ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥಕ್ಕೆ ಸಮಯ ವ್ಯರ್ಥ ಮಾಡದೆ ಕಾಮಗಾರಿ: ಡಿ.ಕೆ.ಶಿವಕುಮಾರ್

3 years ago

#Work #without #wasting #time #settlement #interstate #river #disputes #DKSivakumar

ದೆಹಲಿ: ಮಹದಾಯಿ,‌ ಮೇಕೆದಾಟು ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥಕ್ಕೆ ಸಮಯ ವ್ಯರ್ಥ ಮಾಡದೇ ಬೇಗ ಇತ್ಯರ್ಥಗೊಳಿಸಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯಸರ್ಕಾರ  ಆಸಕ್ತಿ ಹೊಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೃಷ್ಣಾ, ಕಾವೇರಿ ಕೊಳ್ಳದ ನೆನೆಗುದಿಗೆ ಬಿದ್ದಿರುವ ಹಲವು ನೀರಾವರಿ ಯೋಜನೆಗಳ ಬಗ್ಗೆ ದೆಹಲಿಯಲ್ಲಿ ನೀರಾವರಿ ತಜ್ಞರು, ಕಾನೂನು ತಜ್ಞರು ಮತ್ತು ರಾಜ್ಯದ ವಕೀಲರ ಜೊತೆ ಚರ್ಚೆ ನಡೆಸಿದರು.

ಸಭೆಯಲ್ಲಿ ರಾಜ್ಯದ ನದಿ ವಿವಾದ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವ ಪ್ರಕರಣಗಳು , ಕೇಂದ್ರ ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿರುವ ಕಡತಗಳು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ, ಕೃಷ್ಣಾ, ಮೇಕೆದಾಟು ಸೇರಿದಂತೆ ವಿವಿಧ ಅಂತಾರಾಜ್ಯ ನದಿ ವಿವಾದಗಳ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ತಜ್ಞರಿಂದ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸರ್ಕಾರದ ಆದ್ಯತೆಗಳೇನು ಎಂಬುದನ್ನು ವಿವರಿಸಿದ್ದೇನೆ. ಇನ್ನೂ ಕೆಲವು ವಿಚಾರಗಳ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಬಳಿಕ ಸೂಚನೆ ನೀಡಬೇಕಿದೆ ಎಂದು ಹೇಳಿದರು.

ಅಂತಾರಾಜ್ಯ ನದಿಗಳ ವಿವಾದದಲ್ಲಿ ಸಮಯ ವ್ಯರ್ಥ ಮಾಡಲು ನಮ್ಮ ಸರ್ಕಾರ ಸಿದ್ಧವಿಲ್ಲ. ಹೀಗಾಗಿ ಏನೆಲ್ಲಾ ಸಾಧ್ಯವಿದೆಯೋ ಆ ಕ್ರಮಗಳನ್ನ ಕೈಗೊಳ್ಳುತ್ತೇವೆ. ಯೋಜನೆಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ತಜ್ಞರ ತಂಡ ಈಗಾಗಲೇ ಏನೆಲ್ಲಾ ಮಾಡಬಹುದೆಂಬುದನ್ನು ತಮಗೆ ವಿವಿರಿಸಿದೆ ಎಂದು ತಿಳಿಸಿದರು.

ಸಲಹಾ ಸಮಿತಿ: ಬಯಲು ಸೀಮೆ ಜಿಲ್ಲೆಗಳಿಂದ ತುಂಗಾಭದ್ರಾ ನದಿಯಿಂದ ನೀರು ಹರಿಸಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನೀರು ನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಸಮಿತಿ ಸ್ಥಳೀಯವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ. ಪ್ರಸ್ತುತ ಒಳಹರಿವು ಉತ್ತಮವಾಗಿರುವುದರಿಂದ ಹೊರ ಹರಿಯುವಿಕೆ ಸಮಸ್ಯೆಯಾಗುವುದಿಲ್ಲ. ಕೊಪ್ಪಳ, ರಾಯಚೂರು, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ತುಂಗಾಭದ್ರಾದಿಂದ 5,575 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ ನೀಡಲಾಗಿದೆ. ಈ ನದಿಯಿಂದ ಆಂಧ್ರ ಪ್ರದೇಶಕ್ಕೂ ಪಾಲು ನೀಡಬೇಕಿದೆ ಎಂದು ತಿಳಿಸಿದರು.

Leave a Reply