ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಸರ್ಕಾರ ರಚನೆಯಾದ ನಂತರವೂ ಈ ಹೊಂದಾಣಿಕೆ ಮುಂದುವರೆದಿದೆ ಎಂಬ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನಾನು ವಿರೋಧ ಪಕ್ಷದಲ್ಲಿದ್ದಾಗ ಯಾವುದೇ ಸಚಿವರ ಮನೆಗೆ ಹೋಗಿದ್ದಾಗಲಿ, ಹೊಂದಾಣಿಕೆ ಮಾಡಿಕೊಂಡಿದ್ದಾಗಲಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದಾರೆ.
ವಿಧಾನ ಮಂಡಲದ ಉಭಯ ಸದನಗಳನ್ನುದ್ದೇಶಿಸಿ, ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಕುರಿತು ವಿಧಾನಸಭೆಯಲ್ಲಿ ನಡೆಯುತ್ತಿರುವ ಚರ್ಚೆಯ ವೇಳೆ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ, ತಾವು 1983 ರಿಂದ ಸದನದಲ್ಲಿದ್ದೇನೆ, ನನ್ನ ಜತೆ ಸದನಕ್ಕೆ ಬಂದವರಲ್ಲಿ ಬಿ.ಆರ್ ಪಾಟೀಲ್, ದೇಶ್‌ಪಾಂಡೆ ಬಿಟ್ಟು ಬೇರೆಯವರ್‍ಯಾರು ಇಲ್ಲ, ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಯಾರಾದರೂ ಅದನ್ನು ಸಾಬೀತುಮಾಡಿದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಗ್ರಾಹಕರ ಒಂದು ವರ್ಷದ ಸರಾಸರಿ ಬಳಕೆಯನ್ನು ಪರಿಗಣನೆಗೆ ತೆಗೆದುಕೊಂಡು 2೦೦ ಯೂನಿಟ್‌ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು
ನೇರ ನಗದು: ರಾಜ್ಯದ 4 ಕೋಟಿ 42 ಲಕ್ಷ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ತಲಾ 170 ರೂ. ಗಳನ್ನು ನೇರ ನಗದು ವರ್ಗಾವಣೆ ಮೂಲಕ ತಲುಪಿಸುತ್ತೇವೆ ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಸೇರಿ 1.28 ಕೋಟಿ ಪಡಿತರ ಚೀಟಿದಾರರು ಇದ್ದಾರೆ. ಒಟ್ಟಾರೆ 4.42 ಕೋಟಿ ಫಲಾನುಭವಿಗಳು ಇದ್ದಾರೆ. ಇದುವರೆಗೂ ಯಾವ ಫಲಾನುಭವಿಗಳು ಹಕ್ಕು ಪಡೆಯುತ್ತಿದ್ದಾರೋ ಅವರಿಗೆ ಹೆಚ್ಚುವರಿ ಅಕ್ಕಿ ನೀಡುವವರೆಗೂ ಪ್ರತಿ ಕೆಜಿ ಗೆ 34 ರೂ. ನಂತೆ ತಲಾ 170 ರೂ. ನೀಡುತ್ತೇವೆಂದು ಸ್ಪಷ್ಟನೆ ನೀಡಿದರು.



