ಮಂಗಳೂರು: ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಜನಸಾಮಾನ್ಯರ ಜೀವನೋಪಾಯದ ಮೇಲೆ ಮಾರಣಾಂತಿಕ ದಾಳಿಯನ್ನು ಎಸಗಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಆರೋಪಿಸಿದೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪದಾಧಿಕಾರಿಗಳು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ನೀಡಿದ್ದು ನಿರುದ್ಯೋಗ ಪೆಡಂಭೂತದಂತೆ ಹೆಚ್ಚುತ್ತಿದೆ. ನೋಟುಗಳ ಅಮಾನ್ಯೀಕರಣ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲುಗೊಳಿಸಿದೆ. ಬಡತನದ ಹೆಚ್ಚಳವಾಗಿ ಆರ್ಥಿಕ ಕುಸಿತ ತಲೆದೋರಿದ್ದು ನಿರುದ್ಯೋಗ ಹೆಚ್ಚಳದಿಂದಾಗಿ ಯುವಕರು ಹತಾಶರಾಗಿದ್ದಾರೆ ಎಂದು ಹೇಳಿದರು.
ಅಸಹನೀಯವಾದ ಬೆಲೆ ಏರಿಕೆ ಒಂದೆಡೆಯಾದರೆ ವೇತನ ಹೆಚ್ಚಳವಿಲ್ಲದೆ ನಿರ್ಗತಿಕತನದಿಂದಾಗಿ ಹಸಿವಿನ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಲಾಗುತ್ತಿದ್ದು ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿಯನ್ನು ಮಾಡಿಕೊಂಡು ಶಾಸನಬದ್ಧ ಸೌಲಭ್ಯಗಳಾದ ಪಿ.ಎಫ್. ಇಎಸ್‌ಐ ಮತ್ತು ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.
ಕೋವಿಡ್ ಸಾಂಕ್ರಾಮಿಕ ಪಿಡುಗಿನ ತರುವಾಯ ಜೀವನೋಪಾಯವೇ ಸಂಕಷ್ಟದಲ್ಲಿರುವಾಗ ಮತ್ತೆ ಸರಿದಾರಿಗೆ ತರಲು ಮಧ್ಯಪ್ರವೇಶಿಸಬೇಕಾದ ಸರ್ಕಾರ ಕೈ ಚೆಲ್ಲಿದೆ. ದೆಹಲಿಯ ಹೊರವಲಯದಲ್ಲಿ ಒಂದು ವರ್ಷಗಳ ಕಾಲ ನಡೆದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಅವರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿದು ನಂಬಿಕೆ ದ್ರೋಹ ಮಾಡಿ ವಚನಭ್ರಷ್ಟವಾಗಿದೆ ಎಂದು ಕಿಡಿಕಾರಿದರು.
ಕಾರ್ಮಿಕ ವರ್ಗದ ಬೇಡಿಕೆಗಳಿಗೆ ಸ್ಪಂದಿಸದೆ ಕೇಂದ್ರ ಸರ್ಕಾರ ಬಹಿರಂಗವಾಗಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ನಿಂತಿದೆ. ಅವರಿಗೆ ಸಹಾಯ ಮಾಡಲು ಇತ್ತೀಚೆಗೆ ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತಂದು ದಿನದ ದುಡಿತದ ಅವಧಿಯನ್ನು ೧೨ ಗಂಟೆಗಳಿಗೆ ಹೆಚ್ಚಿಸಿದೆ. ಕಾರ್ಮಿಕ ಸಮುದಾಯ ಹಲವಾರು ತ್ಯಾಗ ಬಲಿದಾನ ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ಲೇಬರ್ ಕೋಡನ್ನು ತರಲಾಗಿದೆ. ಕಾರ್ಪೊರೇಟ್ ಕಂಪೆನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯಿತಿಗಳನ್ನು ಘೋಷಿಸಲಾಗಿದ್ದು ಅವರ ಸಾಲಗಳನ್ನು ಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಹೋರಾಟದ ಮುಂದುವರಿಕೆಯಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವಿವಿಧ ಹಂತಗಳಲ್ಲಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ. ಇದೀಗ ಆಗಸ್ಟ್ ೯ ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಅದರಂತೆ ದ.ಕ. ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಅಂದು ಬೆಳಿಗ್ಗೆ ೧೦ಕ್ಕೆ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ದ.ಕ. ಜಿಲ್ಲೆಯ ಸಮಸ್ತ ಕಾರ್ಮಿಕ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ವಿನಂತಿಸಿದೆ.
ಬೇಡಿಕೆಗಳು:
೧. ದುಡಿಮೆಯ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು.
೨. ಜೀವನ ಯೋಗ್ಯ ಕನಿಷ್ಠ ವೇತನ ರೂ. 31,500/-ಕ್ಕೆ ಹೆಚ್ಚಿಸಬೇಕು.
೩. ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದಾಗಬೇಕು.
೪. ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೊಳಿಸಿ ಕನಿಷ್ಠ ರೂ. 8000/- ಪಿಂಚಣಿ ನೀಡಬೇಕು.
೫. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು.
೬. ಉದ್ಯೋಗಖಾತ್ರಿ ಯೋಜನೆ ಮನರೇಗಾ ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು.
೭. ಸ್ಕೀಂ ಕಾರ್ಮಿಕರಾದ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೊಳಪಡಿಸಬೇಕು.
೮. ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು.
೯. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು.
೧೦. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು.
೧೧. ವಿದ್ಯುಚ್ಛಕ್ತಿ ಮಸೂದೆ ೨೦೨೦ ಹಿಂಪಡೆಯಬೇಕು.
ಪತ್ರಿಕಾಗೋಷ್ಠಿಯಲ್ಲಿ AITUC ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆರಿಂಜ, CITU ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, INTUC ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಜೆ. ಬಾಲಕೃಷ್ಣ ಶೆಟ್ಟಿ (ಸಿಐಟಿಯು ಜಿಲ್ಲಾಧ್ಯಕ್ಷ), ಬಿ. ಶೇಖರ್ (ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ), ಯೋಗೀಶ್ ಜಪ್ಪಿನಮೊಗರು (ಸಿಐಟಿಯು ಜಿಲ್ಲಾ ನಾಯಕ), ಕರುಣಾಕರ, ವಿ.ಕುಕ್ಯಾನ್, ಸುರೇಶ್ ಕುಮಾರ್, ತಿಮ್ಮಪ್ಪ ಕಾವೂರು (AITUC ಜಿಲ್ಲಾ ನಾಯಕ)ರಾಮಣ್ಣ ವಿಟ್ಲ(AICCTU ಜಿಲ್ಲಾ ನಾಯಕರು) ಹಾಜರಿದ್ದರು.




