ಎನ್.ಡಿ.ಎ ಮತ್ತು ಯುಪಿಎ ಮೈತ್ರಿಕೂಟ ರಚನೆ ಕಸರತ್ತು

3 years ago

#NDA #UPA #alliance #formation #exercise

ದೆಹಲಿ/ಬೆಂಗಳೂರು: ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳೆರಡೂ ಮೈತ್ರಿಕೂಟ ರಚನೆಯ ಯತ್ನವನ್ನು ಬಿರುಸುಗೊಳಿಸಿವೆ. ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ವಿಪಕ್ಷಗಳು ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಸಭೆ ನಡೆಸುತ್ತಿದ್ದರೆ, ಬಿಜೆಪಿ ನೇತೃತ್ವದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಂಗಳವಾರ ದೆಹಲಿಯಲ್ಲಿ ಸಭೆ ನಡೆಸಲಿದೆ. ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಘೋಷಿಸುವ ನಿರೀಕ್ಷೆಯಿದೆ.

ಇನ್ನು 24 ವಿರೋಧ ಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಿ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮತ್ತು ಯೋಜನೆಯನ್ನು ರೂಪಿಸಲಿವೆ. ಜುಲೈ 20 ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ನಿಟ್ಟಿನಲ್ಲಿ ಕೂಡ ಚಿಂತನ ಮಂಥನ ನಡೆಯಲಿದೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಭೆ ನಡೆಯಲಿದೆ. ಮಂಗಳವಾರ ಸಂಜೆ ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಗೆ ಮೈತ್ರಿ ಪಾಲುದಾರರನ್ನು ಹೊರತುಪಡಿಸಿ, ಬಿಜೆಪಿ ಹೊಸ ಮಿತ್ರರನ್ನು ಮತ್ತು ಕೆಲವು ಮಾಜಿ ಮಿತ್ರರನ್ನು ಕೂಡ ಆಹ್ವಾನಿಸಿದೆ.

ಬಿಹಾರದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್, ಹಿಂದೂಸ್ತಾನಿ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಸಿಂಗ್ ಕುಶ್ವಾಹಾ ಮತ್ತು ವಿಕಾಸಶೀಲ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ ಅವರನ್ನು ಸಭೆಗೆ ಬಿಜೆಪಿ ಆಹ್ವಾನಿಸಿದೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾಜಿ ಮಿತ್ರ ಓಂ ಪ್ರಕಾಶ್ ರಾಜ್‌ಭರ್ ಅವರು ಇಂದು ಮುಂಜಾನೆ ಎನ್‌ಡಿಎಗೆ ಮರು ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ ಮತ್ತು ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ಅವರು ನಿನ್ನೆ ಉತ್ತರ ಪ್ರದೇಶ ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.

ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಬಾದಲ್ ಕುಟುಂಬದ ನೇತೃತ್ವದ ಶಿರೋಮಣಿ ಅಕಾಲಿದಳ ಹಲವು ಊಹಾಪೋಹಗಳ ನಂತರ ಕೂಡ ಬಿಜೆಪಿ ಜೊತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಪಂಜಾಬ್‌ನಲ್ಲಿ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿರುವ ಬಿಜೆಪಿ ಆಂಧ್ರದಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ 24 ಪಕ್ಷಗಳು ಇವೆ. ಬಿಜೆಪಿ, ಎಐಎಡಿಎಂಕೆ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ), ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ), ಎಸ್‌ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ), ಜೆಜೆಪಿ (ಜನನಾಯಕ್ ಜನತಾ ಪಾರ್ಟಿ), ಐಎಂಕೆಎಂಕೆ (ಭಾರತೀಯ ಮಕ್ಕಳ್ ಕಳ್ಚಿ ಮುನ್ನೇತ್ರ ಕಜಗಮ್), ಎ ಎಸ್ ಜೆ ಯು, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಮಿಜೋ ನ್ಯಾಷನಲ್ ಫ್ರಂಟ್, ತಮಿಳು ಮನಿಲಾ ಕಾಂಗ್ರೆಸ್, ಬೋಡೋ ಪೀಪಲ್ಸ್ ಪಾರ್ಟಿ, ಪಾಟಾಳಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಅಪ್ನಾ ದಳ, ಅಸ್ಸಾಂ ಗಣ ಪರಿಷತ್, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ನಿಶಾದ್ ಪಾರ್ಟಿ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್, ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಪುದುಚೇರಿ, ಶಿರೋಮಣಿ ಅಕ್ದುಚೇರಿ ದಲ್ ಸಯುಂಕ್ತ್ ಮತ್ತು ಜನಸೇನಾ ಬಿಜೆಪಿ ಜೊತೆ ಗುರುತಿಸಿಕೊಂಡಿವೆ. ಎನ್‌ಸಿಪಿ, ಲೋಕಜನ ಶಕ್ತಿ ಪಾರ್ಟಿ (ರಾಮ್ ವಿಲಾಸ್), ಎಚ್‌ಎಎಂ, ಆರ್‌ಎಲ್‌ಎಸ್‌ಪಿ, ವಿಐಪಿ ಮತ್ತು ಎಸ್‌ಬಿಎಸ್‌ಪಿ, ಆಡಳಿತಾರೂಢ ಮೈತ್ರಿಕೂಟಕ್ಕೆ ಹೊಸ ಸೇರ್ಪಡೆಯಾಗಲಿದ್ದಾರೆ.

Leave a Reply