ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಇದೀಗ ಎಲ್ಲೆಡೆ ಫಲಿತಾಂಶದ ಕುರಿತ ಲೆಕ್ಕಾಚಾರ ನಡೆದಿದೆ.
ಮತದಾನ ನಂತರ ನಡೆದ ಮತಗಟ್ಟೆ ಸಮೀಕ್ಷೆಗಳಲ್ಲಿ ಅತ್ಯಧಿಕ ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ವರದಿಗಳು ಬಂದಿದ್ದು ಇದೀಗ ಅಧಿಕಾರ ಹಿಡಿಯುವ ಕುರಿತಂತೆ ಚರ್ಚೆಗಳು ಆರಂಭಗೊಂಡಿವೆ.
ಒಂದೆರಡು ಸಮೀಕ್ಷೆಗಳು ಬಿಜೆಪಿಗೆ ಸರಳ ಬಹುಮತ ಕೊಟ್ಟರೆ, ಉಳಿದ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿವೆ.
ಒಂದು ವೇಳೆ ಅತಂತ್ರ ಪರಿಸ್ಥಿತಿ ನಿರ್ಮಾಣ ಆದಲ್ಲಿ, ಅಥವಾ ಅಧಿಕಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ಗೆ ಕೊರತೆ ಉಂಟಾದಲ್ಲಿ ಯಾವ ನಡೆಯನ್ನು ಅನುಸರಿಸಬೇಕು ಎಂಬ ನಿಟ್ಟಿನಲ್ಲಿ ಲೆಕ್ಕಾಚಾರಗಳು ಶುರುವಾಗಿವೆ. ಇದಕ್ಕಾಗಿ ಪ್ಲ್ಯಾನ್ ಎ ಹಾಗೂ ಪ್ಲ್ಯಾನ್ ಬಿಗಳನ್ನು ಈಗಾಗಲೇ ರಾಜಕೀಯ ನಾಯಕರು ಸಿದ್ಧಪಡಿಸಿಕೊಂಡಿದ್ದಾರೆ.
ಮತಗಟ್ಟೆ ಸಮೀಕ್ಷೆಗಳು ಬಹುತೇಕ ಕಾಂಗ್ರೆಸ್ ಪರವಾಗಿ ಫಲಿತಾಂಶವನ್ನು ನೀಡಿವೆ. ಸಹಜವಾಗಿ ಇದು ಕಾಂಗ್ರೆಸ್ ಪಾಳಯದಲ್ಲಿ ಹುಮ್ಮಸ್ಸನ್ನು ಹೆಚ್ಚಿಸಿದೆ. ಆದರೂ ಅತಂತ್ರದ ಆತಂಕ ತಪ್ಪಿದ್ದಲ್ಲ. ಫಲಿತಾಂಶ ಸಮೀಕ್ಷೆಯಲ್ಲಿ ಪ್ರಕಟಗೊಂಡಂತೆಯೇ ಆಗಬೇಕಿಲ್ಲ. ಇದಕ್ಕೆ ವ್ಯತಿರಿಕ್ತವಾಗಿಯೂ ಬರಬಹುದು. ಬಿಜೆಪಿಯೂ ಈ ನಿಟ್ಟಿನಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಮಾಡಿಕೊಳ್ಳುತ್ತಿದೆ.
ಪ್ರಮುಖವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಗಮನ ಕೇಂದ್ರೀಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದರೆ ಹಿರಿಯ ನಾಯಕರಾದ ಡಾ. ಪರಮೇಶ್ವರ್ ಮತ್ತು ಎಂ.ಬಿ. ಪಾಟೀಲ್ ತೆರೆಮರೆಯಲ್ಲಿ ಬೇರೊಂದು ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.
ಶೇಕಡವಾರು ಮತದಾನ ಪ್ರಮಾಣ ಹಾಗೂ ವಿವಿಧ ಬೂತ್ ಗಳಲ್ಲಿ ತಮ್ಮ ಅಭ್ಯರ್ಥಿಗಳು ಗಳಿಸಿರುವ ಮತದಾನದ ವಿವರಗಳನ್ನು ಇಟ್ಟುಕೊಂಡು ಸಮೀಕ್ಷೆ ಫಲಿತಾಂಶದ ಬೆನ್ನತ್ತಿದ ನಾಯಕರು ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಗೆಲ್ಲುವ ಅಭ್ಯರ್ಥಿಗಳಿಗೆ ಕರೆ ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಗೆಲುವಿನ ಸಾಧ್ಯತೆ ಬಗ್ಗೆ ಚರ್ಚೆ ನಡೆಸಿರುವ ಉಭಯ ನಾಯಕರು, 50-50 ಇದ್ದ ಕ್ಷೇತ್ರಗಳ ಅಭ್ಯರ್ಥಿಗಳು, ಟಫ್ ಫೈಟ್ ಇದ್ದ ಕ್ಷೇತ್ರಗಳ ಅಭ್ಯರ್ಥಿಗಳು, ಹೈವೋಲ್ಟೇಜ್ ಕ್ಷೇತ್ರಗಳ ಫಲಿತಾಂಶದ ಅಭ್ಯರ್ಥಿಗಳಿಗೆ ಕರೆ ಮಾಡಿ, ಗೆಲ್ಲುವ ಲೆಕ್ಕಾಚಾರ ಹಾಕುತ್ತಿದ್ದಾರೆ.
ಈ ನಡುವೆ, ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಮುನ್ನಡೆ ಬಂದಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಿದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಖರ್ಗೆ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.




