ಬೆಂಗಳೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ನಕಲಿ ಪದವಿ ಪ್ರಮಾಣ ಪತ್ರ ಹಾಗೂ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿ ವಿತರಿಸುತ್ತಿದ್ದ ವ್ಯವಸ್ಥಿತ ಜಾಲವನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಅಪಾರ ಪ್ರಮಾಣದ ದಾಖಲೆ ಮತ್ತು ನಕಲಿ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಕೆಐಒಎಸ್)ಎಂಬ ಸಂಸ್ಥೆ ತೆರೆದು ಎಸ್ಎಸ್ಎಲ್ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿರುವ ಬಗ್ಗೆ ದೂರು ಮತ್ತು ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೋಲಿಸರು ಈ ಕುರಿತಂತೆ ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹುಬ್ಬಳ್ಳಿಯ ವಿದ್ಯಾನಗರದ ಪ್ರಭುರಾಜ ಹೊಸಪೇಟೆ (36), ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್ ಲೇಜೌಟ್ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46), ಮತ್ತು ಅರಕೆರೆಯ ಡಾಕ್ಟರ್ಸ್ ಲೇಜೌಟ್ ನಿವಾಸಿ ಮೊಹಮದ್ ತೈಹಿದ್ ಅಹಮದ್ (30) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 10 ಮತ್ತು ಹನ್ನೆರಡನೇ ತರಗತಿಗೆ ಸಮಾನ ಎಂದು ನಮೂದಿಸಿದ್ದ ಅಂಕಪಟ್ಟಿಗಳು, ವಿದ್ಯಾರ್ಥಿ ನೊಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮತ್ತು ಇತರ ಮಾಹಿತಿಗಳು ವಿವಿಧ ವಿಷಯಗಳ ಅಂಕ ನಮೂದಿಸಿರುವ 70 ಅಂಕ ಪಟ್ಟಿಗಳು ನೊಂದಣಿ ಸಂಖ್ಯೆ ವಿದ್ಯಾರ್ಥಿ ಹೆಸರನ್ನು ನಮೋದಿಸಿ ಅಂಕ ನಮೋದಿಸಿದ 190 ಅಂಕ ಪಟ್ಟಿಗಳು ಖಾಲಿ ಇರುವ 7100 ಅಂಕ ಪಟ್ಟಿಗಳು ಬರೆಯಲು ಕೊಡುವ 5500 ಉತ್ತರ ಪತ್ರಿಕೆಗಳು ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡಿರುವ 25 ಅಡ್ಮಿಷನ್ ರಿಜಿಸ್ಟರ್ಗಳು ನಕಲಿ ಮಾಕ್ಸ್ ಕಾರ್ಡ್ಗಳನ್ನು ಪ್ರಿಂಟ್ ತೆಗೆಯಲು ಬಳಸಿದ್ದ ಕಲರ್ ಪ್ರಿಂಟರ್ ಕಂ ಜೆರಾಕ್ಸ್ ಮಿಷಿನ್ ಹಾಗೂ 4 ಲ್ಯಾಪ್ ಟಾಪ್ಗನ್ನು ವಶಪಡಿಸಿಕೊಳ್ಳಲಾಗಿದೆ.
ವೈಟಿಟಿ ಶಾಲೆಯ ಸಂಸ್ಥಾಪಕರಾದ ಮೈಲಾರಿ ಎಂಬುವವರು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಂಕಪಟ್ಟಿ ಜಾಲದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅಂಕ ಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ನಗರದ ವೈಟಿಟಿ ಇನ್ಸ್ಟಿಟ್ಯೂಟ್ ಸಂಸ್ಥಾಪಕ, ಇಗ್ನೈಟ್ ಗ್ರೂಪ್ ಆಪ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಹಾಗೂ ಕೆಐಒಎಸ್ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಮೀರತ್ ವಿಶ್ವವಿದ್ಯಾಲಯ, ಚರಣ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಬಿಎ ಪದವಿಯ 3 ನಕಲಿ ಅಂಕ ಪಟ್ಟಿಗಳ ಮೈಗ್ರೇಷನ್ ಸರ್ಟಿಫಿಕೇಟ್ ಕಾನ್ವೋಕೇಷನ್ ಸರ್ಟಿಫಿಕೇಟ್ ಕೆಐಒಎಸ್ ಹುಬ್ಬಳ್ಳಿ ಸಂಸ್ಥೆಗೆ ಸೇರಿದ ಒಟ್ಟು 14 ಪಿಯು ಮತ್ತು ಎಸ್ಎಸ್ಲ್ ಸಿ ತತ್ಸಮಾನ ತರಗತಿ ನಕಲಿ ಅಂಕ ಪಟ್ಟಿಗಳು ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸೇರಿದ 4 ನಕಲ ಅಂಕ ಪಟ್ಟಿಗಣನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ.




