispute #cases #speededup #people #wandering #stopped #KrishnaByregowda

ಬೀದರ್: ಜನ ಸಾಮಾನ್ಯರ ತಕರಾರು ಅರ್ಜಿಗಳನ್ನು ಕಳೆದ ಎರಡು ತಿಂಗಳಿನಿಂದ ಕಾಲಮಿತಿಯೊಳಗೆ ತ್ವರಿತ ವಿಲೇವಾರಿಗೊಳಿಸಲಾಗುತ್ತಿದೆ, ತಾಲೂಕು ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೂ ಇದೀಗ ಬ್ರೇಕ್ ಹಾಕಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೇ ಜನಪರ ಸೇವೆ ಹೀಗೆ ಮುಂದುವರೆಯಲಿ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೀದರ್ ನಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಮೊದಲ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರು ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ಭರವಸೆಗಳಿಗೆ ನೀರೆರೆಯುವ ಸಲುವಾಗಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಕಳೆದ ಎರಡು ತಿಂಗಳಿನಿಂದ ತತ್ವರಿತಗೊಳಿಸಲಾಗಿದೆ. ವಿಳಂಬವಾಗುತ್ತಿದ್ದ ತಕರಾರು ಅರ್ಜಿಗಳನ್ನು ಕಾಲಮಿತಿ ನಿಗದಿ ಮಾಡಿ ಜನಗಳು ತಾಲೂಕು ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ಕಡಿಮೆ ಮಾಡಲಾಗಿದೆ. ಮತ್ತು ಆ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಗೆ ಚಿಂತನೆಯೂ ನಡೆಯುತ್ತಿದ್ದು, ಬೀದರ್ ಜಿಲ್ಲೆಯಲ್ಲೂ ಸಹ ಅಧಿಕಾರಿಗಳು ಜನಪರ ಸೇವೆ ನೀಡುವ ಸಂಕಲ್ಪ ಮಾಡಬೇಕು ಎಂದರು.

ಹಕ್ಕು ಬದಲಾವಣೆಯ ವಿಳಂಬಕ್ಕೆ ತಡೆ: ಹಕ್ಕು ಬದಲಾವಣೆ ಪ್ರಕರಣಗಳಲ್ಲಿ ಉಂಟಾಗುತ್ತಿದ್ದ ಅನೇಕ ರೀತಿಯ ವಿಲೆಯಲ್ಲಿ ಆಗುತ್ತಿದ್ದ ವಿಳಂಬಗಳನ್ನು ಗಂಭೀರವಾಗಿ ಪರಿಗಣಿಸಿ ವಿಲೆಯನ್ನು ತ್ವರಿತಗೊಳಿಸಲಾಗಿದೆ. ಸಮಸ್ಯಾತ್ಮಕ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಯನ್ನು ಜೂನ್ ತಿಂಗಳಿನಲ್ಲಿ ಸರಾಸರಿ 27 ದಿನ ಇದ್ದಂತಹದ್ದನ್ನು ಆಗಸ್ಟ್ ತಿಂಗಳಿನಲ್ಲಿ 9 ದಿನಗಳ ಒಳಗೆ ವಿಲೆ ಮಾಡುವಂತಹ ಸುಧಾರಣಾ ಬದಲಾವಣೆ ತರಲಾಗಿದೆ ಎಂದರು.

ಸಾಧಾರಣ ಸಮಸ್ಯೆಯುಳ್ಳ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಗೆ ಜೂನ್ ನಲ್ಲಿ ಸರಾಸರಿ 27 ದಿನ ತಗಲುತ್ತಿತ್ತು. ಆದರೆ, ಆಗಸ್ಟ್ ತಿಂಗಳಿನಲ್ಲಿ 13 ದಿನಗಳ ಒಳಗೆ ವಿಲೆ ಮಾಡಲಾಗಿದೆ. ಸಮಸ್ಯೆ ಇದ್ದಂತಹ ಹಕ್ಕು ಬದಲಾವಣೆ ಪ್ರಕರಣಗಳ ವಿಲೆಗೆ ಜೂನ್ ನಲ್ಲಿ ಸರಾಸರಿ 4 ದಿನ ತೆಗೆದುಕೊಂಡಿದ್ದರೆ, ಆಗಸ್ಟ್ ನಲ್ಲಿ ಸರಾಸರಿ 1 ದಿನದಲ್ಲಿ ವಿಲೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಪಹಣಿ ತಿದ್ದುಪಡಿ ಪ್ರಕರಣಗಳು 4310 ಬಾಕಿ ಇತ್ತು. ಆದರೆ, ವಿಭಾಗವಾರು ಸಭೆಯ ನಂತರ ಇದೀಗ ಈ ಪ್ರಕರಣಗಳ ಸಂಖ್ಯೆ 3010ಕ್ಕೆ ಇಳಿಕೆಯಾಗಿದೆ. ಸುಮಾರು 1300 ಪ್ರಕರಣಗಳಲ್ಲಿ ತತ್ವರಿತ ವಿಲೇವಾರಿ ಮಾಡಲಾಗಿದೆ. ಇದೇ ಸಮಯದಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲೂ 651 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಪ್ರಕರಣಗಳ ಸಂಖ್ಯೆ 488ಕ್ಕೆ ಇಳಿದಿದೆ. ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ 1319 ರಿಂದ 321ಕ್ಕೆ ಇಳಿಸಲಾಗಿದೆ. ಇದು ನಿಜಕ್ಕೂ ಇಲಾಖೆಯಲ್ಲಿನ ಉತ್ತಮ ಪ್ರಗತಿಯಾಗಿದ್ದು, ಇದನ್ನು ಹೀಗೆ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇ-ಆಡಳಿತಕ್ಕೆ ಸೂಚನೆ: ಆಡಳಿತಕ್ಕೆ ವೇಗ ನೀಡುವ ಸಲುವಾಗಿ ಬೀದರ್ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ (ಎಸಿ) ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ಅಂದರೆ ಆನ್ ಲೈನ್ ಮೂಲಕ ಕಡತ ವಿಲೇವಾರಿ ಮಾಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಗಸ್ಟ್ 15 ರಿಂದಲೇ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ಕಡತಗಳನ್ನೂ ಇದೀಗ ಆನ್ ಲೈನ್ ಮೂಲಕವೇ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 1ನೇ ತಾರೀಖಿನ ಒಳಗಾಗಿ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗ ಕಚೇರಿಗಳಲ್ಲೂ ಆನ್ ಲೈನ್ ಮೂಲಕವೇ ಎಲ್ಲಾ ಕಡತಗಳ ವಿಲೇವಾರಿ ಆಗಬೇಕು. ಆಡಳಿತಕ್ಕೆ ವೇಗ ನೀಡಲು, ಪಾರದರ್ಶಕತೆ ಜವಾಬ್ದಾರಿ ಸುಧಾರಣೆಗೆ ಇ-ಆಡಳಿತ ಸಹಕಾರಿ ಎಂದು ತಿಳಿಸಿದರು.

ಅಲ್ಲದೆ, ಇದೇ ಸಂದರ್ಭದಲ್ಲಿ ಜಿಲ್ಲೆಯ ನೈಸರ್ಗಿಕ ವಿಕೋಪ ಪ್ರಕರಣಗಳಲ್ಲಿ ಪರಿಹಾರ ಕೈಗೊಳ್ಳಲು 21.34 ಕೋಟಿ ಅನುದಾನ ಲಭ್ಯವಿದೆ ಎಂದು ಅವರು ಬೀದರ್ ಜಿಲ್ಲೆ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.

Leave a Reply