ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಭಾರಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿರುವ ಹರಿಪ್ರಸಾದ್, ನನಗೆ ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಬಹಳ ಚೆನ್ನಾಗಿ ಗೊತ್ತಿದೆ. ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚನ್ನಯ್ಯ ಪಾರ್ಕ್ ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನು ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಮಂಗಳೂರು ವಿವಿಯಲ್ಲಿ ಗುರುಪೀಠ ಸ್ಥಾಪನೆಗೆ ನಾನು ಎಂಪಿ ಆದಾಗ ಹಣ ಕೊಟ್ಟಿದ್ದೆ. ಕಟ್ಟಡ ಅರ್ಧಕ್ಕೆ ನಿಂತಿದೆ ಹಣ ಕೊಟ್ಟಿಲ್ಲ, ಆದರೆ ಅವರ ಸಮಾಜಕ್ಕೆ ಎಷ್ಟು ಕೊಟ್ಟಿದ್ದಾರೆ ಎಂದು ಸ್ವಾಮೀಜಿಗಳು ನೋಡಲಿ ಎಂದು ಹೇಳಿದರು.
ಹಿಂದುಳಿದ ವರ್ಗ ಎಂದರೆ ಒಂದು ಜಾತಿ ಮಾತ್ರವಲ್ಲ ಎಂದ ಹರಿಪ್ರಸಾದ್, ಜಾತಿ ಬೇರೆ, ವರ್ಗ ಬೇರೆ. ನಾವು ವರ್ಗದಲ್ಲಿ ಬರುತ್ತೇವೆ. ವರ್ಗದಲ್ಲಿ ಬರುವ ಎಲ್ಲರೂ ಸಮಾನ ಹಕ್ಕು ಪಡೆಯಬೇಕು. 11 ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ನಿರ್ಣಾಯಕರಾಗಿದ್ದೇವೆ. ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ. ನಾಲ್ಕು ಜನ ಟಿಕೆಟ್ ವಂಚಿತರಾದರು. 2 ಬಿಲ್ಲವ, 1 ಈಡಿಗ, 1 ದೀವರು ವಂಚಿತರಾದರು. ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳು ಅಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರನ್ನು ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡುತ್ತಾರೆ. ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಸ್ಥಾನ ಬಿಟ್ಟುಕೊಡಲಿ. ನಮ್ಮನ್ನು ಯಾಕೆ ಕಟ್ ಮಾಡ್ತಾರೆ, ನಾವು ಹೆಚ್ಚು ಇರುವ ಜಾಗದಲ್ಲಿ ಅವಕಾಶ ಕೊಡಬೇಕು. ನಾವೇನು ಮಂಡ್ಯ, ಬೆಳಗಾವಿಯಲ್ಲಿ ಕೊಡಿ ಎಂದು ಕೇಳಲ್ಲ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಕಡೆ ನಮ್ಮವರು ನಿರ್ಣಾಯಕ. ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ ಎಂದು ತಿಳಿಸಿದರು.
ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ, 5 ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ. ಛತ್ತೀಸ್ಗಢದ ಸಿಎಂ ನಮ್ಮ ನೆಂಟರು ಅಲ್ಲ, ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ಸಿಎಂ ಮಾಡೋದು, ಕೆಳಗೆ ಇಳಿಸೋದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೆ ಬೆಂಗಳೂರಿನಲ್ಲಿ 49 ವರ್ಷ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಓಡಿಸಿ ಬಿಡುತ್ತಿದ್ದರು ಎಂದು ಹೇಳಿದರು.




