ಜೈನ ಮುನಿ ಹತ್ಯೆ ಪ್ರಕರಣ: ಆಡಳಿತ – ಪ್ರತಿಪಕ್ಷಗಳ ನಡುವೆ ವಾಗ್ವಾದ

3 years ago

#Jain #Muni #murder #case #Clash #between #administration #opposition

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜೈನಮುನಿ ಹತ್ಯೆಯ ಆರೋಪಿಗಳ ಹೆಸರನ್ನು ಹೇಳಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ತನಿಖೆಯ ವೈಖರಿ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್‍ಪಾಟೀಲ್ ಆಪಾದಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಯ ಘಟನೆಯಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈವರೆಗೂ ಒಬ್ಬರ ಹೆಸರನ್ನು ಮಾತ್ರ ಹೇಳುತ್ತಿದ್ದು, ಮತ್ತೊಬ್ಬರ ಹೆಸರನ್ನು ಹೇಳಲು ಹಿಂದೇಟು ಹಾಕಲಾಗುತ್ತಿದೆ ಯಾಕೆ ಈ ಧೋರಣೆ ಎಂದು ಪ್ರಶ್ನಿಸಿದರು.

ಹತ್ಯೆಯ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಹತ್ಯೆಯ ಹಿಂದೆ ಹಲವು ಕಾಣದ ಕೈಗಳು ಕೆಲಸ‌ ಮಾಡಿರುವ ಶಂಕೆಯಿದೆ ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸದ್ಯ ಪ್ರಕರಣದ ತನಿಖೆಯ ವೈಖರಿ ಗಮನಿಸಿದರೆ ನಮಗೆ ರಾಜ್ಯ ಪೊಲೀಸರಿಂದ ನಡೆಯುವ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಹೇಳಿದರು.


ಸ್ವಾಮೀಜಿಯವರು ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ. ನಮಗೆ ಗೊತ್ತಿರುವಂತೆ ಜೈನಮುನಿಗಳು ಸರ್ವ ಸಂಘ ಪರಿತ್ಯಾಗಿಗಳು. ಅಂಥವರು ಬಡ್ಡಿ ವ್ಯವಹಾರ ಮಾಡುತ್ತಿದ್ದರು, 41 ಎಕರೆ ಜಮೀನು ಹೊಂದಿದ್ದರು ಎಂದು ಹೇಳುತ್ತಿರುವುದು ಸರಿಯಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೇಳಿದರು.

ಐಸಿಸ್ ಉಗ್ರರ ನಂಟು: ಇದೇ ವೇಳೆ ಜೈನಮುನಿ ಹತ್ಯೆ ಪ್ರಕರಣದ ಹಿಂದೆ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಸಂಘಟನೆ ಚಿತಾವಣೆ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಗಂಭೀರ ಆರೋಪ ಮಾಡಿದರು.

ಹಂತಕರು‌ ಜೈನ ಮುನಿಗಳಿಗೆ ವಿದ್ಯುತ್ ಶಾಕ್ ಕೊಟ್ಟು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಭವಿಷ್ಯದಲ್ಲಿ ಇನ್ನೂ ಭಯಾನಕ ಘಟನೆಗಳು ನಡೆಯುವ ಆತಂಕ ಇದೆ ಎಂದು ಹೇಳಿದರು. 

ಘಟನೆಯ ಹಿಂದೆ ಐಸಿಸ್ ಉಗ್ರರ ಚಿತಾವಣೆ ಇರುವ ಶಂಕೆಯಿದ್ದು, ಸರ್ಕಾರದ ತನಿಖೆಯ ನಡೆ ಸಂಶಯಾಸ್ಪದವಾಗಿದೆ. ಸರ್ವ ಸಂಘ ಪರಿತ್ಯಾಗಿಗಳಾದ ಮುನಿಗಳ ಹತ್ಯೆಯ ಹಿಂದೆ ದೊಡ್ಡ ಪ್ರಮಾಣದ ಪಿತೂರಿ ಇದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಮುನಿಗಳು ಆರ್ಥಿಕ ವ್ಯವಹಾರ ಮಾಡುವ ಸಾಧ್ಯತೆ ಇಲ್ಲ. ಸಂಸ್ಕಾರ ಕೊಡುವ ಮುನಿಗಳ ಸಾವಿನ ಹಿಂದೆ ಆರ್ಥಿಕ ವ್ಯವಹಾರ ಇದೆ ಎಂದು ಹೇಳುವ ಮೂಲಕ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದೆ ಎಂದು ಆರೋಪಿಸಿದರು.

ಬಿಜೆಪಿ ರಾಜಕೀಯ: ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಜೈನ ಮುನಿ ಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಹತ್ಯೆ ಪ್ರಕರಣದ ಬಗ್ಗೆ ರಾಜ್ಯ ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ. ನಮ್ಮ ಪೊಲೀಸರಿಗೆ ಎಲ್ಲಾ ರೀತಿಯ ಸಾಮರ್ಥ್ಯ ಇದೆ. ಬಿಜೆಪಿಯವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಹೇಳುತ್ತಿರುವುದು ರಾಜ್ಯ ಪೊಲೀಸರ ಸಾಮರ್ಥ್ಯವನ್ನು ಅಪಮಾನಿಸಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply