ಈ ಬಗೆಯ ಚರ್ಚೆ ಈಗಾಗಲೆ ಗುರುತು ಹಿಡಿಯದಷ್ಟು ಸವೆದಿದೆ. ಆದರೂ ಜನಸಾಮಾನ್ಯರಲ್ಲಿ ಈ ಪದಗಳ ಬಗೆಗಿನ ಗೊಂದಲ ಅಥವಾ ಮೂಢನಂಬಿಕೆ ಇನ್ನೂ ಢಾಳಾಗಿ ಮನೆ ಮಾಡಿದೆ. ಹಾಗಾಗಿ ಈ ಬಗೆಗಿನ ಚರ್ಚೆಯನ್ನು ತೀರಾ ಸರಳವಾಗಿ ಜನರ ಅರಿವಿನ ಭಾಗವಾಗುವಂತೆ ಮಾಡಲು, ಈ ತರಹದ ಸಂಗತಿಗಳನ್ನು ಮತ್ತೆ ಮತ್ತೆ ಮುನ್ನಲೆಗೆ ತಂದು ವಿವರಿಸುವ ಅಗತ್ಯವಿದೆ.
‘ರಾಜಕಾರಣ’ ಎನ್ನುವ ಪದ ಪಕ್ಷರಾಜಕಾರಣದ ರಾಜಕಾರಣಿಗಳಿಗೆ ಮಾತ್ರ ಸಂಬಂದಿಸಿದ್ದು ಎನ್ನುವ ಮೂಢನಂಬಿಕೆ ಆಳವಾಗಿ ಬೇರೂರಿದೆ. ‘ಅವರವರು ಅವರವರ ಕೆಲಸ ಕಾರ್ಯ ಮಾಡಬೇಕೇ ವಿನಃ ಅದರಲ್ಲಿ ರಾಜಕಾರಣ ತರಬಾರದು’ ಎನ್ನುವ ಬುದ್ಧಿವಾದದ ಮಾತನ್ನು ಹಲವರು ಮತ್ತೆ ಮತ್ತೆ ಹೇಳುತ್ತಾರೆ. ಅಂತವರು ತಿಳಿಯಬೇಕಾದ ಸಾಮಾನ್ಯ ಸಂಗತಿಯೊಂದಿದೆ. ನಮ್ಮೆಲ್ಲರ ನಿತ್ಯದ ಬದುಕಿನ ಕ್ಷಣ ಕ್ಷಣದಲ್ಲೂ ಸೂಕ್ಷ್ಮವಾಗಿ ಒಂದಿಲ್ಲೊಂದು ರಾಜಕಾರಣ ಬೆರೆತಿದೆ.
ತೀರಾ ಸರಳವಾಗಿ ‘ಯಾವುದೇ ಸಂಗತಿಯನ್ನು ಮುನ್ನಲೆಗೆ ತರುವ ಪ್ರಯತ್ನದ ಒಂದು ಕ್ರೀಯಾಶೀಲ ಚಟುವಟಿಕೆ ಅಥವಾ ಪ್ರಕ್ರಿಯೆಯೆ ರಾಜಕಾರಣ’ ಎಂದು ತಿಳಿಯೋಣ.
ಪ್ರೇಮಿಗಳು ಪರಸ್ಪರರನ್ನು ಆಕರ್ಷಿಸಲು ಹಲವು ಬಗೆಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುತ್ತಾರೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಸೆಳೆಯಲು ಇಂಥದ್ದೆ ತರಾವರಿ ಚಟುವಟಿಕೆಗಳಿರುತ್ತವೆ. ಇದನ್ನು ಬೇಕಾದರೆ ಒಲುಮೆಯ ರಾಜಕಾರಣ ಎಂದು ಕರೆಯೋಣ.
ಹೀಗೆ ಕೂಲಿ, ರೈತ, ಶಿಕ್ಷಕ, ಲಾಯರ್, ಪೋಲೀಸ್, ಕಾರ್ಮಿಕ, ವಿದ್ಯಾರ್ಥಿ, ಮಹಿಳೆ, ಮಕ್ಕಳು ಹೀಗೆ ಎಲ್ಲರೂ ಅವರದೆ ಆದ್ಯತೆ ಮತ್ತು ಅಗತ್ಯದ ಹಿನ್ನೆಲೆಯಲ್ಲಿ ಒಂದಿಲ್ಲೊಂದು ರಾಜಕಾರಣ ಮಾಡುವವರೆ ಆಗಿದ್ದಾರೆ.
ಇದರ ಹಾಗೆಯೇ ಆಡಳಿತ ಚುಕ್ಕಾಣಿ ಹಿಡಿಯುವ ಶಕ್ತಿ ರಾಜಕಾರಣದಲ್ಲಿ ಒಬ್ಬ ರಾಜಕಾರಣಿಯೂ ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯರಾಗುತ್ತಾರೆ.
ಇದನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ..
ಜಗತ್ತಿನಲ್ಲಿ ಸಮಾಜದ ತಳಮಟ್ಟದ ಜನಸಮುದಾಯಗಳಿಗೆ ಒಳಿತಾಗುವ ರಾಜಕಾರಣವಿದೆ. ಅದು ಇಂದಿನ ಸಮಾಜದಲ್ಲಿ ಸ್ವಲ್ಪ ದುರ್ಬಲವಾಗಿದೆ. ಇದನ್ನು ಅವಶ್ಯವಾಗಿ ಬಲಗೊಳಿಸಬೇಕಿದೆ. ಅಂತೆಯೇ ಸಮಾಜವನ್ನು ಒಡೆಯುವ, ಮೇಲ್ಜಾತಿ ಮೇಲ್ವರ್ಗದ ಬಲಿಷ್ಠರಿಗೆ ನೆರವಾಗಿ ಸಾಮಾನ್ಯ ಜನರನ್ನು ದಮನಿಸುವ ಹಿಂಸಿಸುವ ರಾಜಕಾರಣವೂ ಚಾಲ್ತಿಯಲ್ಲಿದೆ. ಮತ್ತದು ಬಲಿಷ್ಠವಾಗಿದೆ. ಈ ಬಲಿಷ್ಠತೆಯನ್ನು ಕುಗ್ಗಿಸುವ ರಾಜಕಾರಣದ ಅಗತ್ಯವಿದೆ.
ಪ್ರಜ್ಞಾವಂತರಾದವರು ಸಮಾಜವನ್ನು ಮನಸ್ಸು, ಜಾತಿ, ಧರ್ಮ, ಲಿಂಗ, ಪ್ರದೇಶ, ದೇಶದ ನೆಲೆಯಲ್ಲಿ ಒಡೆಯುವ ರಾಜಕಾರಣವನ್ನು ನಿರಾಕರಿಸಿ ಅದಕ್ಕೆ ಪರ್ಯಾಯವಾದ ಜನರಿಗೆ ಒಳಿತಾಗುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಜಾತ್ಯಾತೀತತೆ, ಧರ್ಮಸಹಿಷ್ಣತೆಯ ರಾಜಕಾರಣದ ಜತೆ ಗುರುತಿಸಿಕೊಳ್ಳುವ ಅಗತ್ಯವಿದೆ.
ಇದನ್ನು ಭಾರತದಂತಹ ದೇಶದಲ್ಲಿ ನಮ್ಮ ಸಂವಿಧಾನದ ಆಶಯಗಳ ಪರವಾದ ಜನಪರ ರಾಜಕಾರಣ ಎಂದು ಗುರುತಿಸೋಣ. ಇಂತಹ ರಾಜಕಾರಣದಲ್ಲಿ ಜೀವಪರ ಸಂಗಾತಿಗಳನ್ನು ಒಳಗೊಂಡಂತೆ ಸಾಮಾನ್ಯ ಜನರೂ ಒಟ್ಟಾಗಿ ಸಾಗಬೇಕಿದೆ.
ಹಾಗಾಗಿ ರಾಜಕಾರಣ ಎನ್ನುವ ಪದ ಪಕ್ಷರಾಜಕಾರಣ, ಭ್ರಷ್ಟ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗದಂತೆ ಎಚ್ಚರ ವಹಿಸೋಣ. ಕಾರಣ ಹೀಗೆ ಸೀಮಿತಗೊಳಿಸುವುದು ಕೂಡ ಒಂದು ರಾಜಕಾರಣವೆ. ಇದೇ ಕಾರಣಕ್ಕೆ ಸಾಮಾನ್ಯ ಜನರು ನಮಗೇಕೆ ಬೇಕು ರಾಜಕೀಯ ಎಂದು ಮೌನವಾಗುವ ಸಾಧ್ಯತೆಗಳೂ ಇರುತ್ತವೆ.
ಹಾಗಾಗಿ ಮೇಲೆ ಹೇಳಿದಂತೆ ಎಲ್ಲರೂ ತಮ್ಮದೇ ನೆಲೆಯ ಅದ್ಯತೆಯ ರಾಜಕಾರಣದಲ್ಲಿ ಪಾಲ್ಗೊಳ್ಳುವ ತಯಾರಿ ಮತ್ತು ಸಿದ್ಧತೆ ಇರುವ ಕಾರಣ ನಮ್ಮನ್ನೆಲ್ಲ ಆಳುವ ಶಕ್ತಿ ರಾಜಕಾರಣದ ಬಗೆಗೂ ನಿರ್ಭಯವಾಗಿ ನಾವುಗಳು ಮಾತನಾಡಬೇಕು. ಜನರು ರಾಜಕಾರಣದ ಚರ್ಚೆಗಳಲ್ಲಿ ಗೈರುಹಾಜರಾಗುವ ಕಾರಣಕ್ಕೆ ಜನರನ್ನು ಒಡೆಯುವ ಪಕ್ಷಗಳು, ಬ್ರಷ್ಟ ರಾಜಕಾರಣಿಗಳು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಹಾಗಾಗಿ ಪಕ್ಷರಾಜಕಾರಣ ಮತ್ತು ಅಧಿಕಾರ ಹಿಡಿಯುವ ಶಕ್ತಿ ರಾಜಕಾರಣದ ಮಿತಿಗಳ, ತಪ್ಪುಗಳ, ಬ್ರಷ್ಟತೆಯ ಬಗ್ಗೆ ಜನರು ಹೆಚ್ಚೆಚ್ಚು ಮಾತನಾಡಬೇಕು, ಚರ್ಚಿಸಬೇಕು. ವಾಸ್ತವದಲ್ಲಿ ಇದರ ಕೊರತೆ ಈ ದೇಶದಲ್ಲಿ ದೊಡ್ಡಮಟ್ಟದಲ್ಲಿದೆ. ಈ ಎಲ್ಲಾ ಕಾರಣದಿಂದ ಜನಸಾಮಾನ್ಯರು ಶಕ್ತಿರಾಜಕಾರಣದ ಬಗ್ಗೆ ಹೆಚ್ಚು ಮಾತನಾಡುವ ವಾತಾವರಣವೆ ಪ್ರಜಾಪ್ರಭುತ್ವದ ಸೌಂದರ್ಯ. ಅದುವೆ ನಮ್ಮೆಲ್ಲರ ಜವಾಬ್ದಾರಿ.
– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು



