ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಸಂಬಂಧ ಪಟ್ಟವರು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ತಮಗೂ ಇದಕ್ಕೂ ಸಂಬಂಧವಿಲ್ಲ. ಈ ಕುರಿತು ಆಧಾರ ರಹಿತ ಆರೋಪ ಮಾಡಬಾರದು, ಧೈರ್ಯವಿದ್ದರೆ ಸಾಕ್ಷಿ ಬಿಡುಗಡೆ ಮಾಡಿ ಎಂದು ಮಾಜಿ ಶಾಸಕ ಯತೀಂದ್ರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಷಯದಲ್ಲಿ ದಂಧೆ ನಡೆಯುತ್ತಿದೆ ಎಂಬ ಕುರಿತು ತಮ್ಮಲ್ಲಿ ಮಾಹಿತಿ ಇಲ್ಲ, ಯಾರ ಬಳಿಯಾದರೂ ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದರು.
ವರ್ಗಾವಣೆ ದಂಧೆ ನಡೆಯುತ್ತಿದೆ. ಯತೀಂದ್ರ ಅವರಿಗೆ ಸೇರಿದ ಆಡಿಯೋ ಸಾಕ್ಷಿ ಇದೆ ಎಂಬೆಲ್ಲಾ ವದಂತಿಗಳ ಬಗ್ಗೆ ಪ್ರಶ್ನಿಸಿದಾಗ ಅಸಮಾಧನ ವ್ಯಕ್ತಪಡಿಸಿದ ಯತೀಂದ್ರ ಅವರು, ಯಾರ ಆಡಿಯೋ ಧೈರ್ಯ ಇದ್ದರೆ ಬಿಡುಗಡೆ ಮಾಡಲು ಹೇಳಿ, ನನ್ನದಂತೂ ಆಡಿಯೋ ಇಲ್ಲ. ಯಾವ ವರ್ಗಾವಣೆ ದಂಧೆಯೂ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋಲು ಕಂಡಿದೆ. ಈ ಪಕ್ಷ ಹಿಂದೆ ಮತದಾರರಿಗೆ ನೀಡಿದ ಯಾವುದೇ ಭರವಸೆ ಈಡೇರಿಸಿರಲಿಲ್ಲ. ಈ ಮೊದಲು ಬಿಜೆಪಿಯವರು ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದಿದೆ. ಈಗ ಅವುಗಳನ್ನು ಈಡೇರಿಸುತ್ತಿದೆ. ಇದು ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದರು.




