ಮಾಮ ಮತ್ತು ದೀಪು: ಮತ್ತೊಂದು ಆಂಗಲ್‌ನಿಂದ…

3 years ago

sudeep Bommai star Campaigner

ಮಾಮ ಮತ್ತು ದೀಪು
ಮತ್ತೊಂದು ಆಂಗಲ್‌ನಿಂದ…

ಇವತ್ತು ಮುಖ್ಯಮಂತ್ರಿಯ ಪಕ್ಕ ಕೂತು ಸುದೀಪ್ ನಡೆಸಿಕೊಟ್ಟ ಸುದ್ದಿಗೋಷ್ಟಿಯಿಂದ ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭ ಸಿಗಲಿದೆಯೋ? ಅಥವಾ ಸುದೀಪ್‌ಗೆ ಎಷ್ಟರಮಟ್ಟಿಗೆ ವೈಯಕ್ತಿಕ ಲುಕ್ಸಾನಾಗಲಿದೆಯೋ? ಗೊತ್ತಿಲ್ಲ. ಯಾಕೆಂದರೆ, ಆತನೊಬ್ಬ ಸಿನಿಮಾ ನಟ ಮಾತ್ರವಲ್ಲ; ಆತನಿಗೊಂದು ಜಾತಿಯೂ ಇದೆ! ಇದನ್ನು ನಾವು ಮರೆಯಬಾರದು.

ಆದಾಗ್ಯೂ, ಇವತ್ತಿನ ಸುದ್ದಿಗೋಷ್ಠಿಯಿಂದ ಒಂದು ವಿಚಾರವಂತೂ ಸ್ಪಷ್ಟವಾಯ್ತು.

ಪತ್ರಕರ್ತರ ಪ್ರಶ್ನೆಗಳಿಗೆ, ಸುದ್ದಿಗೋಷ್ಠಿಯುದ್ದಕ್ಕೂ ’ನನಗೆ ಬೊಮ್ಮಾಯಿ ಮಾಮಾ ಇಷ್ಟ ಹಾಗಾಗಿ ಅವರಿಗೆ ಬೆಂಬಲಿಸುತ್ತಿದ್ದೇನೆ. ಯಾವುದೇ ಪಕ್ಷಕ್ಕಲ್ಲ ಎಂದು ಸರ್ಕಸ್ ಮಾಡುವಾಗ ಆತ ಅನುಭವಿಸುತ್ತಿದ್ದ ಪೇಚಾಟ ಎದ್ದು ಕಾಣುತ್ತಿತ್ತು. ಸುದೀಪ್ ಒಬ್ಬ ಜನಪ್ರಿಯ ನಟ. ಅದಕ್ಕಿಂತಲೂ ಮುಖ್ಯವಾಗಿ ಸ್ವತಂತ್ರವಾಗಿ ಯೋಚಿಸಬಲ್ಲ ವ್ಯಕ್ತಿ. ಆದ್ದರಿಂದ ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಬೆಂಬಲಿಸುವ ಹಕ್ಕು ಆತನಿಗಿರುತ್ತದೆ. ಅದು ಎಷ್ಟರಮಟ್ಟಿಗೆ ಸರಿ, ತಪ್ಪು ಅಂತ ವಿಶ್ಲೇಷಣೆ ಮಾಡುವುದು ನಂತರದ ವಿಷಯ. ಆದರೆ ಆತನಿಗಿರುವ ವ್ಯಕ್ತಿ ಸ್ವಾತಂತ್ರ್ಯದ ಆಯಾಮದಿಂದ ಯಾವುದೇ ಪಕ್ಷವನ್ನು ಬೆಂಬಲಿಸುವುದು ಅವನ ವ್ಯಕ್ತಿಗತ ಹಕ್ಕು.

ಅದನ್ನಾತ ನೇರವಾಗಿ, ದಿಟ್ಟವಾಗಿ ಪತ್ರಕರ್ತರ ಮುಂದೆ ಘೋಷಿಸಬಹುದಿತ್ತು. ಆದರೆ ಆತ ಅಪ್ಪಿತಪ್ಪಿಯೂ ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಹೇಳುವ ಧೈರ್ಯ ಮಾಡದೆ, ಬೊಮ್ಮಾಯಿ ಮಾಮಾನ ಬೊಂಬೆ ತೋರಿಸುತ್ತಾ ಪತ್ರಿಕಾಗೋಷ್ಠಿ ಮುಗಿಸಿದ್ದು ನೋಡಿದರೆ, ಬಿಜೆಪಿ ಒಂದು ಪಕ್ಷವಾಗಿ ಎಷ್ಟರಮಟ್ಟಿಗೆ ಜನವಿರೋಧಕ್ಕೆ ತುತ್ತಾಗಿದೆ ಅನ್ನೋದು ಮನದಟ್ಟಾಗುತ್ತೆ. ಜನವಿರೋಧಿ ಪಟ್ಟ ಕಟ್ಟಿಕೊಂಡ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ನೇರವಾಗಿ ಹೇಳುವ ಮುಖವಿಲ್ಲದೆ ಆತ ’ಮಾಮಾ’ ನೆಪ ಹೇಳಿದ. ಪತ್ರಿಕಾಗೋಷ್ಠಿಯುದ್ದಕ್ಕೂ ಅವನ ಈ ಹೆಣಗಾಟ, ಬಿಜೆಪಿಯ ದುಸ್ಥಿತಿಯನ್ನು ಜಗಜ್ಜಾಹೀರು ಮಾಡಿದೆ.

ಪಾಪಾ, ಅದ್ಯಾವ ಒತ್ತಡ ಅಥವಾ ಬೆದರಿಕೆಗೆ ತುತ್ತಾಗಿ ನಟ ಸುದೀಪ್, ಮಾಮಾನಿಗೆ ಬೆಂಬಲ ಘೋಷಿಸಿದ್ದಾನೋ ಗೊತ್ತಿಲ್ಲ. ಆದರೆ ಬಿಜೆಪಿ ಜೊತೆಗೆ ತನ್ನನ್ನು ತಾನು ಅಲೈನ್ ಮಾಡಿಕೊಳ್ಳಲು ಆತ ಹಿಂದೇಟು ಹಾಕಿದ ಫಜೀತಿಯಿದೆಯಲ್ಲ, ಅದು ಆ ಪಕ್ಷದ ದೈನೇಸಿ ಸ್ಥಿತಿಗೆ ಸಾಕ್ಷಿ.

ಸುದೀಪ್ ನಿರ್ಧಾರದ ಮೇಲಿನ ಅಸಮಾಧಾನದಿಂದ, ಆ ಪತ್ರಿಕಾಗೋಷ್ಠಿಯನ್ನು ಸರಿಯಾಗಿ ಸವಿಯವದವರು, ಬಿಡುವಾದಾಗ ಮತ್ತೊಮ್ಮೆ ಈ ಆಂಗಲ್‌ನಿಂದ ನೋಡಿ, ಸಖತ್ ಮಜಾ ಅನಿಸುತ್ತೆ…..

  • ಮಾಚಯ್ಯ ಎಂ ಹಿಪ್ಪರಗಿ

Leave a Reply