ವಿಧಾನಸಭೆ ಚುನಾವಣೆ ಫಲಿತಾಂಶ: ಕಾಂಗ್ರೆಸ್ ನಲ್ಲಿ ಬಿಡುವಿಲ್ಲದ ಚಟುವಟಿಕೆ

3 years ago

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗುವ ಬೆನ್ನಲ್ಲೆ ಕಾಂಗ್ರೆಸ್‍ನಲ್ಲಿ ಬಿಡುವಿಲ್ಲದ ಚಟುವಟಿಕೆಗಳು ನಡೆಯುತ್ತಿವೆ. ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿದ್ದು, ಇಂದು ಬೆಳಗ್ಗೆಯಿಂದ ಅವರ ಮನೆ ಶಕ್ತಿ ಕೇಂದ್ರವಾಗಿತ್ತು. ಬೆಳಗ್ಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಖರ್ಗೆ ಅವರ ಮನೆಗೆ ತೆರಳಿ ಸಮಾಲೋಚನೆ ನಡೆಸಿದರು.
ತಾವು ಸೌಹಾರ್ದಯುತವಾಗಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಹಜವಾಗಿ ರಾಜಕೀಯ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 130 ಸ್ಥಾನಗಳನ್ನು ಪಡೆದು ಜಯ ಗಳಿಸಲಿದೆ ಎಂದು ತಮಗೆ ಮಾಹಿತಿ ಇದೆ. ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆ ಆಧರಿಸಿ ತಾವು ಹೇಳುತ್ತಿಲ್ಲ. ಪಕ್ಷದ ತಳಮಟ್ಟದ ನಾಯಕರ ಅಭಿಪ್ರಾಯ ಆಧರಿಸಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸ ಹೊಂದಿದ್ದೇವೆ ಎಂದರು.

ಬಿಜೆಪಿ ಆಪರೇಷನ್ ಕಮಲ ಸೇರಿದಂತೆ ಏನೆಲ್ಲಾ ಚಟುವಟಿಕೆ ನಡೆಸಬಹುದು ಎಂಬ ಅಂದಾಜುಗಳು ನಮಗೂ ಇವೆ. ಅದಕ್ಕೆ ತಕ್ಕ ಹಾಗೆ ನಾವು ಹುಷಾರಾಗಿ ಇರುತ್ತೇವೆ ಎಂದಿದ್ದಾರೆ.

ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಸಂಸದ ಡಿ.ಕೆ.ಸುರೇಶ್ ಜಂಟಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹಾಜರಿದ್ದು, ಮಹತ್ವದ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

Leave a Reply