ಬೆಂಗಳೂರು: ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೊಳಿಸಿದ ಭಾಗ್ಯಗಳ ಯೋಜನೆಗಳನ್ನು ಮತ್ತೊಮ್ಮೆ ಮರು ಜಾರಿಗೊಳಿಸುವುದಾಗಿ 14ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ನವೋದ್ಯಮ ಎಂಬ ಹೊಸ ಯೋಜನೆಯಡಿ 100 ಕೋಟಿ ಒದಗಿಸುವುದಾಗಿ ಪ್ರಕಟಿಸಿದರು.
ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ನಂದಿನಿ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ರೂಪಿಸಲು 10 ಕೋಟಿ ಒದಗಿಸಲಾಗುವುದು.
ಹಿಂದುಳಿದ ತಾಲ್ಲೂಕುಗಳ ನೂರು ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯ ಧನ ನೀಡುವುದಾಗಿ ಹೇಳಿದರು.
ಗೋದಾಮು, ಶೀಥಲಗೃಹ ನಿರ್ಮಾಣ ಮತ್ತು ಇತರೆ ಮೂಲಕ ಸೌಲಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ.20ರಷ್ಟು ಅಂದರೆ ಒಂದು ಕೋಟಿ ಮೀರದಂತೆ ಮೂಲ ಬಂಡವಾಳ ಒದಗಿಸಲಾಗುವುದು.ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಫೆಕ್ ಸಂಸ್ಥೆ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು ಐದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಿ ಇವುಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಉದ್ದೇಶಿಸಿದ್ದು, ಪ್ರಸ್ತಕ ಸಾಲಿನಲ್ಲಿ 100 ಹಬ್ಗಳನ್ನು ಸ್ಥಾಪಿಸಲು 50 ಕೋಟಿ ಒದಗಿಸುವುದಾಗಿ ಹೇಳಿದರು.
ಅನುಗ್ರಹ ಯೋಜನೆ: ಅನ್ನದಾತರ ಆದಾಯದ ಮೂಲವಾಗಿರುವ ಹಸು, ಎಮ್ಮೆ, ಕುರಿ, ಮೇಕೆ ಅಕಾಲಿಕ ಮರಣವಾದರೆ ಇವುಗಳ ಪಾಲಕರಿಗೆ ನೆರವು ಕಲ್ಪಿಸಲು ಅನುಗ್ರಹ ಯೋಜನೆ ರೂಪಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಇದನ್ನು ರದ್ದುಪಡಿಸಿದ್ದು ಈಗ ಮತ್ತೆ ಮರು ಜಾರಿಗೊಳಿಸಲಾಗುವುದು.
ಸಾಂಕ್ರಾಮಿಕ ಕಾಯಿಲೆಗಳಿಂದ ಹಸು ಹಾಗೂ ಎಮ್ಮೆ ಮೃತಪಟ್ಟರೆ 10 ಸಾವಿರ ಹಾಗೂ ಕುರಿ-ಮೇಕೆ ಸಾವನ್ನಪ್ಪಿದರೆ 5 ಸಾವಿರ ಸಹಾಯ ಧನ ನೀಡಲಾಗುವುದು. ಇದರಿಂದ ಹೈನೋದ್ಯಮಕ್ಕೆ ಉತ್ತೇಜನ ಸಿಕ್ಕಂತ್ತಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಯೋಜನೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದರು.
ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಚಿಕ್ಕಮಗಳೂರು, ಕೊಡಗು ಮತ್ತು ಬಾಬಾಬುಡನ್ಗಿರಿಯ ಅರೆಬಿಕ್ ಕಾಫಿ ಜಿಐ ಟ್ಯಾಗ್ ಹೊಂದಿದ್ದು, ಉತ್ಪಾದನೆ, ಸಂಶೋಧನೆ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ತೋಟಗಾರಿಕೆ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲು ಐದು ಕೋಟಿ ರೂ. ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ, ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗೆ 8 ಶೀಥಲ ಘಟಕಗಳನ್ನು ನಿರ್ಮಿಸಲಾಗುವುದು. ರಾಜ್ಯದ ಕಾಫಿಯನ್ನು ಹೆಚ್ಚು ಜನಪ್ರಿಯಗೊಳಿಸಲು ಕಾಫಿ ಇಕೋ ಟೂರಿಸಂ ಅನ್ನು ಉತ್ತೇಜಿಸಲು ಕರ್ನಾಟಕದ ಕಾಫಿ ಬ್ರಾಂಡಿಂಗ್ ಮಾಡಲು ಕ್ರಮ ವಹಿಸಲಾಗುವುದು. ವಾಣಿಜ್ಯ ಹೂವಿನ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ ಹೊಂದುವ ಸಾಮರ್ಥ್ಯವಿದ್ದು, ತಳಿಗಳನ್ನು ಆಮದು ಮಾಡಿಕೊಂಡು ರೈತರಿಗೆ ಕೈಗೆಟಕುವ ದರದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.




