ಮೋದಿಯವರ 15 ಲಕ್ಷ ರೂಪಾಯಿ ಹಾಕುವ ಭರವಸೆ ಜಾರಿಯಾಗಿಲ್ಲ: ಕೋನರೆಡ್ಡಿ

3 years ago

#Modi #promise #Rs15 #lakh #notbeen #fulfilled #Konreddy

ಬೆಂಗಳೂರು: ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಕಲ್ಯಾಣ ಕರ್ನಾಟಕದಂತೆ ಕಿತ್ತೂರು ಕರ್ನಾಟಕ ಕೂಡ ಹಿಂದುಳಿದಿದೆ‌. ಇದನ್ನು ಅದರ ಮಾದರಿಯಲ್ಲಿ  ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ದೊರೆತಿದೆ. ಅದೇ ಮಾದರಿಯಲ್ಲಿ ಕಿತ್ತೂರು ಕರ್ನಾಟವನ್ನು ಅಭಿವೃದ್ಧಿ ಪಡಿಸಲು ಎಲ್ಲಾ ಶಾಸಕರು ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಈ ಹಿಂದೆ ನೆರೆ ಹಾವಳಿಯ ವೇಳೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ ಸರ್ಕಾರ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಇವರನ್ನು ನಂಬಿ ಸಂತ್ರಸ್ತರು ಮನೆ ಕೆಡವಿ ಕುಳಿತಿದ್ದಾರೆ. ಇಲ್ಲಿಯವರೆಗೆ ಉಳಿದ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಈ ಹಣ ಬಿಡುಗಡೆ ಮಾಡುವ ಮೂಲಕ ಈ ಜನ ಮನೆ ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಆಗ್ರಹಿಸಿದರು.

ನಮ್ಮ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳು ಎಂಬ ನಿರ್ಲಕ್ಷ್ಯ ವಹಿಸಬಾರದು. ಉತ್ತರ ಕರ್ನಾಟಕ ಭಾಗದ ರೈತ ಹಿತರಕ್ಷಣೆಗೆ  ಮುಂದಾಗಬೇಕು. ಈ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರದಿಂದ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಟಾಪಟಿ: ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆದರೆ  ದೇಶದ ಎಲ್ಲ ಜನರ ಬ್ಯಾಂಕ್ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಇದು ಜಾರಿಯಾಗಿಲ್ಲ ಎಂದು ಹೇಳಿದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್, ಪ್ರಧಾನಿಗಳು ಹಾಗೆ ಹೇಳಿದ್ದರ ಬಗ್ಗೆ ದಾಖಲೆ ಕೊಡಿ. ಅವರು ಹಾಗೆ ಹೇಳಿದ್ದರೆ ನಾನು ರಾಜಕೀಯ ನಿವೃತ್ತಿಯಾಗಲು ಸಿದ್ದ ಎಂದು  ಸವಾಲು ಹಾಕಿದರು.

ಸುಮ್ಮನೆ ಭಾಷಣ ಮಾಡಬೇಡಿ. ಪ್ರಧಾನಿಗಳು15  ಲಕ್ಷ ರೂ. ಹಾಕುವುದಾಗಿ ಹೇಳಿರುವ ಭಾಷಣದ ತುಣುಕ್ಕಿದ್ದರೆ ಕೊಡಿ. ಅವರು ಹಾಗೆ ಹೇಳಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇಜವಾಬ್ದಾರಿಯಿಂದ ಮಾತನಾಡಬಾರದು. ದಾಖಲೆ ಕೊಡಿ ಎಂದು ಒತ್ತಾಯಿಸಿದರು.

ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ಬಿಜೆಪಿಯ ಬಹುತೇಕ ಸದಸ್ಯರು ನಿಂತು ದಾಖಲೆ ಇಲ್ಲದೆ ಮಾತನಾಡಬೇಡಿ, ದಾಖಲೆ ಇದ್ದರೆ ಕೊಡಿ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಈ ಗದ್ದಲದ ನಡುವೆಯೇ ಮಾತನಾಡಿದ ಸಚಿವ ರಾಜಣ್ಣ, ಪ್ರಧಾನಿಗಳು ಆ ರೀತಿ ಹೇಳಿರುವುದು ದೇಶಕ್ಕೇ ಅಲ್ಲ, ಇಡೀ ಪ್ರಪಂಚಕ್ಕೆ ಗೊತ್ತಿದೆ. ಈ ರೀತಿ ನೀವು ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿ, ಯತ್ನಾಳ್ ಅವರೇ ನೀವು ಹೀಗೆಲ್ಲ ಮಾತನಾಡಿದರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಎಂದುಕೊಂಡಿದ್ದೀರಾ, ಅದು ಆಗಲ್ಲ ಎಂದು ಮಾತಿನ ಬಾಣ ಬಿಟ್ಟರು.

ಸಚಿವ ರಾಜಣ್ಣನವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು, ದಾಖಲೆ ಇಲ್ಲದೆ ಮಾತನಾಡಬೇಡಿ, ಪ್ರಧಾನಿಗಳು ಎಲ್ಲೂ ಆ ರೀತಿ ಹೇಳಿಲ್ಲ ಎಂದರು.

ನೀವು ದಾಖಲೆ ಕೊಟ್ಟರೆ ನಾನು ಪ್ರಧಾನಿಗಳನ್ನೆ ಈ ಬಗ್ಗೆ ಕೇಳುತ್ತೇನೆ. ನಮ್ಮಲ್ಲಿ ಅಷ್ಟು ಪ್ರಜಾತಂತ್ರವಿದೆ. ನನಗೂ ತಾಕತ್ತು ಇದೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸದಸ್ಯರಿಗೆ ತಿರುಗು ಬಾಣ ಬಿಟ್ಟರು.

ಆಗ ಕಾಂಗ್ರೆಸ್ ಪಕ್ಷದ ಅಬ್ಬಯ್ಯ ಪಸಾದ್, ಜಿಎಸ್‌ಟಿ ದುಡ್ಡು ಕೇಳಲು ನಿಮಗೆ ಆಗಿಲ್ಲ. ಇನ್ನು ಇದನ್ನು ಕೇಳುತ್ತೀರಾ ಎಂದರು. ಈ ನಡುವೆ ಮಾತನಾಡಿದ ಬಿಜೆಪಿಯ ಬಿ.ವೈ. ವಿಜಯೇಂದ್ರ ಅವರು, ಸದನದಲ್ಲಿ ಪದೇ ಪದೇ ಕಾಂಗ್ರೆಸ್‌ನವರು 15 ಲಕ್ಷ ರೂ. ಪ್ರಧಾನಿಗಳು ಹಾಕುತ್ತೇನೆ ಎಂದು ಹೇಳಿದ್ದರು ಎಂಬ ಮಾತುಗಳನ್ನು ದಾಖಲೆ ಇಲ್ಲದೆ ಆಡುತ್ತಿದ್ದಾರೆ. ಈ ಮಾತುಗಳನ್ನು ಕಡತದಿಂದ ತೆಗೆಸಿ ಹಾಕಬೇಕು ಎಂದರು.

ಮತ್ತೆ ಮಾತು ಮುಂದುವರೆಸಿದ ಕೋನರೆಡ್ಡಿ, ನಾನು ಸತ್ಯ ಹೇಳಿದ್ದೇನೆ ಎಂದಾಗ ಬಿಜೆಪಿ ಸದಸ್ಯರು ಒಮ್ಮೆಲೆ ಎದ್ದುನಿಂತು ಕೋನರೆಡ್ಡಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

Leave a Reply