ಮಂಗಳೂರು: ವಿಧಾನಸಭೆ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲೇ ಬಿಜೆಪಿ ಶಾಸಕರೊಬ್ಬರು ಮಹಿಳೆ ಜೊತೆ ಇರುವ ಅಶ್ಲೀಲ ಫೋಟೋಗಳು ವೈರಲ್ ಆಗಿವೆ. ಅದರಲ್ಲೂ ರಾಜ್ಯದ ಕರಾವಳಿಯ ಶಾಸಕನ ಅಶ್ಲೀಲ ಫೋಟೋ ರಾಜ್ಯ ಬಿಜೆಪಿ ನಾಯಕರನ್ನು ಚಿಂತೆಗೀಡುಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿತ್ತು ಇದರ ಮೂಲವನ್ನು ಪತ್ತೆ ಹಚ್ಚುವಂತೆ ಬಿಜೆಪಿ ನಾಯಕರು ಸೂಚಿಸಿದ್ದಾರೆ ಅಂದ ಹಾಗೆ ಈ ಫೋಟೋದಲ್ಲಿರುವ ಶಾಸಕ ಸಂಜೀವ ಮಠಂದೂರು.
ಪುತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಂದಿಗೆ ಇರುವ ಫೋಟೋಗಳು ವೈರಲ್ ಆಗಿದ್ದು, ಈ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯೊಂದಿಗಿನ ಫೋಟೋ ತಮ್ಮದಲ್ಲ ಎಂದು ಅಲ್ಲಗೆಳೆದಿದ್ದು, ನನ್ನ ಫೋಟೋವನ್ನು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಫೋಟೋವನ್ನು ಯಾರೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಇದೀಗ ಈ ಫೋಟೋವನ್ನು ವೈರಲ್ ಮಾಡುತ್ತಿರುವವ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಪ್ರಕಾರ ಎಫ್ಐಆರ್ ದಾಖಲು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
2018ರಲ್ಲಿ ಬಿಜೆಪಿಯ ಸಂಜೀವ್ ಮಠಂದೂರು ಅವರು ಕಾಂಗ್ರೆಸ್ ನ ಶಕುಂತಳಾ ಶೆಟ್ಟಿ ಅವರನ್ನು 19,477 ಮತಗಳ ಅಂತರದಿಂದ ಮಣಿಸಿದ್ದರು. ಆಗಿನ ಚುನಾವಣೆಯಲ್ಲಿ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಅವರಿಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಇತ್ತಾದರೂ ಕೊನೆ ಕ್ಷಣದಲ್ಲಿ ಬಿಜೆಪಿ ಮಠಂದೂರಿಗೆ ಮಣೆ ಹಾಕಿತ್ತು.
ಇದೀಗ ಸಂಜೀವ ಮಠಂದೂರು ಮತ್ತೊಮ್ಮೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಆದರೆ ಸಂಸದ ಡಿ. ವಿ. ಸದಾನಂದ ಗೌಡ ಅವರ ಆಪ್ತರಾಗಿರುವ ಉದ್ಯಮಿ ಅಶೋಕ್ ರೈ ಈ ಬಾರಿ ಪುತ್ತೂರು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಪುತ್ತೂರು ಬಿಜೆಪಿ ಟಿಕೆಟ್ ಗೆ ಭರ್ಜರಿ ಫೈಟ್ ನಡೆದಿದೆ. ಇದರ ಮಧ್ಯೆ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಫೋಟೋ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.




