ಬೆಂಗಳೂರು: ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯದಲ್ಲಿ ಅನಧಿಕೃತವಾದ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ರೈತರ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿಗೆ ತಲುಪಿದೆ ಎಂದು ಸಂಸದ ಹಾಗೂ ಬಿಜೆಪಿ ರೈತ ಮೋರ್ಚಾ ಮುಖಂಡ ಈರಣ್ಣ ಕಡಾಡಿ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಮತ್ತು ಕೃಷಿಕರ ಪಂಪ್ ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಯಂತೆ ಸರಿಯಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ರಾಜ್ಯದ ಎಲ್ಲ ಕಡೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಜಲಾಶಯಗಳಲ್ಲಿ ಸಹ ನೀರಿನ ಸಂಗ್ರಹ ಪ್ರಮಾಣ ತೃಪ್ತಿಕರವಾಗಿಲ್ಲ. ಬಿತ್ತನೆ ಪ್ರಮಾಣ ಸಹ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಐಪಿ ಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಈಗ ಬಿತ್ತಿರುವ ಶೇ.80ರಷ್ಟು ಬೆಳೆಗಳು ಒಣಗಿ, ರಾಜ್ಯದಲ್ಲಿ ಆಹಾರ ಉತ್ಪನ್ನಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಪರಿಣಾಮವಾಗಿ ರೈತರು ಆರ್ಥಿಕವಾಗಿಯೂ ಜರ್ಜರಿತರಾಗುತ್ತಾರೆ. ಹಾಗಾಗಿ ವಿದ್ಯುತ್ ಖರೀದಿಸಿ ಒದಗಿಸಲು ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಈಗಾಗಲೇ ಲೋಡ್ ಶೆಡ್ಡಿಂಗ್ ಕುರಿತು ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದೆ. ಒಂದು ಕಡೆ ಅನೇಕ ಘೋಷಣೆಗಳನ್ನು ಕೊಟ್ಟು ಮತ್ತೊಂದು ಕಡೆ ರೈತರನ್ನು ಕೈಬಿಡುವ ಕೆಲಸ ಆಗಬಾರದು. ಈ ಬಗ್ಗೆ ಗಮನ ಹರಿಸದಿದ್ದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಕೇಂದ್ರಗಳ ಮುಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಾಗೆಯೇ ಬೆಳೆ ಪರಿಹಾರ ನೀಡಲು ಇರುವ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದರೆ ರೈತರಿಗೆ ಹೆಚ್ಚು ಪರಿಹಾರ ಸಿಗುತ್ತದೆ. ಹಳೆ ಕಾಲದ ಪದ್ಧತಿಯನ್ನೇ ಅನುಸರಿಸುವುದು ಸೂಕ್ತವಲ್ಲ. ಈಗ ಕೃಷಿ ಚಟುವಟಿಕೆ ಬಹಳ ದುಬಾರಿಯಾಗಿದೆ. ಹಾಗಾಗಿ ನಿಯಮಗಳನ್ನು ಬದಲಾಯಿಸುವ ಸಂಬಂಧಿಸಿದ ಸಚಿವರಿಗೆ ಒತ್ತಾಯಿಸಿದ್ದಾರೆ.




