ಅಂತಾರಾಜ್ಯ ನೀರು ಹಂಚಿಕೆ ವಿವಾದ ಪರಿಹಾರಕ್ಕೆ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯ

3 years ago

#PrimeMinister #urged #intervene #resolve #interstate #water #sharing #dispute

ಬೆಂಗಳೂರು: ಮಹಾದಾಯಿ, ಕೃಷ್ಣಾ, ಮೇಕೆದಾಟು, ಕಾವೇರಿ ನದಿ ನೀರು ಹಂಚಿಕೆ ಹಾಗೂ ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಗಳ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲು ಕರ್ನಾಟಕ ಸರ್ವ ಪಕ್ಷಗಳ ಸಭೆ ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ ಸಲ್ಲಿಸಲು ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷ ನಿಯೋಗದಲ್ಲಿ ತೆರಳೋಣ. ಇದಕ್ಕೆ ಎಲ್ಲರ ಸಹಕಾರ ಬಯಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅವರು, ಕರ್ನಾಟಕದ ನೆಲ, ಜಲ, ಗಡಿ, ಭಾಷೆಗಳ ಬಗ್ಗೆ ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಮಾತನಾಡಿವೆ. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಪ್ರಯತ್ನವನ್ನು ಯಾರೂ ಮಾಡಿಲ್ಲ, ಮಾಡಲೂ ಬಾರದು. ಯಾಕೆಂದರೆ ನಾವೆಲ್ಲರೂ ರಾಜ್ಯದ ಏಳು ಕೋಟಿ ಜನರ ಹಿತ ಕಾಪಾಡಬೇಕಾಗಿದೆ. ನಾವು ಆಡಳಿತ ಪಪಕ್ಷದವರಾಗಲಿ, ರಾಜ್ಯದ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿ. ಹಾಗಾಗಿಯೇ ರಾಜಕೀಯ ಮಾಡಿಲ್ಲ ಎಂದರು.

ಮಹಾದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಳಸಾ ಮತ್ತು ಬಂಡೂರಿ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಗಳ ತೀರುವಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಲೂ ಅರ್ಜಿ ಸಲ್ಲಿಸಲಾಗಿದೆ. ಆದರೆ ಗೋವಾ ಸರ್ಕಾರ ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಕಡೆ ಹೆಚ್ಚಿನ ಗಮನ ಹರಿಸುವಂತೆ ರಾಜ್ಯದ ವಕೀಲರ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಐತೀರ್ಪು ಹೊರಬಿದ್ದು, ಇಷ್ಟು ವರ್ಷ ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿಲ್ಲ. ಆದಷ್ಟು ಶೀಘ್ರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿಗಳನ್ನು ಒತ್ತಾಯಿಸಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಕೃಷ್ಣಾ, ಕಾವೇರಿ ಮೇಕೆದಾಟು, ಮಹದಾಯಿ ಎಲ್ಲ ನೀರಾವರಿ ಬಗ್ಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ದು ಪ್ರಧಾನಿ, ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲ ಜಲ ವಿವಾದಗಳಲ್ಲಿ ಕೇಂದ್ರ ಸರ್ಕಾರವೂ ಪ್ರತಿವಾದಿ ಆಗಿದೆ ಎಂದು ತಿಳಿಸಿದರು.

ರಾಜ್ಯದ ಹಿತ ಕಾಪಾಡಲು ನಾವು ಎಂದಿಗೂ ಬದ್ಧರಾಗಿರುತ್ತೇವೆ. ಐದಾರು ವರ್ಷಗಳಿಗೊಮ್ಮೆ ಮಳೆಯ ಕೊರತೆಯಿಂದಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಈ ಕುರಿತು ಸಂಕಷ್ಟ ಹಂಚಿಕೆ ಸೂತ್ರ ನಿರ್ದಿಷ್ಟಪಡಿಸಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಅಗತ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸಂಕಷ್ಟ ಹಂಚಿಕೆ ಸೂತ್ರದ ಕುರಿತು ತೀರ್ಮಾನ ಆಗಲೇ ಬೇಕು. ಇಂತಹ ಸಂಕಷ್ಟದ ಸಮಯದಲ್ಲಿ 67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಿಸಿದರೆ, ಅವರಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ಯೋಜನೆಗೆ ತಮಿಳುನಾಡು ವಿನಾಕಾರಣ ವಿರೋಧಿಸುತ್ತಿದೆ ಎಂದರು.

ಕಾವೇರಿ ನದಿ ನೀರಿನ ವಿವಾದ ಕುರಿತಂತೆ ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ ತೀರ್ಪಿನ ಅನುಸಾರ ಕಳೆದ ಜೂನ್ನಿಂದ ಆಗಸ್ಟ್ವರೆಗೂ 86.1 ಟಿಎಂಸಿ ನೀರು ಬಿಡಬೇಕಿತ್ತು. ಆದರೆ 26.7 ಟಿಎಂಸಿ ನೀರು ಬಿಡಲಾಗಿದೆ ಎಂದು ಹೇಳಿದರು.

ಜೂನ್ನಲ್ಲಿ ಮಳೆ ಕೊರತೆಯಾಗಿದೆ. ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಆಗಸ್ಟ್ನಲ್ಲಿ ಮತ್ತೆ ಕೊರತೆಯಾಗಿದೆ. ಜೂನ್ನಲ್ಲಿ 9.19 ಟಿಎಂಸಿ ಬದಲಾಗಿ 2.8 ಟಿಎಂಸಿ ಬಿಡಲಾಗಿದೆ. ಜುಲೈನಲ್ಲಿ 31.24 ಟಿಎಂಸಿ ಬದಲಾಗಿ 8.74 ಟಿಎಂಸಿ ಬಿಡಲಾಗಿದೆ. ಆಗಸ್ಟ್ನಲ್ಲಿ 45.5 ಟಿಎಂಸಿ ಬದಲಾಗಿ ನಿನ್ನೆವರೆಗೆ ನೀರು ಹರಿಸಲಾಗಿದೆ. ಒಟ್ಟು ಪ್ರಮಾಣ 26 ಟಿಎಂಸಿಯಾಗಿದೆ ಎಂದು ತಿಳಿಸಿದರು.

ಕಾವೇರಿ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅಧಿಕಾರಿಗಳು ಸಂಕಷ್ಟದ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವರ್ಷ ಮಳೆ ಕಡಿಮೆ ಆಯಿತು. ಜೂನ್ ಹಾಗೂ ಆಗಸ್ಟ್ ನಲ್ಲಿ ಮಳೆ ಕೊರತೆಯಾಗಿದೆ. ಇಲ್ಲಿಯವರೆಗೆ ನೀರು ಬಿಡಬೇಕಾಗಿದ್ದಿದ್ದು 86.38 ಟಿಎಂಸಿ. ಆದರೆ 20 ನೇ ತಾರೀಖಿನ ವರೆಗೆ ನೀರು ಬಿಟ್ಟಿರುವುದು 24 ಟಿಎಂಸಿ. ಅಂದರೆ ನಾವು ವಿರೋಧ ಮಾಡಿದ್ದೇವೆ; ವಾಸ್ತವವನ್ನು ಪ್ರಾಧಿಕಾರದ ಮುಂದೆ ಬಿಡಿಸಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.

ನಾವು ವಾದ ಮಾಡಿದ್ದರಿಂದಲೇ 15,000 ಕ್ಯೂಸೆಕ್ಸ್ ನೀರಿನಿಂದ 10,000 ಕ್ಯೂಸೆಕ್ಸ್ ನೀರಿಗೆ ಇಳಿಕೆ ಮಾಡಲಾಯಿತು. ಅದನ್ನೂ ಮರು ಪರಿಶೀಲನೆ ಮಾಡುವಂತೆ ಅರ್ಜಿ ಸಲ್ಲಿಸಿದೆವು. 15,000 ಕ್ಯುಸೆಕ್ಸ್ ನೀರು ಕೊಡಲಾಗದು ಎಂದು ರಾಜ್ಯದ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸುತ್ತಿರುವಾಗಲೇ ತಮಿಳುನಾಡಿದ ಅಧಿಕಾರಿಗಳು ಸಭಾತ್ಯಾಗ ಮಾಡಿದರು. ನಂತರ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ. 25ರಂದು ಈ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ವಿಷಯದಲ್ಲಿ ವಕೀಲರು ಸಮರ್ಥವಾಗಿ ವಾದ ಮಾಡುತ್ತಾರೆ ಎಂದು ವಿಶ್ವಾಸದಿಂದ ನುಡಿದರು.

Leave a Reply