ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಮತ್ತು ವಿಪಕ್ಷಗಳ ಮಾತಿನ ವಾಕ್ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಮೊದಲ ದಿನ ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜು. 7 ರಂದು ತಮ್ಮ ದಾಖಲೆಯ 14 ನೇ ಬಜೆಟ್ ಮಂಡಿಸಲಿದ್ದಾರೆ. ಇನ್ನೂ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿನ ಗೊಂದಲ, ಮತಾಂತರ ಕಾಯ್ದೆ, ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ವಿಚಾರ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪವಾಗುವ ಮೂಲಕ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೇ ವಿಧಾನ ಮಂಡಲದ ಅಧಿವೇಶನ ಇದಾಗಿದ್ದು, ಮೊದಲ ಅಧಿವೇಶನದಲ್ಲಿ ನೂತನ ಸದಸ್ಯರುಗಳ ಪ್ರಮಾಣವಚನ ಹಾಗೂ ನೂತನ ಸಭಾಧ್ಯಕ್ಷರ ಆಯ್ಕೆಗಷ್ಟೇ ಅಧಿವೇಶನ ಸೀಮಿತವಾಗಿತ್ತು. ಇಂದಿನಿಂದ ಆರಂಭವಾಗಲಿರುವ ಅಧಿವೇಶನ ಜುಲೈ 14 ರವರೆಗೂ ನಡೆಯಲಿದೆ.
ಸದನದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಗೊಂದಲ ಸೇರಿದಂತೆ ಕಾಯ್ದೆಗಳ ರದ್ದತಿಯನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸನ್ನದ್ಧವಾಗಿವೆ. ಇದರ ಜತೆಗೆ ಕಾಯ್ದೆಗಳ ರದ್ದತಿಗೆ ವಿರೋಧ ವ್ಯಕ್ತಪಡಿಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ.
ವಿಪಕ್ಷಗಳ ವಾಗ್ದಾಳಿಯನ್ನೆದುರಿಸಲು ಆಡಳಿತ ಪಕ್ಷವಾದ ಕಾಂಗ್ರೆಸ್ ಸಹ ಸರ್ವ ಸನ್ನದ್ಧವಾಗಿದ್ದು, ಪ್ರತಿಪಕ್ಷಗಳ ಅಸ್ತ್ರಕ್ಕೆ ತನ್ನದೇ ಆದ ಅಸ್ತ್ರಗಳನ್ನು ಸಿದ್ಧಪಡಿಸಿದ್ದು, ಹಿಂದಿನ ಸರ್ಕಾರದಲ್ಲಿ ಆದ ಹಗರಣಗಳನ್ನು ತನಿಖೆಗೊಳಪಡಿಸುವ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಯನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡಲಿದೆ.




