ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟ ಮೇಲೂ ಬಿಟ್ಟು ಹೋಗಿದ್ದಾರೆ, ಮುಂದೆ ಅನುಭವಿಸುತ್ತಾರೆ!!!

3 years ago

ಬೆಂಗಳೂರು: ಮಹತ್ವದ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನಿರಾಸೆಯಾಗಲಿದೆ. ಕಾಂಗ್ರೆಸ್ ಅವರನ್ನು ಉಪಯೋಗಿಸಿ ಬಿಸಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ದೇವರಾಜ ಅರಸುರಂತಹ ಜನಪ್ರಿಯ ನಾಯಕರನ್ನೇ ಬಳಸಿ ನಂತರ ಬಿಸಾಡಿದ ಇತಿಹಾಸ ಕಾಂಗ್ರೆಸ್‍ಗಿದೆ. ಇದೇ ರೀತಿ ಶೆಟ್ಟರ್‍ಗೂ ಪರಿಸ್ಥಿತಿ ಬರಲಿದೆ ಎಂದರು.

ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಶೆಟ್ಟರ್ ಅವರನ್ನು ಚೆನ್ನಾಗಿ ಬಳಸಿಕೊಳ್ಳಲಿದೆ. ಎಂತೆಂಥ ನಾಯಕರನ್ನು ಹೇಗೇಗೆ ಬಳಸಿಕೊಂಡು ಬಿಸಾಡಿರುವ ಕಾಂಗ್ರೆಸ್‍ಗೆ ಶೆಟ್ಟರ್ ಯಾವ ಲೆಕ್ಕ. ಈಗ ಪಕ್ಷಕ್ಕೆ ಬಂದಿದ್ದಾರೆಂದು ಅವರನ್ನು ಕೊಂಡಾಡುತ್ತಿದ್ದಾರೆ. ಮೇ 13ರ ಫಲಿತಾಂಶ ಬಂದ ಬಳಿಕ ಇವರ ಪರಿಸ್ಥಿತಿ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಮೊದಲು ಸನ್ಮಾನ, ನಂತರ ಅವಮಾನ. ಇದು ಕಾಂಗ್ರೆಸ್‍ನ ಹುಟ್ಟುಗುಣ. ಇದರಿಂದಾಗಿ ಎಂತೆಂಥ ನಾಯಕರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೊರ ನಡೆದಿದ್ದಾರೆ. ಶೆಟ್ಟರ್ ಅವರು ಇತಿಹಾಸವನ್ನು ಒಮ್ಮೆ ನೋಡಬೇಕಿತ್ತು ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇರುವತನಕ ವೀರಶೈವ ಲಿಂಗಾಯತ ಸಮುದಾಯದವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಅನ್ಯ ಪಕ್ಷಗಳಿಗೆ ಮತ ಹಾಕುವುದಿಲ್ಲ. ಈಗಲೂ ಕೂಡ ನಮ್ಮ ಪಕ್ಷದ ಜತೆ ಅವರು ಭದ್ರವಾಗಿಯೇ ಇದ್ದಾರೆ. ಒಂದಿಬ್ಬರು ಹೋದ ತಕ್ಷಣ ಏನೂ ಆಗುವುದಿಲ್ಲ ಎಂದು ಹೇಳಿದರು.

ಕಳೆದ 25 ವರ್ಷಗಳಿಂದ ಜಗದೀಶ್ ಶೆಟ್ಟರ್‍ಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ, ವಿರೋಧ ಪಕ್ಷದ ನಾಯಕ ಸ್ಥಾನ, ಸಚಿವ ಸ್ಥಾನ, ಮುಖ್ಯಮಂತ್ರಿ, ಕೋರ್ ಕಮಿಟಿ ಪ್ರತಿಯೊಂದು ಸ್ಥಾನಮಾನವನ್ನೂ ಕೊಟ್ಟಿದೆ. ಯಾವುದೇ ಸಂದರ್ಭದಲ್ಲೂ ಅವರನ್ನು ಕಡೆಗಣಿಸಿದ್ದೇವೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷ ಬಿಟ್ಟು ಹೋಗಲು ಇದೊಂದು ನೆಪ ಅಷ್ಟೆ ಎಂದು ಕಿಡಿಕಾರಿದರು.

ರಾಜ್ಯ ಬಿಜೆಪಿ ಉಸ್ತುವಾರಿ, ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟ ಮೇಲೂ ಬಿಟ್ಟು ಹೋಗಿದ್ದಾರೆ ಮುಂದೆ ಅನುಭವಿಸುತ್ತಾರೆ ಎಂದು ಹೇಳಿದರು.

ಲಕ್ಷ್ಮಣ ಸವದಿ ಅವರನ್ನು ಸೋತ ನಂತರವೂ ಉಪಮುಖ್ಯಮಂತ್ರಿ ಮಾಡಲಾಗಿತ್ತು. ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟು ಮಾಡಿದ ಮೇಲೂ ಪಕ್ಷವನ್ನು ಬಿಟ್ಟು ಹೋಗುವ ಮುನ್ನ ಚಿಂತನೆ ಮಾಡಬೇಕಿತ್ತು ಎಂದರು.

ಪಕ್ಷದ ಕಾರ್ಯಕರ್ತರಿಗೂ ಸ್ಥಾನಮಾನ ಸಿಗಬೇಕು. ಬಿಜೆಪಿ ಕಾರ್ಯಕರ್ತರಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ. ಇಬ್ಬರು ಮುಂದಿನ ದಿನಗಳಲ್ಲಿ ಅತ್ಯವಶ್ಯವಾಗಿ ತುಂಬಾ ಪಶ್ಚಾತ್ತಾಪವನ್ನು ಪಡುತ್ತಾರೆ. ಬಿಜೆಪಿ ಪಕ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡುವುದು ತುಂಬಾ ಗೌರವದ ಮಾತಾಗಿದೆ. ಆದರೂ ಅದರಿಂದ ದೂರ ಹೋದವರು ಭವಿಷ್ಯಲ್ಲಿ ತುಂಬಾ ಅನುಭವಿಸಬೇಕಾಗುತ್ತದೆ. ಮುಳುಗುವ ಹಡಗಿನಲ್ಲಿ ಪಯಣ ಎಂದು ಹಂಗಿಸಿದರು.

ಭಾರತೀಯ ಜನತಾ ಪಾರ್ಟಿ, ದೇಶದ ಅತಿ ದೊಡ್ಡ ಪಕ್ಷವಾಗಿದೆ. ಆದರೆ ಇವರೆಲ್ಲಾ ಹೋಗಿರುವ ಕಾಂಗ್ರೆಸ್ ಮುಕ್ತವಾಗುತ್ತಿದೆ, ಕಾಂಗ್ರೆಸ್ ಮುಳುಗುತ್ತಿದೆ. ಇಂತಹ ಪಕ್ಷದಲ್ಲಿ ಹೋಗೋದು ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ ಎಂದರು.

ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಶಕ್ತಿಯ ಆಧಾರದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾವು ಬಹುಮತದೊಂದಿಗೆ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದರು.

Leave a Reply