ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬಸವರಾಜ ಬೊಮ್ಮಾಯಿ

3 years ago

#Law #order #completely #deteriorated #state #BasavarajaBommai

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ.ರಾಜಧಾನಿ ಬೆಂಗಳೂರಿನ ಕಾನೂನು ಸುವ್ಯವಸ್ಥೆಯ ಮೇಲಿನ ನಿಯಂತ್ರಣ ಕೈ ತಪ್ಪುತ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಕೆಲಸ. ಆದರೆ, ಈ ಸರ್ಕಾರ ಬಂದ ಮೇಲೆ ಮಧ್ಯವರ್ತಿಗಳು ಕೈ ಹಾಕಿ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಬಹಳಷ್ಟು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿಲ್ಲ ಎಂದು ಆಪಾದಿಸಿದರು.

ಬೆಂಗಳೂರಿನಲ್ಲಿ ಕ್ಲಬ್ ಹೆಸರಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ, ಹಫ್ತಾ ವಸೂಲಿ ತೀವ್ರವಾಗುತ್ತಿದೆ.ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಅಪರಾಧದ ಹಿನ್ನೆಲೆಯುಳ್ಳವರು ಇಲ್ಲೇ ನೆಲೆಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸ ಆಗುತ್ತಿದೆ. ಕೆಲವರು ಐಎಸ್‍ಐ ನಂತಹ ದೇಶದ್ರೋಹಿ ಸಂಸ್ಥೆಗಳ ಸಂಪರ್ಕದಲ್ಲಿದ್ದಾರೆ. ಇದರ ಆಳ ಮತ್ತು ಉದ್ದ ದೊಡ್ಡದಿದೆ. ಇದಕ್ಕೆಲ್ಲಾ ಅಂತಾರಾಷ್ಟ್ರೀಯ ಕುಮ್ಮಕ್ಕು ಇದೆ. ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲುಸುತ್ತೇನೆ ಎಂದರು.

ಉಗ್ರರ ವಿರುದ್ಧದ ಕೇಸ್‍ಗಳನ್ನು ಕೂಡಲೇ ತನಿಖೆಗೆ ಎನ್‍ಐಎಗೆ ಕೊಡಬೇಕು. ಬೆಂಗಳೂರು ಸುರಕ್ಷತೆ ಬಗ್ಗೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಬೇಕು.ಸದ್ಯ ಪೊಲೀಸರು ಬಂಧಿಸಿರುವ ವ್ಯಕ್ತಿಗಳ ಹಿಂದೆ ಅಂತಾರಾಷ್ಟ್ರೀಯ ಸಂಸ್ಥೆಗಳ ಬೆಂಬಲವಿದೆ. ಬೆಂಗಳೂರಿನಲ್ಲಿ ಸ್ಪೋಟ ಮಾಡುವ ಹುನ್ನಾರ ಇದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಗಿಕ್ರಮ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ಪೊಲೀಸರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಇದು ಸೂಕ್ಷ್ಮ ವಿಚಾರ. ಇತ್ತೀಚೆಗೆ ರಸ್ತೆಗಳಲ್ಲಿ ಕೊಲೆಗಳಾಗುತ್ತಿವೆ. ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದರು.

Leave a Reply