ಬೆಂಗಳೂರು: ಬಜೆಟ್ ಅನುಮೋದನೆ, ಆಡಳಿತ-ಪ್ರತಿಪಕ್ಷ ಸದಸ್ಯರ ನಡುವಿನ ವಾಗ್ವಾದದ ಜೊತೆಗೆ ಪ್ರತಿಪಕ್ಷ ಸದಸ್ಯರ ಅಮಾನತು ಹಾಗೂ ಕಲಾಪ ಬಹಿಷ್ಕಾರದ ಘಟನಾವಳಿಗಳನ್ನೊಳಗೊಂಡ ವಿಧಾನ ಮಂಡಲದ ಬಜೆಟ್ ಅಧಿವೇಶನಕ್ಕೆ ತೆರೆ ಬಿದ್ದಿದೆ.
ಕಳೆದ 15 ದಿನಗಳಿಂದ ನಡೆದ ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಹದಿನಾರನೇ ವಿಧಾನಸಭೆಯ ಮೊದಲನೇ ಅಧಿವೇಶನದ ಮುಂದುವರೆದ ಅಧಿವೇಶನವು ಜುಲೈ 3 ರಿಂದ ಇಂದಿವರೆಗೆ ಒಟ್ಟು 15 ದಿನಗಳ ಕಾಲ ಸುಮಾರು 78 ಗಂಟೆ 25 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ಸಭಾಧ್ಯಕ್ಷ ಯುಟಿ ಖಾದರ್ ತಿಳಿಸಿದರು.
ಕಲಾಪದ ಕುರಿತಂತೆ ವಿವರ ನೀಡಿದ ಅವರು, ಜು. 3 ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದ ವಂದನಾನಿರ್ಣಯದ ಮೇಲೆ 34 ಸದಸ್ಯರುಗಳು ಒಟ್ಟು 12 ಗಂಟೆ 39 ನಿಮಿಷಗಳ ಕಾಲ ಭಾಗವಹಿಸಿದ್ದರು. ಜು. 13 ರಂದು ವಂದನಾನಿರ್ಣಯದ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ ಎಂದರು.
2023-24ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜು. 7 ರಂದು ಮಾಡಿಸಿದ್ದರು. ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 62 ಸದಸ್ಯರುಗಳು ಒಟ್ಟು 12 ಗಂಟೆ 52 ನಿಮಿಷಗಳ ಕಾಲ ಭಾಗವಹಿಸಿದ್ದು, ಜು.20 ರಂದು ಮುಖ್ಯಮಂತ್ರಿಯವರು ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು. ಈ ಅಧಿವೇಶನದಲ್ಲಿ ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರನ್ನಾಗಿ ರುದ್ರಪ್ಪ ಮಾನಪ್ಪ ಲಮಾಣಿ ಇವರನ್ನು ಚುನಾಯಿಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ಹೇಳಿದರು.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿಯನ್ನು (2023ರ ವರದಿ ಸಂಖ್ಯೆ-2) ಸದನದಲ್ಲಿ ಮಂಡಿಸಲಾಗಿದೆ. ಹದಿನೈದನೇ ವಿಧಾನಸಭೆಯ 2021-22 ಹಾಗೂ 2022-23ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ಹದಿನೈದನೇ ವರದಿ, ಹದಿನೈದನೇ ವಿಧಾನಸಭೆಯ 2020-21ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಹನ್ನೆರಡನೇ ವಿಶೇಷ ವರದಿಯನ್ನು ಸದನದಲ್ಲಿ ಮಂಡಿಸಲಾಗಿದ್ದು ಒಟ್ಟು 29 ಅಧಿಸೂಚನೆಗಳು 2 ಅಧ್ಯಾದೇಶಗಳು ಮತ್ತು 70 ವಾರ್ಷಿಕ ವರದಿಗಳು, 99 ಲೆಕ್ಕ ಪರಿಶೋಧನಾ ವರದಿಗಳು, 4 ಅನುಪಾಲನ 1 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು.




