ಎಚ್ಚರ ತಪ್ಪಿದರೆ 3ನೇ ಬಾರಿ ಲಾಕ್ ಡೌನ್ ಖಚಿತ: ಆರ್.ಅಶೋಕ್

5 years ago

1000 ಆಟೋ ಚಾಲಕರಿಗೆ ದಿನಸಿ ಸಾಮಗ್ರಿ ಆಹಾರ ಕಿಟ್ ವಿತರಣೆ

ಬೆಂಗಳೂರು: ಸಾರ್ವಜನಿಕರು ದಯವಿಟ್ಟು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಿ ಮತ್ತು ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಚ್ಚರ ತಪ್ಪಿದರೆ ಮೂರನೇ ಬಾರಿಗೆ ಲಾಕ್ ಡೌನ್ ಆಗುವುದು ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಪದ್ಮನಾಭನಗರ ವಿಧಾನಸಭಾ ಆಟದ ಮೈದಾನದಲ್ಲಿ ಕೊರೋನ ವೈರಸ್ ಸಾಂಕ್ರಮಿಕ ರೋಗದ ಕಾರಣದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ 1000 ಆಟೋ ಚಾಲಕರು ಮತ್ತು ಕೂಲಿ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ಗಳನ್ನು  ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ  ಹಾಗೂ ಮಾಜಿ ಉಪ ಮೇಯರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ  ವಿತರಿಸಲಾಯಿತು.

ಅನಂರ ಮಾತಾಡಿದ ಅಶೋಕ್, ಕಳೆದ 18 ತಿಂಗಳಿಂದ ಕೊರೋನ ಎಂಬ ವೈರಸ್ ಸಾರ್ವಜನಿಕರ ಜೀವನವನ್ನು ತತ್ತರಗೊಳಿಸಿದೆ. ಕೊವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ಯಶ್ವಸಿಯಾಗಿದೆ ಎಂದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊವಿಡ್ ಪಾಸಿಟಿವ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಹೋಂ ಐಸೋಲೇಶನ್ ಇರುವವರಿಗೆ ಮನೆಯಲ್ಲಿರುವ ಸೋಂಕಿತರಿಗೆ ಆಹಾರ ಕಿಟ್, ಔಷಧಿ, ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು. ಉಸಿರಾಟದ ತೊಂದರೆಯಿಂದ ಬಳಲುವರವರಿಗೆ ಆಕ್ಸಿಜನ್ ಸಾಂದ್ರಕಗಳನ್ನು ಉಚಿತವಾಗಿ ನೀಡಲಾಯಿತು ಎಂದರು.

ಸಾರ್ವಜನಿಕರು ಎಚ್ಚರಿಕೆ ವಹಿಸಿಬೇಕು, ಎಚ್ಚರ ತಪ್ಪಿದರೆ ನಿಮ್ಮ ಜೊತೆಯಲ್ಲಿ, ನಿಮ್ಮ ಕುಟುಂಬವು ಕೊವಿಡ್ ಬರುವ ಸಾಧ್ಯತೆ ಇದೆ. ಕೊವಿಡ್ ನಿಂದ ಮೃತಪಟ್ಟ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡಲಾಗುವುದು. ಆಟೋ ಚಾಲಕರು ಕೊರೋನ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದರು.

ಆಟೋದಲ್ಲಿ ಪ್ರಯಾಣಿಕರ ಬಗ್ಗೆ ನಿಗಾವಹಿಸಿ ಕೊವಿಡ್ ನಿಯಾವಳಿ ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ಕೊರೋನ ರೋಗದಿಂದ ಸಾವಿರಾರು ಜನರು ಮೃತಪಟ್ಟರು, ಗಂಗಾ ನದಿಯಲ್ಲಿ ಸೋಂಕಿತರ ಹೆಣಗಳನ್ನು ಬಿಸಾಡಿದರು. ರಾಜ್ಯದಲ್ಲಿ ಸಾವಿರಾರು ಸೋಂಕಿತರ ಅಸ್ತಿಗಳನ್ನು ಕುಟುಂಬಸ್ತರು ತೆಗೆದುಕೊಳ್ಳದೇ ಹಾಗೇ ಬಿಟ್ಟಿದ್ದರು. ಸಂಪ್ರದಾಯದ ಪ್ರಕಾರ ಗೌರವಯುತ ಅಂತ್ಯಸಂಸ್ಕಾರ ಮಾಡಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಕಾವೇರಿ ನದಿಯಲ್ಲಿ ಸಾವಿರಾರು ಅಸ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಈ ಪುಣ್ಯದ ಕೆಲಸ ಮಾಡಿದ ಸೌಭಾಗ್ಯ ನಿಮ್ಮೆಲ್ಲರ ಸಹಕಾರದಿಂದ ಲಭಿಸಿತು ಎಂದರು.

ಎಲ್.ಶ್ರೀನಿವಾಸ್ ಮಾತನಾಡಿ, ತನ್ನ ವಾರ್ಡ್ ನಲ್ಲಿ ಈವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದ್ದು, ಮನೆಮನೆಗೆ ರೇಷನ್ ಕಿಟ್ ನೀಡುವ ಮುಖೇನ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದರು.

ನಾವು ಒಂದೂವರೆ ತಿಂಗಳಿಂದ ಪ್ರತಿದಿನ 5000 – 8000 ಮನೆಗಳಿಗೆ ಆಹಾರದ ಪೊಟ್ಟಣಗಳನ್ನ ವಿತರಿಸುತ್ತಿದ್ದೇವೆ. ಇನ್ನೂ ಅದನ್ನು ಮುಂದುವರೆಸಿದ್ದೇವೆ. ನಿಯಂತ್ರಣ ಕೊಠಡಿಯೊಂದನ್ನು ಸಹ ಸ್ಥಾಪಿಸಲಾಯಿತು ಮತ್ತು ಪದ್ಮನಾಭನಗರ ಕ್ಷೇತ್ರದ ಕೋವಿಡ್ ರೋಗಿಗಳಿಗೆ ಉಚಿತ ಲಸಿಕೆ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಒದಗಿಸಿದ್ದೇವೆ ಎಂದರು.

ಈಗ ತಜ್ಞರು ಸಂಭವನೀಯ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದ್ದರಿಂದ, ನಾವು ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಈ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಪ್ರತಿಯೊಬ್ಬರೂ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ ಎಂದರು.

Leave a Reply