ಎರಡು ಭಿನ್ನ ಜಗತ್ತುಗಳ ನಡುವೆ…..
ಕೊಲೆ ಮತ್ತು ಕಗ್ಗೊಲೆ

3 years ago

#Between #two #different #worlds #Murder #massacre

ಐದು ಜನ ಉತ್ತರ ಅಟ್ಲಾಂಟಿಕ್ ಸಾಗರದ ಗರ್ಭದಲ್ಲಿ ಜಲಸಮಾಧಿಯಾಗಿ ಹೋಗಿದ್ದಾರೆ. ಹೆಚ್ಚೂಕಮ್ಮಿ ನೂರು ವರ್ಷಗಳಷ್ಟು ಹಿಂದೆ ದುರಂತ ಅಂತ್ಯಕ್ಕೀಡಾಗಿ ಸಾಗರ ತಳ ಸೇರಿದ್ದ ಟೈಟಾನಿಕ್ ಎಂಬ ನಿಗೂಢ ವಿಸ್ಮಯದ ಪಳೆಯುಳಿಕೆಗಳನ್ನು ಕಣ್ಣಾರೆ ಕಾಣುವುದಕ್ಕೆಂದು ಹೊರಟವರು ಅವರು. ಅವರನ್ನು ಹೊತ್ತಿದ್ದ ‘ಓಶಿಯನ್ ಗೇಟ್ ಟೈಟನ್ ಎಂಬ ಪುಟಾಣಿ ಸಬ್‌ಮೆರೀನ್, ಸಾಗರ ಮೇಲ್ಮೈನಿಂದ 12,500 ಅಡಿಗಳಷ್ಟು ಆಳಕ್ಕಿಳಿದು ದುರಂತಕ್ಕೀಡಾಯ್ತು. ಕೂಡಲೇ ಈ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿತು. ತನಿಖೆಗೆ ಒತ್ತಾಯಗಳು ಕೇಳಿ ಬಂದವು. ಸಬ್‌ಮೆರೀನ್ ನಿರ್ಮಾಣ ಮಾಡಿದ ಕಂಪನಿಯ ಮೇಲೆ, ಇಂತಹ ಆಳ ಸಾಗರ ಯಾನಗಳನ್ನು ಹಮ್ಮಿಕೊಳ್ಳುವ ಓಶಿಯನ್ ಗೇಟ್ ಸಂಸ್ಥೆಯ ಮೇಲೆ, ಸೂಕ್ತ ಸುರಕ್ಷತಾ ಕ್ರಮವಿಲ್ಲದೆ ಇಂತಹ ಮುಳುಗು ಯಾನಕ್ಕೆ ಅನುಮತಿ ಕೊಟ್ಟ ಅಮೆರಿಕಾದ ಕೋಸ್ಟ್ ಗಾರ್ಡ್ ಮೇಲೆ ಒತ್ತಡ ದಟ್ಟೈಸುತ್ತಲೇ ಇದೆ. ಆ ಸಬ್‌ಮೆರೀನ್‌ನಲ್ಲಿ ಇದ್ದದ್ದು ಸ್ವತಃ ಓಶಿಯನ್ ಗೇಟ್ ಸಂಸ್ಥೆಯ ಸ್ಥಾಪಕ-ಸಿಇಒ ಸ್ಟಾಕ್ಟನ್ ರಶ್, ಫ್ರೆಂಚ್ ಮುಳುಗುತಜ್ಞ ಪೌಲ್ ಹೆನ್ರಿ ನಾರ್ಗಿಯೋಲೆಟ್, ಖ್ಯಾತ ಬ್ರಿಟಿಷ್ ಬಿಸಿನೆಸ್‌ಮನ್ ಹ್ಯಾಮಿಶ್ ಹಾರ್ಡಿಂಗ್, ಪಾಕಿಸ್ತಾನದ ಬಿಲಿಯನೇರ್ ಶಹಜಾದ್ ದಾವೂದ್ ಮತ್ತು ಅವನ ಮಗ ಸುಲೇಮಾನ್ ದಾವೂದ್. ಎಲ್ಲರೂ ಕೋಟ್ಯಧಿಪತಿಗಳು!

ಹನ್ನೆರಡೂವರೆ ಸಾವಿರ ಅಡಿ ಆಳದಲ್ಲಿ ಅಸುನೀಗಿದ ಅವರ ಬಗ್ಗೆ ಜಗತ್ತು ವಿಷಾದದ ಹೊಳೆ ಹರಿಸುತ್ತಿದೆ. ನಾವು ಕೂಡಾ ಅಲ್ಲಿಂದ ಬರುವ ಹೊಸಹೊಸ ಸುದ್ದಿಗಳಿಗಾಗಿ ಕುತೂಹಲಗೊಂಡು ಕಾಯುತ್ತಿದ್ದೇವೆ. ಆದರೆ ಇದೇ ವಿಷಾದ, ಇದೇ ಕುತೂಹಲ, ಇದೇ ಮರುಕ ನಮ್ಮ ಮನೆಯ ಪಕ್ಕದಲ್ಲೇ, ನಮ್ಮ ಬೀದಿಯ ಮಧ್ಯದಲ್ಲೇ ಮ್ಯಾನ್‌ಹೋಲ್‌ಗಳೆಂಬ ವಿಷದ ಬಾವಿಗಿಳಿದು ಸಾವಿಗೀಡಾಗುತ್ತಿರುವ ಪೌರಕಾರ್ಮಿಕರ ಬಗ್ಗೆ ನಮಗಿದೆಯೇ? ಖಂಡಿತ ಇಲ್ಲ! ಯಾಕೆಂದರೆ, ಇವರ‍್ಯಾರೂ ಆ ಐವರಂತೆ ಕೋಟ್ಯಧಿಪತಿಗಳಲ್ಲ, ಮೀಡಿಯಾಗಳ ಪಾಲಿಗೆ ಟಿಆರ್‌ಪಿ ಸರಕಲ್ಲ!!

2013ರಲ್ಲಿ ಮನುಷ್ಯರಿಂದ ಹೊಲಸುಗುಂಡಿಗಳ ಸ್ವಚ್ಛತೆಯಂತಹ ಅನಿಷ್ಟ ಕ್ರೌರ್ಯವನ್ನು ಕೊನೆಗಾಣಿಸಬೇಕೆಂದು ಆಗಿನ ಯುಪಿಎ ಸರ್ಕಾರ ಆ ಪದ್ಧತಿಯನ್ನು ರದ್ದು ಮಾಡುವ ಶಾಸನ ರೂಪಿಸಿತು. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಇವತ್ತಿಗೂ ಮನುಷ್ಯರು ಮ್ಯಾನ್‌ಹೋಲ್‌ಗಳಿಗೆ ಇಳಿದು ಸ್ವಚ್ಛ ಮಾಡುವ ಕೆಟ್ಟ ಪದ್ಧತಿ ರೂಢಿಯಲ್ಲಿದೆ. ಈ ಕೆಲಸ ಮಾಡುವವರೆಲ್ಲ ದಲಿತರು, ಶೋಷಿತ ಸಮುದಾಯದವರು. ಹಾಗಾಗಿಯೇ ಸರ್ಕಾರಗಳಿಗೆ ಇಂಥಾ ನಿರ್ಲಕ್ಷ್ಯವೇ? ಇಲ್ಲಿ, ದಲಿತರ ಜೀವಗಳಿಗೆ ಬೆಲೆಯಿಲ್ಲವೇ?

ಮನುಷ್ಯರನ್ನು ಹೊಲಸುಗುಂಡಿಗಳಿಗೆ ಇಳಿಸುವುದನ್ನು ರದ್ದು ಮಾಡಿದ ಕಾನೂನಿನ ಹೊರತಾಗಿಯೂ 2017ರಿಂದ 2020ರ ಅವಧಿಯಲ್ಲಿ ದೇಶಾದ್ಯಂತ 347 ಪೌರಕಾರ್ಮಿಕರು ಮ್ಯಾನ್‌ಹೋಲ್‌ಗಳಲ್ಲಿ ಉಸಿರುಗಟ್ಟಿ ಸತ್ತುಹೋದದ್ದನ್ನು ಸ್ವತಃ ಕೇಂದ್ರ ಸರ್ಕಾರವೇ ಸಂಸತ್ತಿನ ಮುಂದೆ ಒಪ್ಪಿಕೊಂಡಿದೆ. ಅವರ ಪೈಕಿ ಕರ್ನಾಟಕದಲ್ಲೇ 90 ನತದೃಷ್ಟ ಪೌರಕಾರ್ಮಿಕರು ಹೀಗೆ ಜೀವ ತೆತ್ತಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ರಾಮದಾಸ್ ಅಥಾವಳೆಯವರು ಸಂಸತ್ತಿನಲ್ಲಿ ಒಪ್ಪಿಕೊಂಡಂತೆ ಆ ಕಾಯ್ದೆಯ ಹೊರತಾಗಿಯೂ ದೇಶದಲ್ಲಿ 58, 098 ಮಂದಿ ಹೊಲಸುಗುಂಡಿ ಸ್ವಚ್ಛಗೊಳಿಸುವವರನ್ನು ನಮ್ಮ ಸಮಾಜ ತನ್ನ ಅನುಕೂಲಕ್ಕಾಗಿ, ಅವರ ಅಸಹಾಯಕತೆಯನ್ನು ಬಳಸಿಕೊಂಡು ಸೃಷ್ಟಿಸಿಟ್ಟುಕೊಂಡಿದೆ. ಕರ್ನಾಟಕದಲ್ಲಿ ಅಂತಹ 7,080 ಜನ ಕಂಡವರ ಮನೆಯ ಕಕ್ಕಸು ಸ್ವಚ್ಛ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ತೀರಾ ಇತ್ತೀಚೆಗೆ ದಾವಣಗೆರೆಯಲ್ಲಿ ಸತ್ಯಪ್ಪ ಮತ್ತು ಮೈಲಪ್ಪ ಎಂಬ ಇಬ್ಬರು ದಲಿತ ಕಾರ್ಮಿಕರು ಮ್ಯಾನ್‌ಹೋಲ್‌ಗಳಲ್ಲಿ ಉಸಿರುಗಟ್ಟಿ ಸತ್ತುಹೋದರು.

ಆದರೆ ನಮಗೆ ಇಂತವ್ಯಾವುವೂ ಸುದ್ದಿ ಎನಿಸುವುದಿಲ್ಲ! ಮರುಕ ಹುಟ್ಟಿಸುವುದಿಲ್ಲ! ಕಡೇ ಪಕ್ಷ ಅಸಹಜ ಅಂತಲೂ ಅನ್ನಿಸಿಕೊಳ್ಳುವುದಿಲ್ಲ……. ಯಾಕೆಂದರೆ ಅವರೆಲ್ಲ ಬಡವರು ಹಾಗೂ ದಲಿತರು!!

ನಾವು ಹೆಸರಿಗಷ್ಟೆ ಮನುಷ್ಯರು. ಆದರೆ ಬದುಕಿರುವಷ್ಟು ದಿನ ಮನುಷ್ಯರಂತೆ ಬದುಕಿರುವುದಿಲ್ಲ. ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ಸಿಕ್ಕುಗಳಲ್ಲಿಯೇ ಸವೆದುಹೋಗುತ್ತೇವೆ. ಕಡೇಪಕ್ಷ ಸಾವಿಗೆ ಸಂತಾಪ ತೋರುವಾಗಲಾದರೂ ನಾವು ಮನುಷ್ಯರಾಗುವುದು ಬೇಡವೇ?

ಒಂದುಕಡೆ, ತಂತ್ರಜ್ಞಾನವು ಹಣವಂತರನ್ನು ಸಾಗರದಾಳಕ್ಕೆ ಕೊಂಡೊಯ್ದು ಕೊಂದುಹಾಕುತ್ತಿದ್ದರೆ, ಮತ್ತೊಂದೆಡೆ ಅದೇ ತಂತ್ರಜ್ಞಾನದ ಅಳವಡಿಕೆಯೆಡೆಗಿನ ಅಧಿಕಾರಸ್ಥರ ನಿರ್ಲಕ್ಷ್ಯದಿಂದಾಗಿ ಪುಡಿಗಾಸಿಗಾಗಿ ದಲಿತರನ್ನು ಸಾವಿನ ಬಾವಿಗಿಳಿಸಿ ನಾವೇ ಕೊಂದುಹಾಕುತ್ತಿದ್ದೇವೆ. ಮೊದಲನೇ ಕೊಲೆಯನ್ನು ನೀವು ಆತ್ಮಹತ್ಯೆ ಅಂತ ಬೇಕಾದರೂ ಪರಿಗಣಿಸಬಹುದು. ಯಾಕೆಂದರೆ, ಅದು ಅವರದೇ ಹುಚ್ಚು ಸಾಹಸದ ನಿರ್ಧಾರ. ಓಶಿಯನ್ ಗೇಟ್ ಸಂಸ್ಥೆ ಆಯೋಜಿಸಿಕೊಂಡು ಬಂದಿರುವ ಟೈಟಾನಿಕ್ ಹಡಗಿನ ಪಳೆಯುಳಿಕೆ ನೋಡಿಕೊಂಡು ಬರುವ ಎಂಟು ದಿನಗಳ ಈ ಟ್ರಿಪ್‌ಗೆ ತಲಾ ಒಬ್ಬೊಬ್ಬರಿಗೆ ಎರಡು ಕೋಟಿ ರೂಪಾಯಿ ಟಿಕೇಟ್ ಹಣ ನಿಗದಿ ಮಾಡಲಾಗಿದೆ. ಈಗ ಸತ್ತಿರುವವರು ಆ ರೀತಿ ಎರಡು ಕೋಟಿ ರೂಪಾಯಿ ತೆತ್ತು ಸಾವನ್ನು ಖರೀದಿಸಿದ ನತದೃಷ್ಟರಷ್ಟೆ! ಆದರೆ ಮ್ಯಾನ್‌ಹೋಲ್‌ಗಳಲ್ಲಿ ನಡೆಯುವ ಎರಡನೇ ಬಗೆಯ ಕೊಲೆಯಿದೆಯಲ್ಲ, ಅದು ಇಡೀ ಮನುಷ್ಯತ್ವದ ಕಗ್ಗೊಲೆ!! ಯಾಕೆಂದರೆ ಜಿಜುಬಿ ಐವತ್ತೋ, ನೂರು ರೂಪಾಯಿಗೋ ನಾವು ಅವರನ್ನು ವಿಷದ ಬಾವಿಗಿಳಿಸಿ ಕೊಂದುಹಾಕಿರುತ್ತೇವೆ!

ಕಣ್ಣಿಗೆ ಕಾಣುವ ಜಗತ್ತು ಒಂದೇ ಆದರೂ, ನಾವು ಬದುಕುತ್ತಿರುವ ಜಗತ್ತುಗಳು ಬೇರೆಬೇರೆ. ಹಣವಂತರ ಕಂಫರ್ಟಬಲ್ ಜಗತ್ತಿನಲ್ಲಿ, ಬಡವರ-ದಲಿತರ ಸಾವುಗಳಿಗೆ ಬೆಲೆಯೂ ಇಲ್ಲ, ಮರುಕವೂ ಇಲ್ಲ!

  • ಗಿರೀಶ್ ತಾಳಿಕಟ್ಟೆ

Leave a Reply